ಚನ್ನರಾಯಪಟ್ಟಣ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಕ್ಕ ಮಾಯಾವತಿಯವರ ಹುಟ್ಟು ಹಬ್ಬದ ಅಂಗವಾಗಿ ಜನ ಕಲ್ಯಾಣ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿ ಎಸ್ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಜಿ ಸೋಮಶೇಖರ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇದೇ ತಿಂಗಳು ಜನವರಿ 15ರಂದು ಅಕ್ಕ ಮಾಯಾವತಿಯವರ ಹುಟ್ಟುಹಬ್ಬವನ್ನು ಎಲ್ಲಾ ವಲಯ ಮಟ್ಟದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ, ಅದರಂತೆ ಹಾಸನ ವಲಯಕ್ಕೆ ಬರುವ ನಾಲ್ಕು ಜಿಲ್ಲೆಗಳಾದ ಹಾಸನ ,ಚಿಕ್ಕಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ಮಂಗಳೂರು,ಸೇರಿದಂತೆ ಹಾಸನ ವಲಯದ ಎಲ್ಲಾ ಜಿಲ್ಲೆಗಳು ಒಳಗೊಂಡಂತೆ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಚನ್ನರಾಯಪಟ್ಟಣದ ಹಳೆ ಬಾಸ್ ನಿಲ್ದಾಣದ ಎದುರು ಇರುವ ಶ್ರೀ ವಿನಾಯಕ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಬೃಹತ್ ವೇದಿಕೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಬೆಳಿಗ್ಗೆ 10 ಗಂಟೆಗೆ ಮಖಾನ್ ಸರ್ಕಲ್ ನಿಂದ, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ನವೋದಯ ವೃತ್ತ, ಆಸ್ಪತ್ರೆ ವೃತ್ತದ ಮೂಲಕ ಆಂಜನೇಯ ದೇವಸ್ಥಾನ ಆವರಣಕ್ಕೆ ತಲುಪಲಿದೆ ಎಂದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಬಿ ಎಸ್ ಪಿ ಪಕ್ಷದ ರಾಷ್ಟ್ರೀಯ ಸಂಯೋಜಕರು ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿಗಳಾದ ರಾಜಾರಾಮ್ ರವರು, ರಾಜ್ಯ ಸಂಯೋಜಕರು ಹಾಗೂ ವಕೀಲರಾದ ಗಂಗಾಧರ್ ಬಹುಜನ್, ಬಿಎಸ್ಪಿ ರಾಜ್ಯಾಧ್ಯಕ್ಷರಾದ ಡಾಕ್ಟರ್ ಎಂ ಕೃಷ್ಣಮೂರ್ತಿ, ಬಿಎಸ್ಪಿ ರಾಜ್ಯ ಉಪಾಧ್ಯಕ್ಷರಾದ ಜಾಕಿರ್ ಹುಸೇನ್, ಹಾಸನ ವಲಯ ಉಸ್ತುವಾರಿಗಳಾದ ಕೆ ಟಿ ರಾಧಾಕೃಷ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್ಪಿ ಪಕ್ಷದ ಹಾಸನ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಕೀರ್ತಿ ವಹಿಸಿಕೊಳ್ಳಲಿದ್ದಾರೆ. ಹಾಸನ ವಲಯದ ನಾಲ್ಕು ಜಿಲ್ಲೆಗಳ ಜಿಲ್ಲಾ ಸಮಿತಿ, ಅಸೆಂಬ್ಲಿ ಸಮಿತಿ, ತಾಲೂಕು ಸಮಿತಿ ,ಎಲ್ಲಾ ಹಂತದ ಪದಾಧಿಕಾರಿಗಳು ಆಗಮಿಸುತ್ತಿದ್ದಾರೆ. ಹಾಗೆಯೇ ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಲು ಚನ್ನರಾಯಪಟ್ಟಣ ತಾಲೂಕಿನ ಎಲ್ಲಾ ಗ್ರಾಮಗಳ ಬಹುಜನ ಬಂಧುಗಳು ತಮ್ಮ ಕೈಲಾದ ತನು ಮನ ಧನ ಅರ್ಪಿಸುವ ಜೊತೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮಕ್ಕೆ ಬಂದು ಈ ಕಾರ್ಯಕ್ರಮವನ್ನು ಯಶಸ್ಸಿ ಗೊಳಿಸಬೇಕು ಎಂದರು.ನಮ್ಮೆಲ್ಲರ ಪೂರ್ವಿಕರು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಳೆದು ತಂದ ವಿಮೋಚನ ರಥವನ್ನು ಮುನ್ನಡೆಸಲು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಇದನ್ನು ಓದು: ಚನ್ನರಾಯಪಟ್ಟಣ: ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯಲ್ಲಿ ವಿವೇಕ ವೈಭವ ಕಾರ್ಯಕ್ರಮ
ಬಿ ಎಸ್ ಪಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಕೀರ್ತಿ ಮಾತನಾಡಿ 2007ರಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಿ ಉತ್ತರ ಪ್ರದೇಶದಲ್ಲಿ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಪರಿಣಾಮಕಾರಿ ಆಡಳಿತ ನೀಡಿರುವ ಮಾಜಿ ಮುಖ್ಯಮಂತ್ರಿ ಬೆಹನ್ ಜೀ ಮಾಯಾವತಿ ಅವರನ್ನು ಬೆಂಬಲಿಸಿ ಎಂದರು.
ಬಿಎಸ್ಪಿ ತಾಲೂಕು ಅಧ್ಯಕ್ಷ ಕುಂದೂರು ರಾಜು ಮಾಸ್ಟರ್ ಮಾತನಾಡಿ ಮಾಯಾವತಿಯವರ ಆಡಳಿತದ ಅವಧಿಯಲ್ಲಿ ಉತ್ತರ ಪ್ರದೇಶದದಲ್ಲಿ ಜಾರಿಗೆ ತಂದ ಭೂ ಸುಧಾರಣೆಗಳಾದ ಭೂರಹಿತರಿಗೆ ಭೂಮಿ ಹಂಚಿಕೆ, ನೀರಾವರಿ ಸೌಲಭ್ಯಗಳು, ವಸತಿ ರಹಿತರಿಗೆ ವಸತಿ ಯೋಜನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ವಿಶ್ವವಿದ್ಯಾಲಯಗಳ ಸ್ಥಾಪನೆ, ಐಎಎಸ್, ಐಪಿಎಸ್, ಐಎಫ್ಎಸ್ ತರಬೇತಿ ಕೇಂದ್ರಗಳ ಸ್ಥಾಪನೆ, ಸರ್ಕಾರಿ ಉದ್ಯೋಗಗಳ ಭರ್ತಿ, ಬ್ಯಾಕ್ಲಾಗ್ ಹುದ್ದೆಗಳ ಭರ್ತಿ, ಪೌರಕಾರ್ಮಿಕರ ಹುದ್ದೆ ಕಾಯಂ, ಎಲ್ಲಾ ಮೇಲ್ಜಾತಿಯ ಬಡವರಿಗೂ ಕೂಡ ಮೀಸಲಾತಿಯಲ್ಲಿ ಪಾಲು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡುವ ಮಹತ್ತರವಾದ ತೀರ್ಮಾನ ಕೈಗೊಂಡಿದ್ದಾರೆ, ಕಾನೂನು ಸುವ್ಯವಸ್ಥೆ ಹದ್ದುಬಸ್ತಿಗೆ ತರಲು ಲಕ್ಷಾಂತರ ಗುಂಡಾಗಳನ್ನು ಜೇಲಿಗಟ್ಟಿ, ಸಮಾಜದಲ್ಲಿ ಶಾಂತಿ ನೆಲಗೊಳಿಸುವಂತೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು. ಇಂತಹ 10 ಹಲವು ಜನಪರ ಯೋಜನೆಗಳು ಇಂದಿಗೂ ಮೈಲುಗಲ್ಲುಗಳಾಗಿವೆ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದಲಿತ ಮಹಿಳೆಯರೊಬ್ಬರು ಈ ಸಾಧನೆ ಮಾಡಿದ್ದಾರೆ, ಇಂತಹ ಸಾಧನೆಯನ್ನು ಸಹಿಸದೆ ಅವರ ಮೇಲೆ ಅನೇಕ ರೀತಿಯ ಸುಳ್ಳು ಆಪಾದನೆಗಳನ್ನು ಆಗಿಂದಾಗೆ ಮಾಡುತ್ತಿರುವುದು ನಾವು ಕಂಡಿದ್ದೇವೆ ಆದರೆ ಅವೆಲ್ಲವೂ ಆಧಾರ ರಹಿತ ಸುಳ್ಳು ಆಪಾದನೆ ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಸಾಬೀತಾಗಿದೆ ಎಂದರು.
ಇಂತಹ ಹಲವಾರು ಜನಪ್ರಿಯ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್ಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಆನೆ ಗುರುತಿಗೆ ಮತಗಳನ್ನು ಹಾಕುವ ಮೂಲಕ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿ ಎಸ್ ಪಿ ಪಕ್ಷವು ಯಾರೊಂದಿಗೋ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾನ್ಸಿರಾಮ್ ಜೀ ಅವರ ಆಶಯದಂತೆ ಜನಸಾಮಾನ್ಯರಿಂದಲೇ ದೇಣಿಗೆ ಸಂಗ್ರಹಿಸಿ ಬಹುಜನ ಸಮಾಜ ಪಕ್ಷವನ್ನು ಗಟ್ಟಿಗೊಳಿಸಿ ಅಧಿಕಾರಕ್ಕೆ ಬಂದು ಜನಸಾಮಾನ್ಯರ ಪರವಾಗಿ ನೀತಿ ನಿಯಮಗಳನ್ನು ರೂಪಿಸಿ, ಜನಪರವಾದ ಆಡಳಿತ ನಡೆಸಿ ಶೋಷಿತ ಸಮುದಾಯಗಳನ್ನು ಮೇಲೆತ್ತುವ ಗುರಿಯೊಂದಿಗೆ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಬಿಎಸ್ಪಿ ಕಾರ್ಯಕರ್ತರು ಭೇಟಿ ನೀಡಿ ದೇಣಿಗೆ ಸಂಗ್ರಹ ಮಾಡಿ ಆ ಹಣವನ್ನು ಬಿಎಸ್ಪಿ ಯ ಕೇಂದ್ರ ಕಚೇರಿಗೆ ಕಳಿಸಿ ಕೊಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಕೀರ್ತಿ, ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಬಿಎಸ್ಪಿ ತಾಲೂಕು ಅಧ್ಯಕ್ಷರಾದ ಕುಂದೂರು ರಾಜು ಮಾಸ್ಟರ್, ಜಿಲ್ಲಾ ಕಾರ್ಯದರ್ಶಿಗಳು ಹಾಗೂ ತಾಲೂಕು ಉಸ್ತುವಾರಿಗಳಾದ ಸಿದ್ಧಲಿಂಗಯ್ಯ, ಬಿಎಸ್ಪಿ ತಾಲೂಕು ಸಂಯೋಜಕರುಗಳಾದ ಸಿ ಎಂ ಶಿವಕುಮಾರ್, ಶಿವಣ್ಣನವರು, ಬಿಎಸ್ಪಿ ತಾಲೂಕು ಕಚೇರಿ ಕಾರ್ಯದರ್ಶಿ ಎ ಟಿ ಸಂತೋಷ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ ಕೆ
