ಚನ್ನರಾಯಪಟ್ಟಣ, ಜುಲೈ 8 – ಜನನಿ ಸೇವಾ ಫೌಂಡೇಶನ್ ಸಂಸ್ಥೆಯ ವತಿಯಿಂದ ಮಂಗಳವಾರ ಬದ್ದಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ (ID ಕಾರ್ಡ್), ಪೆನ್, ಪೆನ್ಸಿಲ್ ಮತ್ತು ನೋಟ್ ಬುಕ್ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಜುನಾಥ್ ಆರ್. ಕುರುವಂಕ, “ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಎಲ್ಲಾ ಮೂಲಭೂತ ಸೌಲಭ್ಯಗಳು ಹಾಗೂ ನುರಿತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಲಭ್ಯವಿದ್ದಾರೆ. ಹೆಚ್ಚುವರಿ ಶುಲ್ಕದ ಭಾರವಿಲ್ಲದ ಈ ಶಾಲೆಗಳು ಖಾಸಗಿ ಶಾಲೆಗಳಿಗೆ ಯಾವುದೇ ರೀತಿಯಲ್ಲೂ ಹಿಂದುಳಿದಿಲ್ಲ. ಇಂತಹ ಶಾಲೆಗಳನ್ನು ಬೆಂಬಲಿಸುವುದು ನಮ್ಮಂತಹ ಸ್ವಸಹಾಯ ಸಂಘಗಳ ಜವಾಬ್ದಾರಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸೋಮಶೇಖರ್ ಮಾತನಾಡಿ, “ಸಂಸ್ಥೆಗಳ ಬೆಂಬಲದಿಂದ ಶಾಲೆಯ ಹಾಜರಾತಿ ಹೆಚ್ಚಿಸುವ ಸಾಧ್ಯತೆ ಇದೆ. ಇಂತಹ ಸಹಕಾರವು ನಮ್ಮಲ್ಲಿ ಹೆಚ್ಚಿನ ಉತ್ಸಾಹವನ್ನು ಮೂಡಿಸುತ್ತದೆ. ಶಿಕ್ಷಣ ವಲಯದಲ್ಲಿ ಉತ್ತಮ ಪ್ರಗತಿಯು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರುದ್ರೇಶ್ ಬಾಲಚಂದ್ರನ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಜೆ, ಕಾರ್ಯದರ್ಶಿ ರಮೇಶ್ ಬಿ.ಎಂ, ಖಜಾಂಚಿ ವಿನೋದ್ ಪ್ರಸಾದ್ ಎಚ್.ಎಮ್, ನಿರ್ದೇಶಕರಾದ ಮಧು ಹಿರಿಸಾವೆ, ಕಾಂತರಾಜು, ದಶರಥ ಮಾದಿಹಳ್ಳಿ, ಅಶ್ವಿನಿ, ಶಿಕ್ಷಕರು ಸತೀಶ್, ಶಿವಾನಂದ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
– ವರದಿ: ಮಂಜುನಾಥ್ ಐ ಕೆ, ಪ್ರತಿನಿಧಿ, ಚನ್ನರಾಯಪಟ್ಟಣ

[…] […]