ಚನ್ನರಾಯಪಟ್ಟಣ: ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಹ್ಯುಮಾನಿಟಿ ವೆಲ್ ನೆಸ್ ಸೆಂಟರ್ ಇವರ ನೇತೃತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಹಾಗೂ ಹಾಸನ ಜನಪ್ರಿಯ ಆಸ್ಪತ್ರೆ ಮತ್ತು ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಸನ ಹಿಮ್ಸ್ ಆಸ್ಪತ್ರೆ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಚನ್ನರಾಯಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಅಬ್ದುಲ್ ಬಶೀರ್ ವಿ.ಕೆಶ್ರೀ ಭರತ್ ಕುಮಾರ್ ಹೆಚ್.ಜಿ ಡಾ. ತೇಜಸ್ವಿನಿ ಮತ್ತು ಮುಸೇಬ ಮತ್ತು ನಾಗಣ್ಣ ಹಾಗೂ ವೇದಿಕೆ ಗಣ್ಯರು ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನದ ಜನಪ್ರಿಯ ಆಸ್ಪತ್ರೆ ಹಾಗೂ ಜನಪ್ರಿಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ವಿ ಕೆ ಬಶೀರ್ ಅಹ್ಮದ್ ಮಾತನಾಡಿ ಇಂದು ಆರೋಗ್ಯ ತಪಾಸಣಾ ಶಿಬಿರವನ್ನು ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಪ್ರಯುಕ್ತ ಆಯೋಜನೆ ಮಾಡಿರುವುದು ತುಂಬಾ ಖುಷಿಯ ವಿಚಾರ, ಸಾರ್ವಜನಿಕರು ಇಂತಹ ಶಿಬಿರಗಳ ಅನುಕೂಲವನ್ನು ಪಡೆದುಕೊಳ್ಳಬೇಕು. ಕಾರಣ ಇಂದು ಮನುಕುಲಕ್ಕೆ ಬಿ.ಪಿ ಶುಗರ್ ನಂತಹ ಮಾರಕ ಕಾಯಿಲೆ ಆವರಿಸುತ್ತಿದೆ, ಈ ಕಾಯಿಲೆಗೆ ಅತಿ ಹೆಚ್ಚು ಔಷಧಿ ತೆಗೆದುಕೊಳ್ಳುವುದರಿಂದ ದಿನ ಕಳೆದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ ಹಾಗೂ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕು ಇಂಥ ಶಿಬಿರಗಳನ್ನು ಉದಾಸೀನ ಮಾಡದೆ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು ಇದರಿಂದ ತಮಗೆ ಮೊದಲ ಹಂತದಲ್ಲೇ ಆರೋಗ್ಯ ಸಮಸ್ಯೆಯನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಕುರಿತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕದ ಚೇರ್ಮನ್ ಎಚ್ ಜಿ ಭರತ್ ಕುಮಾರ್ ಮಾತನಾಡಿ ಹಲವಾರು ಜಿಲ್ಲೆಗಳಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವು ವಿವಾದಾತ್ಮಕವಾಗಿ ನೆರವೇರುತ್ತದೆ. ಇಂತಹ ಸಂದರ್ಭದಲ್ಲಿ ಈ ದಿನ ಹ್ಯುಮಾನಿಟಿ ವೆಲ್ ನೆಸ್ ಸೆಂಟರ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕವು ಸರ್ವ ಧರ್ಮವು ಸಮನ್ವಯ ಎಂಬ ನಿಟ್ಟಿನಲ್ಲಿ ತಾಲ್ಲೂಕಿನ ಸರ್ವರಿಗೂ ಉಚಿತ ಆರೋಗ್ಯ ತಪಾಸಣಾ ನಡೆಸುವ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಈ ಶಿಬಿರದಲ್ಲಿ ಉಚಿತವಾಗಿ ಬಿ.ಪಿ ಶುಗರ್, ಕಣ್ಣಿನ ತಪಾಸಣೆ, ಹೃದಯ ತಪಾಸಣೆ, ಮೂಳೆ ಹಾಗೂ ಕೀಲು ತಪಾಸಣೆ, ದಂತ ತಪಾಸಣೆ, ಮಕ್ಕಳ ತಜ್ಞರು, ನರರೋಗ ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಫಿಜಿಷಿಯನ್, ಶಸ್ತ್ರಚಿಕಿತ್ಸೆ ತಜ್ಞರು ಹಾಗೂ ಇತರೆ ಕಾಯಿಲೆಗಳಿಗೆ ವೈದ್ಯರು ಲಭ್ಯವಿರುವಂತೆ ಮತ್ತು ಉಚಿತ ಔಷಧಿಯನ್ನು ನೀಡುವ ವ್ಯವಸ್ಥೆಯನ್ನು ಈ ಸಂಸ್ಥೆಗಳು ಆಯೋಜಿಸಿದ್ದು 283 ಸಾರ್ವಜನಿಕರು ಇದರ ಅನುಕೂಲವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು,
ಈ ಕಾರ್ಯಕ್ರಮವನ್ನು ಉದ್ದೇಶಿಸಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ತೇಜಸ್ವಿನಿ ಮಾತನಾಡಿ ಚನ್ನರಾಯಪಟ್ಟಣ ಇಂದು ನಮ್ಮ ತಾಲ್ಲೂಕಿಗೆ ಹಲವಾರು ಗ್ರಾಮೀಣ ಭಾಗದ ಸಾರ್ವಜನಿಕರು ಬರುವುದರಿಂದ ಅವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ತುಂಬಾ ಅನುಕೂಲವಾಗಿದೆ ಹಾಗೂ ಈ ಶಿಬಿರದಲ್ಲಿ ಹಲವಾರು ಕಾಯಿಲೆಗಳಿಗೆ ಉಚಿತ ತಪಾಸಣೆಯೊಂದಿಗೆ ಉಚಿತ ಔಷಧಿಯನ್ನು ವ್ಯವಸ್ಥೆ ಮಾಡಿರುವುದು ಖುಷಿಯ ವಿಚಾರ ಹಾಗೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಶಿಬಿರದ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ತಾಲ್ಲೂಕಿನಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಸೇಬ್ರವರು ಈ ಕಾರ್ಯಕ್ರಮವು ವೈಯಕ್ತಿಕವಾಗಿ ನಮಗೆ ಬಹಳ ಖುಷಿ ಕೊಟ್ಟಿದೆ ಕಾರಣ ಸರ್ವ ಧರ್ಮವನ್ನು ಜೊತೆಗೂಡಿ ಬೃಹತ್ ಆರೋಗ್ಯ ಶಿಬಿರವನ್ನು ನಡೆಸುತ್ತಿರುವುದು ಎಲ್ಲಾ ಜಿಲ್ಲೆಗಳಿಗೂ ಮಾದರಿಯಾಗಬೇಕು ಹಾಗೂ ಉಚಿತ ಆರೋಗ್ಯ ಶಿಬಿರಗಳು ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕಿನಲ್ಲಿ ಹೆಚ್ಚಾಗಬೇಕು ಎಂದು ಅಭಿಪ್ರಾಯವನ್ನು ತಿಳಿಸಿದರು,
ಈ ಸಂದರ್ಭದಲ್ಲಿ ಮಾತೃಭೂಮಿ ವೃದ್ಧಾಶ್ರಮದ ಮುಖ್ಯಸ್ಥರಾದ ನಾಗಣ್ಣ ಮಾತನಾಡಿ ಈ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ ಎಂದು ಭಾವಿಸುತ್ತೇನೆ ಕಾರಣ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುತ್ತಿರುವುದು ಖುಷಿಯ ವಿಚಾರ, ಈ ಕಾರ್ಯಕ್ರಮವನ್ನು ಆಯೋಜಿಸಿದ ಹ್ಯುಮಾನಿಟಿ ವೆಲ್ ನೆಸ್ ಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣದ ಸರ್ವ ಸದಸ್ಯರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು.
ಇದನ್ನು ಓದಿ : ಹೊರನಾಡು : ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿದುಷಿ ಡಾ. ಸ್ವಾತಿ ಪಿ ಭಾರದ್ವಾಜ್ ತಂಡದಿಂದ ಅಮೋಘ ಭರತನಾಟ್ಯ
ಕಾರ್ಯಕ್ರಮದ ಉಪಸ್ಥಿತಿ ಶ್ರೀ ಬಿಲಾಲ್ ಅಧ್ಯಕ್ಷರು ಹ್ಯುಮಾನಿಟಿ ವೆಲ್ ನೆಸ್ ಸೆಂಟರ್ ಚನ್ನರಾಯಪಟ್ಟಣ, ಶ್ರೀ ಇಮ್ರಾನ್ ಸಹರಾ ಫೌಂಡೇಶನ್ ಚನ್ನರಾಯಪಟ್ಟಣ, ಕುಮಾರಿ ಅಫೀಫ, ಡಾ. ಪವನ್ ಮಕ್ಕಳ ತಜ್ಞರು ಚನ್ನರಾಯಪಟ್ಟಣ, ಶ್ರೀಮತಿ ಅನಿತಾ ಬಿ.ಹೆಚ್.ಇ.ಓ ಚನ್ನರಾಯಪಟ್ಟಣ, ಡಾ. ಫೈಝಲ್ ಜನಪ್ರಿಯ ಆಸ್ಪತ್ರೆ, ಹಾಸನ, ಡಾ.ಶ್ರೇಯಸ್ ಹಿಮ್ಸ್ ಆಸ್ಪತ್ರೆ ಹಾಸನ, ಡಾ. ಅತೀಶ್ ಕುಮಾರ್ ಹಿಮ್ಸ್ ಆಸ್ಪತ್ರೆ ಹಾಸನ , ಡಾ. ನಿಸರ್ಗ ಹಿಮ್ಸ್ ಆಸ್ಪತ್ರೆ ಹಾಸನ, ಡಾ. ರಂಜಿತ ಆಸ್ಪತ್ರೆ ಹಾಸನ, ಡಾ. ಅವನಿ ಹಿಮ್ಸ್ ಆಸ್ಪತ್ರೆ ಹಾಸನ, ಡಾ. ವೈಷ್ಣವಿ ಆಸ್ಪತ್ರೆ ಹಾಸನ, ಡಾ.ರಾಣಿ ಹಿಮ್ಸ್ ಆಸ್ಪತ್ರೆ ಹಾಸನ, ಡಾ.ಹರ್ಷ ಹಿಮ್ಸ್ಆಸ್ಪತ್ರೆ ಹಾಸನ, ಹಾಗೂ ಚಂದನ್ , ಜನಪ್ರಿಯ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಹ್ಯುಮಾನಿಟಿ ವೆಲ್ ನೆಸ್ ಸೆಂಟರ್ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
– ಮಂಜುನಾಥ್ ಐ ಕೆ
