ಚನ್ನರಾಯಪಟ್ಟಣ: ಸೌಜನ್ಯಗೌಡಳ ಪರ ಹೋರಾಟ ನಡೆಸುತ್ತಿದ್ದ ಹಿಂದೂ ಹೋರಾಟಗಾರ ಮಹೇಶ್ ತಿಮ್ಮರೋಡಿ ಅವರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿ, ಅವರು ಕಳೆದ 13 ವರ್ಷಗಳಿಂದ ನಿರಂತರವಾಗಿ ಸೌಜನ್ಯಗೌಡಳ ಪರ ಹೋರಾಟ ನಡೆಸುತ್ತಿದ್ದ ಮಹೇಶ್ ಅವರನ್ನು ಏಕಾಏಕಿ ಬಂಧಿಸುವುದು ನಿರೀಕ್ಷೆಗೆ ವಿರೋಧವಾಗಿದೆ ಎಂದು ತಿಳಿಸಿದ್ದಾರೆ.
ನಾಗರತ್ನಮ್ಮ ಅವರು, ಧರ್ಮಸ್ಥಳದ ಹೆಣ್ಣು ಮಗಳ ಪರ ಧ್ವನಿ ಎತ್ತುವ ಹೋರಾಟಗಾರರನ್ನು ಬಂಧಿಸುವ ಮೂಲಕ ಹೋರಾಟಗಾರರನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಅವರು ಮಹೇಶ್ ತಿಮ್ಮರೋಡಿಯನ್ನು ತಕ್ಷಣ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಯುವ ಬಗ್ಗೆ ಎಚ್ಚರಿಸಿದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಕುಮಾರ್ ಗೌಡ, ಜಿಲ್ಲಾಧ್ಯಕ್ಷ ಮಡಬ ವಿಜಯ್ ಕುಮಾರ್, ತಾಲ್ಲೂಕು ಅಧ್ಯಕ್ಷ ಮಡಬ ಮಂಜು, ತಾಲ್ಲೂಕು ಉಪಾಧ್ಯಕ್ಷ ಹನುಮಂತರಾಜು ಹಾಗೂ ಇತರರು ಹಾಜರಿದ್ದರು.
