ಚನ್ನರಾಯಪಟ್ಟಣ: ಪಟ್ಟಣದ ಪುರಸಭೆ ವತಿಯಿಂದ ಗುರುಭವನದಿಂದ ಹೇಮಾವತಿ ಕಚೇರಿವರೆಗೆ ಬಿ.ಎಂ ರಸ್ತೆ ವಿಭಜಕ (ಡಿವೈಡರ್) ಕಾಮಗಾರಿ ಅವೈಜ್ಞಾನಿಕವಾಗಿದ್ದು, ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಗಳ ಮಧ್ಯೆ ನಿರ್ಮಿಸಲಾಗುತ್ತಿರುವ ಡಿವೈಡರ್ಗಳು ವೈಜ್ಞಾನಿಕವಾಗಿ ಮಾಡುತ್ತಿಲ್ಲ, ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಈಗಾಗಲೇ ಚೆನ್ನಾಗಿದ್ದ ರಸ್ತೆಯನ್ನು ಹಾಳು ಮಾಡಲಾಗಿದ್ದು, ಇದರಿಂದ ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ನಂಜುಂಡೇಗೌಡ ಮಾತನಾಡಿ, ಈ ಕುರಿತು ಸೋಮವಾರ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿ ಸಮಸ್ಯೆಗೆ ಸ್ಪಂದಿಸದಿದ್ದರೆ ಬುಧವಾರ ತಾಲೂಕಿನ ಎಲ್ಲಾ ಸಂಘಸಂಸ್ಥೆಗಳು ಮತ್ತು ನಾಗರಿಕರು ಸೇರಿ ರಸ್ತೆ ತಡೆ ನಡೆಸಲಾಗುವುದು. ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜೊತೆಗೆ ಅನಿರ್ಧಿಷ್ಟ ಉಪವಾಸ ಮಾಡುವುದಾಗಿ
ಎಚ್ಚರಿಕೆ ನೀಡಿದರು.

ವಾರ್ಡ್ ನಂ.01ರ ಗುರು ಭವನದ ಹತ್ತಿರದಿಂದ ನವೋದಯ ಶಾಲೆಯ ಸರ್ಕಲ್ವರೆಗೆ ರಸ್ತೆ ಕಾಮಗಾರಿ ಜೊತೆ ಡಿವೈಡರ್ ಕಾಮಗಾರಿ ಮಾಡುತ್ತಿರುವ ಕಾರಣ ರಸ್ತೆ ಅಗಲ ಕಡಿಮೆಯಾಗಿದ್ದು, 3ರಿಂದ 4 ಅಡಿಗಳಷ್ಟು ರಸ್ತೆ ಕಡಿಮೆಯಾಗಿರುವುದರಿಂದ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ ಎಂದು ಆರೋಪಿಸಿದರು. ನಗರ ಯೋಜನಾ ಪ್ರಾಧಿಕಾರದ ಸದಸ್ಯ ರೋಹಿತ್ ಮಾತನಾಡಿ, ಮುಂದಿನ ದಿನಗಳಲ್ಲಿ ಯಾವುದೇ ಅಪಘಾತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆಯವರು ಹೊರಬೇಕಾಗುತ್ತದೆ ಎಂದರು.ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ನಕ್ಷೆ ರೂಪಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಸಿ.ಟಿ. ಅಶೋಕ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ರೋಹಿತ್, ಮಾಜಿ ಪುರಸಭಾ ಸದಸ್ಯ ಹಾಗೂ ಬಿಜೆಪಿ ಮುಖಂಡ ನಂಜುಂಡ ಮೈಮ್, ಕಾಂಗ್ರೆಸ್ ಮುಖಂಡರುಗಳಾದ ದಿಂಡಗೂರು ಶಿವಲಿಂಗೇಗೌಡ, ಟಗರು ರಾಘು, ಶೇಖರ್, ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ.
