ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಹಿರಿಯ ರಾಜಕಾರಣಿಗಳು ಹಾಗೂ ಮಾಜಿ ಕಂದಾಯ ಸಚಿವ ದಿ. ಹೆಚ್.ಸಿ. ಶ್ರೀಕಂಠಯ್ಯ ಜನ್ಮ ಶತಮಾನೋತ್ಸವ ಆಚರಿಸಲು 2026 ಜುಲೈ 18 ರಂದು ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಿ ಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಯುವ ಮುಖಂಡ ಕೆ ಜೆ ಬಾಬು ಪತ್ರಿಕಾ ಘೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾಂಗ್ರೆಸ್ ಮುಖಂಡ ವಡ್ಡರಹಳ್ಳಿ ಅಶೋಕ್ ಮಾತನಾಡಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ಮಂತ್ರಿಗಳಾದ ಎಚ್ ಸಿ ಶ್ರೀಕಂಠಯ್ಯನವರ ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗುವುದು ಹಾಗೂ ಅವರ 100ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ 1 ಲಕ್ಷ ಕ್ಯಾಲೆಂಡರ್ ಗಳನ್ನು ಹಾಸನ ಜಿಲ್ಲೆಯ ಮನೆ ಮನೆಗೆ ಹಂಚಲಾಗುವುದು ಎಂದು ತಿಳಿಸಿದರು. ಹಾಸನ ಜಿಲ್ಲೆಗೆ ಶ್ರೀಕಂಠಯ್ಯನವರ ಕೊಡುಗೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಈ ದಿನ ಪತ್ರಕರ್ತರ ಭವನದಲ್ಲಿ ಶ್ರೀಕಂಠಯ್ಯನವರ ಸಾಧನೆಗಳನ್ನು ಬಿಂಬಿಸುವ ಕ್ಯಾಲೆಂಡರ್ ಗಳನ್ನು ಬಿಡುಗಡೆಗೊಳಿಸಲಾಯಿತು.
ಹಾಸನ ಜಿಲ್ಲೆಯ ಎಲ್ಲಾ ಶ್ರೀಕಂಠಯ್ಯನವರ ಅಭಿಮಾನಿಗಳು ಹಾಗೂ ಹಿತೈಷಿಗಳ ಪೂರ್ವಭಾವಿ ಸಭೆಯನ್ನು ಕರೆದು ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಎಂದು ಮಾಹಿತಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉದಯಕುಮಾರ್, ಕೆ ಜಿ ಬಾಬು, ವಿ ಜಿ ಅಶೋಕ್, ರುದ್ರೇಶ್, ಗಿರೀಶ್, ಆಕರ್ಷ, ಸಚಿನ್, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
