ಚನ್ನರಾಯಪಟ್ಟಣ:ನಲ್ಲೂರು ಗ್ರಾಮದ ಶ್ರೀಲಕ್ಷ್ವಿದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ನಲ್ಲೂರು ಗ್ರಾಮದ ಮುಖಂಡರಾದ ವಿಶ್ವನಾಥ್ ಮಾತನಾಡಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಮ್ಮ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದೇವೆ, ಈ ಜಾತ್ರಾ ಮಹೋತ್ಸವಕ್ಕೆ ವಿವಿಧ ತಾಲೂಕಿನಿಂದ ಭಕ್ತಾದಿಗಳು ಆಗಮಿಸಿ ಈ ಲಕ್ಷ್ಮೀದೇವಿ ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ, ನಮ್ಮೂರ ತಾಯಿಯನ್ನು ಯಾರು ನಂಬಿದ್ದಾರೆ ಅವರೆಲ್ಲರಿಗೂ ಒಳ್ಳೆಯದೇ ಆಗಿದೆ, ನಮ್ಮ ಗ್ರಾಮ ದೇವತೆಗೆ ಮೊರೆ ಹೋದ ಎಲ್ಲಾ ಭಕ್ತರಿಗೂ ಯಾವುದೇ ರೀತಿಯ ಕಷ್ಟಗಳು ಬರದ ರೀತಿಯಲ್ಲಿ ಈ ದೇವತೆ ಕಾಪಾಡುತ್ತಾಳೆ ಎಂಬ ನಂಬಿಕೆಯಿಂದ ಇದ್ದಾರೆ.
ಹಲವಾರು ಗ್ರಾಮಗಳಿಂದ ಭಕ್ತರು ಆಗಮಿಸಿ ಇಲ್ಲಿ ರಾತ್ರಿ ಉಳಿದು ಬೆಳಿಗ್ಗೆ ತಾಯಿಯ ಸೇವೆಯನ್ನು ಮಾಡಿಕೊಂಡು ತಮ್ಮ ತಮ್ಮ ಊರಿಗೆ ಮರಳುತ್ತಾರೆ ಎಂದು ತಿಳಿಸಿದರು. ಈ ಊರಿನ ಜಾತ್ರಾ ಮಹೋತ್ಸವಕ್ಕೆ ನಮ್ಮ ತಾಲೂಕಿನ ಅಕ್ಕಪಕ್ಕದ ತಾಲೂಕುಗಳಾದ ಕೆ ಆರ್ ಪೇಟೆ, ಕೆ ಆರ್ ನಗರ, ಪಿರಿಯಾಪಟ್ಟಣ ತಾಲೂಕಿನಿಂದ ಭಕ್ತರು ಆಗಮಿಸುತ್ತಾರೆ, ಎರಡು ದಿನಗಳಿಂದ ಈ ಜಾತ್ರಾ ಮಹೋತ್ಸವ ತುಂಬಾ ಸಡಗರದಿಂದ ನಡೆಯುತ್ತಿದೆ ಎಂದರು. ನಮ್ಮೂರ ಜಾತ್ರೆ ಅಂಗವಾಗಿ ಮಾಂಸದ ಭೋಜನವನ್ನು ಏರ್ಪಡಿಸಿ ಎಲ್ಲಾ ಭಕ್ತರಿಗೂ ನೀಡುವ ಮೂಲಕ ತುಂಬಾ ಸಡಗರದಿಂದ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದೇವೆ, ತಾಯಿ ನಲ್ಲೂರಮ್ಮ ಸಮಸ್ತ ಭಕ್ತರಿಗೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಬೇಡಿಕೊಂಡರು.

ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಎನ್ ಆರ್ ಪುರುಷೋತ್ತಮ್ ಮಾತನಾಡಿ ನಮ್ಮೂರ ಲಕ್ಷ್ಮೀದೇವಿ ದೇವತೆಯನ್ನು ನಂಬಿಕೊಂಡಿರುವ ಭಕ್ತರಲ್ಲಿ ಹೊಸ ಚೈತನ್ಯವನ್ನು ತುಂಬಲಿ ಎಂಬ ಉದ್ದೇಶದಿಂದ ಗ್ರಾಮದ ಎಲ್ಲಾ ಮುಖಂಡರು ಒಗ್ಗೂಡಿ ಪ್ರೀತಿ ಸೋದರತೆಯ ಐಕ್ಯತೆಯನ್ನು ಸಂದೇಶವನ್ನು ಸಾರುವ ಹಬ್ಬವೇ ಸಂಕ್ರಾಂತಿ ಹಬ್ಬ ಎಂದರು. ಸುಗ್ಗಿಯನ್ನು ಮುಗಿಸಿದ ರೈತರ ಮುಖದಲ್ಲಿ ಹಸನ್ಮುಖಿ, ಸಂತೋಷ ಎಲ್ಲವೂ ತುಂಬಿರುತ್ತದೆ, ಅದನ್ನು ಜಾತ್ರೆಯ ಮೂಲಕ ನಾವೆಲ್ಲರೂ ಆಚರಣೆ ಮಾಡುವ ಮೂಲಕ ಮುಂದಿನ ವರ್ಷಕ್ಕೆ ಹೊಸ ಹುಮ್ಮಸ್ಸು ಪಡೆಯಲು ಪ್ರೇರಣೆ ಕಾರಣವಾಗುತ್ತದೆ, ಗ್ರಾಮದ ಸಮಸ್ತ ಜನಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಇಡೀ ದಿನ ಸಂತೋಷದಿಂದ ಪಾಲ್ಗೊಂಡು ವಿಜೃಂಭಣೆಯಿಂದ ಹಬ್ಬವನ್ನು ಆಚರಣೆಯನ್ನು ಮಾಡುತ್ತೇವೆ, ಇಲ್ಲಿಯ ಮಹಿಳೆಯರು ಮತ್ತು ಮಕ್ಕಳು ಬೇಕಾದ ಸೌಕರ್ಯವನ್ನು ಮಾಡಿಕೊಂಡಿದ್ದೇವೆ.
ನಲ್ಲೂರು ಗ್ರಾಮದ ಮುಖ್ಯಸ್ಥರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದರು. ನಮ್ಮ ಗ್ರಾಮದ ಲಕ್ಷ್ಮೀದೇವಿ ತನ್ನದೇ ಆದ ಇತಿಹಾಸವನ್ನು ಹೊಂದಿದ್ದಾಳೆ, ನಾವು ಅಧ್ಯಯನ ಮಾಡಿ ತಿಳಿದುಕೊಂಡಿರುವ ಪ್ರಕಾರ ಈ ದೇವಸ್ಥಾನವು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ತಿಳಿದುಕೊಳ್ಳಲಾಗಿದೆ, ಈ ದೇವಾಲಯದ ವಾಸ್ತು ಶಿಲ್ಪವನ್ನು ನೋಡಿದಾಗ ಇದು ಐತಿಹಾಸಿಕವಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿರುವ ದೇವಾಲಯ ಎಂಬುವುದರಲ್ಲಿ ಎರಡು ಮಾತಿಲ್ಲ, ಇಲ್ಲಿಯ ಕಂಬದರಾಯನ ವಿಚಾರ ತಿಳಿದುಕೊಂಡಾಗ ಏಕಶಿಲೆಯಿಂದ ಮಾಡಿರುವುದಾಗಿ ತಿಳಿದು ಬರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಎನ್ ಆರ್ ಪುರುಷೋತ್ತಮ್, ಗುಡಿಗೌಡ ಪ್ರದೀಪ್ ಕುಮಾರ್, ಕಾರ್ಯದರ್ಶಿ ಮಿಥನ್, ಧರ್ಮದರ್ಶಿಗಳು ಹಾಗೂ ಊರಿನ ಮುಖಂಡರಾದ ಎನ್ ಕೆ ವಿಶ್ವನಾಥ್,ಎನ್ ಎಸ್ ಲೋಕೇಶ್, ಪ್ರಕಾಶಣ್ಣ, ರಾಮು, ನಲ್ಲೂರೇಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಎನ್ ಕೆ ದಿನೇಶ್, ಸರಸ್ವತಿ ಶಿವಣ್ಣ, ಯೋಗ ನರಸಿಂಹ ಗೌಡ, ಅನಿಲ್, ರಮೇಶ್, ಗುತ್ತಿಗೆದಾರರಾದ ಎನ್ ಆರ್ ಸಂತೋಷ್, ನಲ್ಲೂರು ಮತ್ತು ಆಲೇನಹಳ್ಳಿ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.
– ಮಂಜುನಾಥ್ ಐ.ಕೆ.
