ಚನ್ನರಾಯಪಟ್ಟಣ: ಪುರಸಭೆಯ ಹೊಸ ಕಟ್ಟಡದ ಎರಡನೇ ಹಂತದ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಶಾಸಕ ಸಿ.ಎಂ.ಬಾಲಕೃಷ್ಣ ಹೇಳಿದರು.
ಪಟ್ಟಣದ ನವೋದಯ ವೃತ್ತದಲ್ಲಿ ಎಸ್ಇಪಿ ಯೋಜನೆಯಡಿ 3.25 ಕೊಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುರಸಭೆಯ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.
ಎಸ್ಇಪಿ ವತಿಯಿಂದ 80 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದ್ದು 2.45 ಕೋಟಿ ರೂ. ಬರಬೇಕಾಗಿದೆ. ಆದರೆ ಈಗಾಗಲೇ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಇನ್ನೂ 20 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಮಾರ್ಚ್ ತಿಂಗಳ ಅಂತ್ಯದೊಳಗೆ ಉದ್ಘಾಟನೆ ಮಾಡಲಿದ್ದು ಎರಡನೇ ಹಂತದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಟೆಂಡರ್ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗುವುದು. ಮುಂದಿನ ವರ್ಷಾಂತ್ಯದಲ್ಲಿ ಅದನ್ನು ಸಹ ಉದ್ಘಾಟನೆಗೊಳಿಸಲಾಗುವುದು ಎಂದು ತಿಳಿಸಿದರು.
ಡಬಲ್ ಲಿಫ್ಟ್ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ವಿದ್ಯುತ್ ಪರಿಕರಗಳ ಅಳವಡಿಕೆ ಕಾರ್ಯ ನಡೆಯುತ್ತಿದ್ದು ಗುಣಮಟ್ಟದ ಕಾಮಗಾರಿಯಿಂದ ಕಟ್ಟಡವು ನಿರ್ಮಾಣವಾಗಿದೆ. ಇದರಿಂದ ಹೆಚ್ಚು ಅವಧಿ ಬಾಳಿಕೆ ಬರಲಿದೆ ಎಂದರು.
ಟಿಪಿಸಿಎಂಎಸ್ ಅಧ್ಯಕ್ಷರಾದ ವೆಂಕಟೇಶ್, ನಿರ್ದೇಶಕರಾದ ಅನಿಲ್ ಮರಗೂರು, ಪುರಸಭೆ ಮುಖ್ಯಾಧಿಕಾರಿ ಆರ್.ಯತೀಶ್, ಎಇಇ ರುಕ್ಮಿಣಿ, ಎಇ ಮಂಜಣ್ಣ ಗೌಡ, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ವಾರ್ಡನ್ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
