ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ವತಿಯಿಂದ ಜನವರಿ 5ರಂದು 22 ನೇ ವರ್ಷದ ಮಹಾ ಚಂಡಿಕಾಯಾಗವನ್ನು ಲೋಕಕಲ್ಯಾಣಾರ್ಥವಾಗಿ ಜರುಗಲಿದೆ ಎಂದು ಕ್ಷೇತ್ರದ ಆಧ್ಯಾತ್ಮಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು ಕಳೆದ 22 ವರ್ಷಗಳಿಂದ ನಿರಂತರವಾಗಿ ಲೋಕ ಕಲ್ಯಾಣಾರ್ಥವಾಗಿ, ದೇವಿಯ ಆರಾಧನೆ, ಚಂಡಿಕಾಯಾಗ ,ಹೋಮಗಳು, ಮಹಿಳೆಯರಿಗೆ ಭಾಗನ, ಅನ್ನ ಸಂತರ್ಪಣೆ, ಸರ್ಕಾರಿ ಶಾಲೆಗಳಿಗೆ ಬಡ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿ ಪೀಠೋಪಕರಣಗಳ ಆಟೊಪಕರಣಗಳ, ಕೊಡುಗೆಯನ್ನು ನೀಡುತ್ತ ಬಂದಿದ್ದೇವೆ ಎಂದರು.
ಕೋಡಿಮಠದ ಶ್ರೀಗಳ ಮಾರ್ಗದರ್ಶನ ಹಾಗೂ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಜನವರಿ 4ರಂದು ಸಂಜೆ ಗಣಪತಿ ಹೋಮ ದುರ್ಗಾ ಮಂಡಲ ಆರಾಧನೆ ದುರ್ಗಾ ಸಪ್ತಶತಿ ಪಾರಾಯಣ ನಡೆಯಲಿದೆ. ಜನವರಿ 5ರಂದು ಬೆಳಗ್ಗೆ ಮಹಾ ಚಂಡಿಕಾ ಯಾಗ ಮಧ್ಯಾಹ್ನ ಪೂರ್ಣಹುತಿ ನಡೆಯಲಿದೆ.
ಧಾರ್ಮಿಕ ಸಮಾರಂಭದ ಪಾವನ ಸಾನಿಧ್ಯವನ್ನು ಕೋಡಿಮಠದ ಪರಮಪೂಜ್ಯ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಕಾರ್ಯದರ್ಶಿಗಳಾದ ಡಿ ಸಿ ಅಮೋಘ ಪಾಲ್ಗೊಳ್ಳಲಿದ್ದಾರೆ ಎಂದರು.
– ಮಂಜುನಾಥ್ ಐ.ಕೆ.
