ಚನ್ನರಾಯಪಟ್ಟಣ: ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಜೊತೆಗೆ ಅವರ ನಡವಳಿಕೆ ಮತ್ತು ಸಂಸ್ಕಾರದ ಮೇಲೂ ಗಮನ ಹರಿಸಬೇಕು. ಶಿಕ್ಷಣದಿಂದ ಸಮಾಜದಲ್ಲಿನ ಶೋಷಣೆ, ಅನಿಷ್ಠ ಪದ್ಧತಿ ಮತ್ತು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ಆಶಯ ಇದ್ದರೂ ಇಂದಿನ ಶಿಕ್ಷಣವಂತ ಸಮಾಜದಲ್ಲಿ ಅನ್ಯಾಯ ಮತ್ತು ಆಕ್ರಮಗಳೇ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದು ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ. ತಮ್ಮಣಗೌಡ ಹೇಳಿದರು.
ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿಯ ಜಿನ್ನೇನಹಳ್ಳಿ ಗ್ರಾಮದಲ್ಲಿರುವ ರಚನಾ ಪಬ್ಲಿಕ್ ಸ್ಕೂಲ್ನಲ್ಲಿ 2025–26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಸತ್ಯದಿಂದ ಸತ್ಯದ ಕಡೆಗೆ ಹಾಗೂ ಕೆಟ್ಟದ್ದರಿಂದ ಒಳ್ಳೆಯದ ಕಡೆಗೆ ಸಾಗಲು ಶಿಕ್ಷಣ ನೆರವಾಗುತ್ತದೆ ಎಂಬ ಉದ್ದೇಶ ಇತ್ತು. ಆದರೆ ಇಂದಿನ ದಿನಗಳಲ್ಲಿ ಶಿಕ್ಷಣ ತನ್ನ ಮೂಲ ಮೌಲ್ಯವನ್ನು ಕಳೆದುಕೊಳ್ಳುತ್ತಿರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣದಿಂದ ಸಮಾಜದಲ್ಲಿನ ರೋಗರುಜಿನಗಳು ನಶಿಸಿ ಎಲ್ಲರಿಗೂ ಸಮಬಾಳು, ಸಮಪಾಲು ದೊರೆಯುತ್ತದೆ ಎಂಬ ಆಶಯವೂ ಇಂದಿಗೆ ಕುಗ್ಗಿದೆ. ಕಲಿತವರಿಂದ ಸಮಾಜ ಸುಧಾರಣೆ ಎಂಬುದು ಈಗ ಮರೀಚಿಕೆಯಾಗಿದೆ. ಕೆಲವೊಮ್ಮೆ ಕಲಿತವರಿಂದಲೇ ಶೋಷಣೆ ಹಾಗೂ ಸಮಸ್ಯೆಗಳು ಉಂಟಾಗುತ್ತಿರುವುದು ಕಂಡುಬರುತ್ತಿದೆ ಎಂದು ಹೇಳಿದರು.
ಬಡವರು ಮತ್ತು ದೀನದಲಿತರಿಗಾಗಿ ಕೆಲಸ ಮಾಡಬೇಕಾದ ಅಧಿಕಾರಿಗಳು ಲಂಚದ ಬಾಕತನದಲ್ಲಿ ತೊಡಗಿರುವುದು ದುಃಖಕರ. ಇಂತಹವರನ್ನು ನಿಯಂತ್ರಿಸಬೇಕಾದ ರಾಜಕಾರಣಿಗಳೂ ಕೂಡ ಇದರಿಂದ ಹೊರತಾಗಿಲ್ಲವೆಂದು ಅವರು ಟೀಕಿಸಿದರು.
ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಪ್ರಭುಗಳಾದ ಪ್ರಜೆಗಳು ತಮ್ಮ ಪ್ರಭುತ್ವವನ್ನು ಹಣ ಹಾಗೂ ಹೆಂಡಕ್ಕೆ ಮಾರಿಕೊಳ್ಳುತ್ತಿರುವಾಗ ಸಮಾಜ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಶಿಕ್ಷಣವನ್ನು ಪ್ರತಿಯೊಂದು ಹಂತದಲ್ಲೂ ದುರಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಸನ್ಮಾರ್ಗ, ಸಂಸ್ಕಾರ ಹಾಗೂ ಒಳ್ಳೆಯ ನಡವಳಿಕೆಯನ್ನು ಕಲಿಸಬೇಕು. ಇಲ್ಲವಾದರೆ ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಅದು ವ್ಯರ್ಥವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜುಟ್ಟನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಈಗಿನ ಶೈಕ್ಷಣಿಕ ವರ್ಷದ ಕೊನೆ ಹಂತದಲ್ಲಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ನಡೆಯುವ ಪರೀಕ್ಷೆಗಳಿಗೆ ಸಿದ್ಧರಾಗಬೇಕು. ವರ್ಷವಿಡೀ ಕಲಿತ ಪಾಠಗಳನ್ನು ಮನನ ಮಾಡಿಕೊಂಡು ಗಮನವಿಟ್ಟು ಪರೀಕ್ಷೆ ಬರೆಯುವುದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವೆಂದು ಸಲಹೆ ನೀಡಿದರು.
ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಧರಿಸಿ ಹಾಡುಗಳಿಗೆ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸಭಿಕರ ಮನಸೆಳೆದರು.
ಸಮಾರಂಭದಲ್ಲಿ ಎಂ.ಎಸ್. ರಾಮಯ್ಯ ಕಿಂಡರ್ ಕೇರ್ ವಿಭಾಗದ ಜನರಲ್ ಮ್ಯಾನೇಜರ್ ಅಮಿತ್, ಪ್ರಾಂಶುಪಾಲೆ ಸುನೀತಾ ಪ್ರಕಾಶ್, ಎಸ್ಜಿವೈ ವಿದ್ಯಾಸಂಸ್ಥೆಯ ಸಂಸ್ಥಾಪಕರು ಹಾಗೂ ಕಾರ್ಯದರ್ಶಿ ಪ್ರಕಾಶ್, ಶಾಲೆಯ ಆಡಳಿತಾಧಿಕಾರಿ ಮಂಜುನಾಥ್ ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.
