ಚನ್ನರಾಯಪಟ್ಟಣ : ತಾಲ್ಲೂಕು ನೇರಲಕೆರೆ ಗ್ರಾಮದ ಸವಿತಾ ಕುಮಾರ್ ಎಂಬ ಮಹಿಳೆ ಪೌರಾಣಿಕ ನಾಟಕದ ಸಂಗೀತ ನಿರ್ದೇಶಕಿಯಾಗಿ ಗ್ರಾಮೀಣ ಸೊಗಡಿನ ಕಲೆ ಉಳಿಸುವಲ್ಲಿ ಕ್ಷಮಿಸುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಹಬ್ಬ ಹರಿದಿನಗಳಲ್ಲಿ ಪೌರಾಣಿಕ ನಾಟಕ ಪ್ರದರ್ಶನ ಸಾಮಾನ್ಯವಾಗಿದ್ದು ಇತ್ತೀಚಿನ ದಿನಗಳಲ್ಲಿ ಪೌರಾಣಿಕ ನಾಟಕ, ಯಕ್ಷಗಾನ, ಕೋಲಾಟ ಸೇರಿದಂತೆ ಗ್ರಾಮೀಣ ಸೊಗಡು ಕ್ಷೀಣಿಸುತ್ತಿದೆ.
ಇಂತಹ ಸಮಯದಲ್ಲಿ ಮಹಿಳೆಯೊಬ್ಬರು ಪೌರಾಣಿಕ ನಾಟಕದ ಸಂಗೀತ ನಿರ್ದೇಶಕರಾಗಿ ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸುತ್ತಿರುವುದು ವಿಶೇಷವಾಗಿದೆ.

ನೇರಲಕೆರೆ ಗ್ರಾಮದ ಸವಿತಾ ವೃತ್ತಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದು ಸಂಘ ಹಾಗೂ ಮನೆಯ ಜವಾಬ್ದಾರಿಯ ಜೊತೆಗೆ ಕಲೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ಶೈಕ್ಷಣಿಕ ಜೀವನದಲ್ಲಿ ಶಾಲಾ ಕಾರ್ಯಕ್ರಮದ ವೇಳೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು ಮದುವೆಯಾದ ನಂತರವೂ ಪೌರಾಣಿಕ ನಾಟಕಗಳಲ್ಲಿ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದರು.
ಆದರೆ ಪೌರಾಣಿಕ ನಾಟಕಗಳನ್ನು ಕಲಿಸುವ ಹಾಗೂ ಪ್ರದರ್ಶನ ನೀಡುವ ಆಸಕ್ತಿ ಹೊಂದಿದ ಇವರು ಕಳೆದ 15 ವರ್ಷಗಳಿಂದ ಸ್ವತಃ ಸಂಗೀತ ನಿರ್ದೇಶಕರಾಗಿ ಪೌರಾಣಿಕ ನಾಟಕಗಳ ಕಡೆ ಮುಖ ಮಾಡಿದ್ದು ಇಂದಿಗೂ ಹಿಂದಿರುಗಿ ನೋಡಿಲ್ಲ. ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ, ರಾಜ ಸತ್ಯವ್ರತ ಅಥವಾ ಶನಿ ಪ್ರಭಾವ ಹಾಗೂ ದೇವಿ ಮಹಿಮೆ ಎಂಬ ನಾಟಕ ಕಲಿಸುತ್ತಾರೆ. ಸುಮಾರು 60 ಕ್ಕೂ ಹೆಚ್ಚು ಪೌರಾಣಿಕ ನಾಟಕಗಳನ್ನು ಕಲಿಸಿ ಪ್ರದರ್ಶನ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇತ್ತೀಚಿಗೆ ಚನ್ನರಾಯಪಟ್ಟಣದಲ್ಲಿ ಮಹಿಳೆಯರ ತಂಡವೊಂದಕ್ಕೆ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಕಲಿಸಿ ಪ್ರದರ್ಶನ ನೀಡಿ ನಿರೀಕ್ಷೆಗೆ ಮೀರಿದ ಯಶಸ್ಸು ಕಂಡಿದ್ದಾರೆ.
ನೇರಲಕೇರೆ ಗ್ರಾಮದಲ್ಲಿ ಫೆಬ್ರವರಿ 9 ರಂದು ಸೋಮವಾರ ರಾತ್ರಿ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಇನ್ನು ಉಳ್ಳಾವಳ್ಳಿ ಗ್ರಾಮದಲ್ಲಿ ಮಾರ್ಚ್ 15 ರಂದು ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸವಿತಾ ತಿಳಿಸಿದ್ದಾರೆ. ಇವರ ಸಹಾಯಕ್ಕೆ ಪತಿ ಕುಮಾರ್ ಅವರು ಸದಾ ಹಿಂದಿ ನಿಂತಿರುವುದು ವಿಶೇಷ.
ಕಲೆಯೇ ನನ್ನ ಜೀವನ, ನನ್ನ ದುಡಿಮೆ ಏನೇ ಇರಲಿ, ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕ್ಷಮಿಸುತ್ತೇನೆ. ನಾನು ದುಡಿಮೆಯ ಆಸೆಯಿಂದ ಈ ಕ್ಷೇತ್ರಕ್ಕೆ ಬಂದವಳಲ್ಲ ಗ್ರಾಮೀಣ ಸೊಗಡು, ಕಲೆ ಉಳಿಯಬೇಕು. ಮುಂದಿನ ಪೀಳಿಗೆಗೂ ಬೀಜವಾಗಿ ಬಿತ್ತಬೇಕು ಎಂಬುದೇ ನನ್ನ ಬಯಕೆ ಎಂದು ಸಂಗೀತ ನಿರ್ದೇಶಕಿ ಸವಿತಾ ಕುಮಾರ್ ತಿಳಿಸಿದ್ದಾರೆ.
