ಹಿಂದು ಸಮುದಾಯಕ್ಕೆ ಎಲ್ಲೋ ಒಂದು ಕಡೆ ಜೀವ ಜಲ ನದಿಗಳಾದ ಗಂಗಾ, ಯಮುನಾ (ಗಂಗೋತ್ರಿ, ಯಮುನೋತ್ರಿ) ಉಗಮ ಸ್ಥಳಗಳನ್ನು ದರ್ಶನ ಪಡೆಯುವದಲ್ಲದೇ ಕೇದಾರನಾಥ ಮತ್ತು ಬದರಿನಾಥ ದರ್ಶನ ಪಡೆಯುವ ಹಂಬಲ ಇದ್ದೇ ಇರುತ್ತೆ. ಈ ನಾಲ್ಕು ಪುಣ್ಯ ಸ್ಥಳಗಳಿಗೆ ಚಾರ್ಧಾಮ್ ಎಂದು ಕರೆಯುತ್ತಾರೆ.
ಒಂದು ತಿಂಗಳ ಹಿಂದೆ ಚಾರ್ ಧಾಮ ಪ್ರವಾಸ ಕೈಗೊಳ್ಳುವ ಮನಸ್ಸು ಬಂತು. ನಮ್ಮಿಬ್ಬರಿಗೂ 60 ವರ್ಷ ಆಸುಪಾಸು ಇದ್ದಿದ್ದರಿಂದ ಹೇಗೆ ಹೋಗಬೇಕಂಬುದರ ಚರ್ಚೆಯಾಯಿತು. ಕೊನೆಗೆ ಉತ್ತರಾಖಂಡದ ರಾಜ್ಯದಾನಿ ಡೆಹ್ರಾಡೂನ್ವರಿಗೂ ವಿಮಾನದಲ್ಲಿ ತೆರಳಿ, ಮುಂದೆ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳಸಿದೆವು. ಪ್ರಯಾಣ ತುಂಬ ದುಬಾರಿಯಾದರೂ ನಮಗೆ ಹಿತವೆನಿಸಿತು. ಕಾರಣ ಕಮ್ಮಿ ದಿನಗಳು (4 ರಾತ್ರಿ, 5 ದಿನ) ಮತ್ತು ಅಲ್ಪ ಚಾರಣ. ಯಾತ್ರಾರ್ತಿಗಳು ಮೇ ಮತ್ತು ಜೂನ್ ತಿಂಗಳುಗಳಲ್ಲಿ ಅಧಿಕವಾಗಿ ಹೋಗುವರು. ಈ ತಿಂಗಳುಗಳಲ್ಲಿ ಚಳಿ ಇದ್ದರೂ ಮಳೆ ಇರುವುದಿಲ್ಲ. ಆದ್ರೆ ಕೆಲವೊಮ್ಮೆ ಹಿಮ, ಮೋಡ ಹಾಗು ಮಳೆ ಬರುವುದುಂಟು. ಈ ಕಾರಣದಿಂದ ಹೆಲಿಕಾಪ್ಟರ್ ಸೇವೆ ಇಲ್ಲದಂತಾಗುತ್ತದೆ. ಇಂತಹ ಹವಾಮಾನ ವೈಪರೀತ್ಯದಿಂದ ಯಾತ್ರಿಗಳು ಕೆಲವು ಗಂಟೆಗಳು ಅಥವ ದಿನಗಳೇ ಯಾತ್ರೆ ಮಾಡಲು ಕಾಯಬೇಕಾಗುತ್ತದೆ. ಬದ್ರೀನಾಥಲ್ಲಿ ಹಿಮದ ಕಾರಣ ನಾವು ಅರು ತಾಸು ಕಾದರೂ ಹಿಮ ಕರಗದೆ ಇರುವುದರಿಂದ 25 ಕಿಲೋಮೀಟರ್ ಕಣಿವೆ ಇಳಿದು ಗೋವಿಂದ ಫಾಟ್ (ಹೇಮ ಕುಂಡ ಸಾಹೇಬ್) ಹೆಲಿಪ್ಯಾಡ್ಗೆ ಹೋಗಬೇಕಾಯಿತು.
ನಮಗೆ ಹೆಲಿಕಾಪ್ಟರ್ ಎಂದಾಕ್ಷಣ ಎದೆ ಜಲ್ಲೆಂದಿತು. ನನ್ನ ಮುಂದೆ ಸೇನಾ ಮುಖ್ಯಸ್ಥ ಅಪ್ಪಟ ಭಾರತೀಯ ದಿವಂಗತ ಜನರಲ್ ರಾವತ್ ನನ್ನ ಕಣ್ಣು ಮುಂದೆ ಬಂದು ಕಣ್ಣೀರು ಬಂದತ್ತಾಗಿತ್ತು. ಆಗಷ್ಟೇ ಇವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಚಾರಧಾಮ ಹೋಗಿಬಂದವರ ಜೊತೆ ಚರ್ಚಿಸಿ ಏನು ತೊಂದರೆ ಆಗುವುದಿಲ್ಲ ಎಂಬ ಭರವಸೆಯ ನಂತರ ಹೋಗಲು ಧೈರ್ಯ ಮಾಡಿದೆವು.

ನಾಲ್ಕು ಪುಣ್ಯ ಕ್ಷೇತ್ರಗಳು ಸಮುದ್ರ ಮಟ್ಟದಿಂದ ಸರಿಸುಮಾರು 13 ರಿಂದ 16 ಸಾವಿರ ಅಡಿ ಏತ್ತರದಲ್ಲಿ ಇರುವುದರಿಂದ ಕನಿಷ್ಠ 3, ಗರಿಷ್ಠ 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಯಾತ್ರೆ ನಿಗದಿ ಆದ ತಕ್ಷಣ ನಮ್ಮ ಬಟ್ಟೆ ಹೊಂದಸಿಕೊಳ್ಳುವ ತಾಲೀಮು ಹಚ್ಚಿ ಕೊಂಡೆವು. ಬೆಚ್ಚನೆಯ ಉಡುಪುಗಳನ್ನು ಖರೀದಿಸಿದೆವು. ಹೆಲಿಕಾಪ್ಟರ್ನ ನಿರ್ಬಂಧ ಹೇಗಿತ್ತಂದರೆ ನಮ್ಮಗಳ ತೂಕ 75kg ಒಳಗೆ ಇರಬೇಕು ಮತ್ತು 5 kg ಯಷ್ಟು ಮಾತ್ರ ಉಡುಪು ಹಾಗೂ ಇತರೆ ಸಾಮಗ್ರಿಗಳು ಒಯ್ಯಬೇಕಿತ್ತು. ಇದನ್ನು ನಿರ್ವಹಿಸುವುದು ಕಷ್ಟಕರವಾದ ಕೆಲಸವೆನ್ನಿಸಿತ್ತು.
ಚಾರ್ ಧಾಮ ಯಾತ್ರೆಗೆ ರೈಲಿನಲ್ಲಿ ಹಾಗೂ ಕಾರು ಅಥವ ಬಸ್ಸಿನಲ್ಲಿ ಸಹ ಪ್ರವಾಸ ಮಾಡಬಹುದು. ಆದ್ರೆ ಪ್ರವಾಸ ಕೆಲವು ದಿವಸಗಳೇ ಆಗಬಹುದು. ಪ್ರಯಾಣ ಸ್ವಲ್ಪ ಕಷ್ಟಕರ. ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಸುಮಾರು 9 ರಿಂದ 12 ಪ್ರಯಾಣ ತಾಸುಗಳು ಬೇಕಾಗುತ್ತದೆ. ರಸ್ತೆ ಕಿರಿದಾಗಿದ್ದು ಅಗಲ ಮಾಡುವ ಕೆಲಸ ನೆಡೆಯುತ್ತಿದೆ. ಪ್ರಯಾಣ ಉದ್ದಕ್ಕೂ ತಂಗಲು ಕೋಣೆಯ ವ್ಯವಸ್ಥೆ ಮತ್ತು ಸಸ್ಯಾಹಾರ ಪಾಕಶಾಲೆಗಳನ್ನ ಕಾಣಬಹುದು. ಈ ಪುಣ್ಯ ಕ್ಷೇತ್ರಗಳಿಗೆ ಬರುವ ಯಾತ್ರಾರ್ತಿಗಳು ಈರುಳ್ಳಿಯನ್ನು ತಿನ್ನುವುದಿಲ್ಲ. ಈ ಕ್ಷೇತ್ರಗಳಲ್ಲಿ ಮದ್ಯಪಾನ ನಿಷೇಧ, ಮಾಂಸಾಹಾರ ಇಲ್ಲ ಹಾಗು ಪ್ಲಾಸ್ಟಿಕ್ ಚೀಲ ಮತ್ತು ಪ್ಲಾಸ್ಟಿಕ್ ಬಾಟಲ್ಸ್ ಕಂಡರೂ ಕಮ್ಮಿ.
ನಮ್ಮ ಪ್ರಯಾಣದ ದಿನ ಬಂದೇ ಬಿಡ್ತು. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಡೆಹ್ರಾಡೂನ್ ಜೋಲಿಗ್ರಾಂಟ್ ವಿಮಾನ ನಿಲ್ದಾಣಕ್ಕೆ ನೇರ ಪ್ರಯಾಣ ಮಾಡಿದೆವು. ಮೊದಲೇ ನಿಯೋಜಿತ ಹೆಲಿ ಸರ್ವಿಸ್ ಸಿಬ್ಬಂದಿ ನಮ್ಮನ್ನು ಪಂಚತಾರಾ ಹೋಟೆಲ್ಗೆ ಕರೆದೋಯ್ದರು. ತಂಗಿದ್ದ ಸ್ಥಳಕ್ಕೆ ಹೆಲಿ ಸರ್ವೀಸ್ನೋರು ಬಂದು ನಮ್ಮ ಮತ್ತು ನಾವು ಹೆಲಿಕಾಪ್ಟರ್ನಲ್ಲಿ ತೆಗೆದುಕೊಂಡು ಹೋಗುವ ಡಫಲ್ ಚೀಲಗಳ ತೂಕವನ್ನು ನೋಡಿದರು. ನಮ್ಮ ಗುಂಪಿನ ಮಂದಿ 18 ಜನ. ಹೆಲಿಕಾಪ್ಟರ್ಗಳು 3. 6 ಪ್ರಯಾಣಿಕರ ತೂಕದ ಮೇಲೆ ಹೆಲಿಕಾಪ್ಟರ್ಗಳನ್ನು ವಿಂಗಡಣೆ ಮಾಡುತ್ತಿದ್ದರು.

ಒಟ್ಟು ತೂಕ 500kg ಮೇಲೀರಬಾರದು. ಈ ಹೆಲಿಕಾಪ್ಟರ್ಗಳಿಗೆ ATF ಡೀಸಲ್ ಉಪಯೋಗಿಸುತ್ತಾರೆ. ನಾವು ಉಪಯೋಗಿಸುವ ಡೀಸಲ್ಗಿಂತ 10 ರೂಪಾಯಿ ಕಮ್ಮಿ. ಡೀಸಲ್ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸುವರು. ಕಾರಣ ಪೂರ್ಣವಾಗಿ ತುಂಬಸಿದರೆ ಹೆಲಿಕಾಪ್ಟರ್ ತೂಕ ಹೆಚ್ಚಾಗುವದು. ಇವುಗಳ ವೇಗ ಕನಿಷ್ಠ 85 ನಾಟಿಕಲ್ ಮೈಲ್ಸ, ಅಂದರೆ 125 ಕಿಲೋಮೀಟರ್ಸ. ಈ ವೇಗ ಕೆಳ ಎತ್ತರದಲ್ಲಿ (2,000 to 3,000 ಅಡಿಗಳು) ಹಾರುವಾಗ ಮಾತ್ರ. ಮೇಲೆತ್ತರದಲ್ಲಿ (10,000 ಅಡಿಗಳು) ಗರಿಷ್ಠ 185 ನಾಟಿಕಲ್ ಮೈಲ್ಸ, ಸುಮಾರು 300 ಕಿಲೋಮೀಟರ್ಸ ವೇಗ ಹೊಂದಿರುತ್ತೆ. ಸೀಟಿನ ಬೆಲ್ಟ ಹಾಕಿ ಕೊಳ್ಳಲೇಬೇಕು. ಚಾರಧಾಮ್ ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ ವಿರಳ. ಇಲ್ಲಿ ಗ್ರೇ ಬಜಾರಲ್ಲಿ ಇಂಧನ ಖರೀದಿಸಬೇಕು. ಡೀಸಲ್ ಮಾತ್ರ ಲಭ್ಯ. ಇದರ ಬೆಲೆ ಒಂದು ಲೀಟರ್ಗೆ 140 ರೂಪಾಯಿಗಳು. ಆರು ತಿಂಗಳು ಚಾರಧಾಮ ಮುಚ್ಚುವುದರಿಂದ ಬಂಕುಗಳು ಚಾಲತಿಯಲ್ಲಿ ಇರುವುದಿಲ್ಲ. ಇನ್ನೊಂದು ಕಾರಣ, ಉಷ್ಣಾಂಶ -10 ಡಿಗ್ರಿ ಇರುವುದರಿಂದ ವಾಹನದ ಮೋಟಾರ್ ರನ್ ಆಗುವುದಿಲ್ಲ. ಇಂಧನವನ್ನು ಉತ್ತರ ಕಾಶಿಯಿಂದ ತಂದು ಶೇಖರಣೆ ಮಾಡಬೇಕಾಗುತ್ತದೆ. ಹೀಗಾಗಿ ಇಂಧನ ಅಲ್ಲಿ ದುಬಾರಿ.

ಹೆಲಿ ಸಿಬ್ಬಂದಿ ಮಾರನೆ ದಿನ ಬೆಳಿಗ್ಗೆ 5.30 ಗಂಟೆಗೆ ರೆಡಿ ಇರಲು ಹೇಳಿದ್ದರು. ರೆಡಿ ಇದ್ದ ನಮ್ಮನ್ನು ಸಹಸ್ರಧಾರ ಹೆಲಿ ಪ್ಯಾಡ್ಗೆ ಕರೆದೋಯ್ದರು. ತೂಕಕ್ಕೆ ತಕ್ಕಂತೆ ನಮಗೆ ಹೆಲಿಕಾಪ್ಟರ್ಗಳನ್ನು ವಿಂಗಡಣೆ ಮಾಡಿದರು. ಇಲ್ಲಿಂದ ಯಮುನೋತ್ರಿ 30 ನಿಮಿಷದ ಪ್ರಯಾಣ. ಹೆಲಿಕಾಪ್ಟರ್ ಮೇಲೇರಿದಂತೆ ಅಳಕು ಹಾಗೂ ರೋಮಾಂಚನ. ಭಯ ಕ್ರಮೇಣ ಕಮ್ಮಿ ಆಯಿತು. ನಿಜ ಹೇಳಬೇಕೆನ್ನುವುದಾದರೆ ಅಲ್ಲಿಯ ಆಗಸದಿಂದ ನೋಡಿದ ಪ್ರಕೃತಿಯ ಸೌಂದರ್ಯ ನಮ್ಮ ಭಯವನ್ನು ಅಳಿಸಿ ಅವಿಸ್ಮರಣೀಯವಾಗಿಸಿತು ಮತ್ತು ಮೂಕವಿಸ್ಮಿತವಾಗಿಸಿತು. ನಾನು ನ್ಯೂಜಿಲ್ಯಾಂಡ್ ನೂಡಿದ್ದೆ. ಅಲ್ಲಿಗೆ ಹೋಲಿಸಿದರೆ ಹಿಮಾಲಯ ಪರ್ವತ ಶ್ರೇಣಿ ತುಂಬ ಅಂದ. ಕಣಿವೆ ಮತ್ತು ಪರ್ವತ ಶ್ರೇಣಿಗಳು ಅತ್ಯದ್ಭುತ. ಈ ಸೌಂದರ್ಯವನ್ನು ಸವಿಯಲು ಹೆಲಿಕಾಪ್ಟರ್ನಲ್ಲೇ ಪ್ರಯಾಣಿಸಬೇಕು. ಹಸಿರು ಮತ್ತು ದೇವದಾರ್ ಮರಗಳು ಭೂ ತಾಯಿಗೆ ಬೆಚ್ಚನೆಯ ಹೊದಿಕೆ ಹೊದ್ದಂತೆ ಇತ್ತು.
ಮುಂದುವರಿಯುತ್ತದೆ…
– ಖ್ಯಾತ ಮನೋವೈದ್ಯ ನಾಗೇಶ್ ಎ.ಎಂ.


[…] https://vicharavisthara.com/char-dham-travel-story-1-renowned-psychiatrist-dr-nagesh-a-m/ […]