ಚಾರ್ ಧಾಮ- ಪ್ರವಾಸ ಕಥನ
ಮುಂದುವರಿದ ಭಾಗ…
ಬೆಳಿಗ್ಗೆ ನಮಗೆ ಸಮಯವಿತ್ತು. ಗೈಡ್ ನಮ್ಮನ್ನೆಲ್ಲ ಹಳ್ಳಿಯ ಕಡೆ ಕರೆದೋಯ್ದ. ಚಿಕ್ಕ ಹಳ್ಳಿ. ಶ್ರಮ ಜೀವಿಗಳು. ಅಲ್ಲಿಯ ಕೃಷಿ ಸಾವಾಯುವ ಕೃಷಿ. ರಾಜ್ಮ ಕಾಳು ಬೆಳೆಯುವುದರಲ್ಲಿ ಎತ್ತಿದ ಕೈ. ಮೌಲ್ಯ ವರ್ಧಿತ ಬೆಳೆ. ಎಲ್ಲ ಬಗೆಯ ತರಕಾರಿ ಬೆಳೆಯುತ್ತಾರೆ. ಹರ್ಬಲ್ ಟೀ ಇಲ್ಲಿನ ವಿಶೇಷ ಟೀ. ಸ್ಥಳೀಯರು ‘ಬೋಟಿನ್’ ಜನಾಂಗದವರು.
ನೋಡಲು ಟಿಬೇಟಿಯನ್ಸ ತರ ಇದ್ದಾರೆ, ಆದರೆ ಹಿಂದೂಗಳು. 1962 ನೇ ಯುದ್ಧದ ಸಮಯದಲ್ಲಿ ಟಿಬೇಟ್ ಬಾರ್ಡರನಲ್ಲಿ ಇದ್ದವರನ್ನು ಇಂತಹ ಕೆಲವು ಹಳ್ಳಿಗಳಲ್ಲಿ ರಿ ಸೆಟ್ಲ ಮಾಡಿಸಿದ್ದಾರೆ. ಟಿಬೇಟಿಯನ್ಸ ಅಂತ ಕರೆದರೆ ಇವರಿಗೆ ಎಲ್ಲಿಲ್ಲದ ಕೋಪ. ಈ ಜನಾಂಗದವರಿಗೆ ದಲ್ಲೈಲಾಮ ಅಧ್ಯಾತ್ಮಿಕ ಗುರು. ಬೌದ್ಧ ಆರಾಧಕರು. ಇಲ್ಲಿ ಎರಡು ತರಹದ ದೇವಸ್ಥಾನಗಳು. ಬುದ್ಧನ ಮಾನಷ್ಟ್ರಿ ಮತ್ತು ಇನ್ನೊಂದು ಗೋಪುರ ಶೈಲಿಯಲ್ಲಿರುವ ದೇವಸ್ಥಾನಗಳು.
ಗರ್ಭ ಗುಡಿ ಬೌದ್ಧ ಶೈಲಿಯಿಂದ ಕೂಡಿದ್ದಾಗಿದೆ ಆದರೆ ಹಿಂದೂ ದೇವರಗಳನ್ನು ಪ್ರತಿಷ್ಠಾಪನೆ ಮಾಡಿರುವರು. ಈ ದೇಗುಲಗಳಲ್ಲಿ ಮಾಂಸಾಹಾರ ನೈವೇದ್ಯ. “ಗೋಟಿನ್” ಪಂಗಡದವರೆಂದು ಗುರುತಿಸಿಕೊಂಡ ಇವರು ಟಗರನ್ನು ಬಲಿ ಕೊಡುವುದು ವಾಡಿಕೆ. ಇಲ್ಲಿಯ ನಾಯಿ ತಳಿ “ಬೋಟಿನ್”. ನೋಡಲು ಸಿಂಹದ ತರ ಇರುತ್ತವೆ. ಬೆಳಿಗ್ಗೆ ಮಾನವರ ಜೊತೆ ಸ್ನೇಹದಿಂದ ವರ್ತನೆ. ರಾತ್ರಿಯ ವೇಳೆ ಹಳ್ಳಿಯ ಒಳಗೆ ಯಾರನ್ನು ಬಿಡುವುದಿಲ್ಲ. ಬೊಗಳಿದರೆ ಎರಡು ಕಿಲೋಮೀಟರ್ಸ ದೂರ ಬೊಗಳಿಕೆಯ ಶಬ್ದ ಕೇಳಬಹುದು.

ಅಲ್ಲಿ ಮನೆಗಳು ಎರಡು ಅಂತಸ್ತಿನ ವಾಸ್ತುಶಿಲ್ಪ ಹೊಂದಿದೆ. ಕೆಳಗೆ ಆಕಳು, ಕುದುರೆ ಮತ್ತು ಕತ್ತೆಗಳನ್ನು ಸಾಕುತ್ತಾರೆ. ಕುಟುಂಬದವರು ಮೇಲೆ ವಾಸ ಮಾಡುತ್ತಾರೆ. ಮನೆಯ ಸೂರನ್ನು ತೆಳುವಾದ ಚಪ್ಪಡಿ ಕಲ್ಲುಗಳಿಂದ ಹೊದಿಸಿರುತ್ತಾರೆ. ಹಿಮ ಬಿದ್ದರೂ ಮನೆಯೊಳಗೆ ಬೆಚ್ಚಗೆ ಇರುತ್ತದೆ. ಅಲ್ಲಲ್ಲಿ ಚಿಕ್ಕ ಉಗ್ರಾಣಗಳನ್ನೂ ಕಾಣ ಬಹುದು.
ಇದರ ಒಳಗೆ ಧವಸ ಧಾನ್ಯ ಶೇಖರಣೆ ಮಾಡುತ್ತಾರೆ. ಹಿಮ ಬಿಳುವ ಆರು ತಿಂಗಳು ಇವರೆಲ್ಲರೂ ಉತ್ತರ ಕಾಶಿಗೆ ಗುಳೆ ಹೋಗುವುದರಿಂದ ಇವರು ಬರೋವರಿಗೂ ಧವಸ ಧ್ಯಾನ ಭದ್ರವಾಗಿ ಹಾಗು ಬೆಚ್ಚಗೆ ಇರುತ್ತದೆ. ಹೆಂಗಳೆಯರ ಉದ್ಯೋಗ ವುಲನ್ ಕೈ ಕಸೂತಿ. ಇವುಗಳ ಅಂಗಡಿಗಳು ಇಲ್ಲಿ ಇರುತ್ತವೆ. ಕೈ ಎಟಕುವ ಬೆಲೆ. ಯಾರು ಬೇಕಾದರೂ ಕೊಳ್ಳಬಹುದು.
ನಮ್ಮ ಹೆಲಿ ಗೈಡ್ ಮಾರನೆ ದಿನ 8 ಗಂಟೆಗೆ ರೆಡಿ ಇರಲು ಹೇಳಿದ್ದರು. ಕಾರಣಾಂತರಗಳಿಂದ ಹೆಲಿಕಾಪ್ಟರ್ 1 ತಾಸಷ್ಟು ವಿಳಂಬವಾಗಿ ಹೆಲಿ ಪ್ಯಾಡ್ ತಲುಪಿತು. ಇಲ್ಲಿಂದ ಕೇದಾರನಾಥಗೆ 35 ನಿಮಷದ ಹಾರಾಟ. ಹಿಮಾಲಯ ತಪ್ಪಲು ಪ್ರಮುಖವಾಗಿ ಮೂರು ಪ್ರಕಾರಗಳಲ್ಲಿ ಮೈ ತುಂಬಿದೆ. ಲೇ ಲಡಾಕ್ ತರಹ ತಳಮಟ್ಟ ಭೂಮಿ. ಇಲ್ಲಿ ಮಧ್ಯ ಶ್ರೇಣಿಯ ಪರ್ವತ ಕಣಿವೆಗಳನ್ನು ಕಾಣಬಹುದು. ನಾವು ಇಂತಹ ಪರ್ವತ ಶ್ರೇಣಿಗಳ ಮೇಲೆ ಹಾರಾಟ ಮಾಡುತ್ತೇವೆ.
ಕೆಲವು ಮೈಲಿ ದೂರದಲ್ಲಿರುವ ಹಿಮಾಲಯ ಪರ್ವತಗಳು ಅತ್ಯದ್ಭುತ ಶಿಖರಗಳಾಗಿ ಗೋಚರಿಸುತ್ತವೆ. ಮಧ್ಯ ಶ್ರೇಣಿಯ ಪರ್ವತಗಳು ಸಮುದ್ರ ಮಟ್ಟದಿಂದ ಸುಮಾರು 10 ರಿಂದ 15 ಸಾವಿರ ಎತ್ತರ ಇದ್ದರೆ ಶಿಖರಗಳು ಮೂರು ಪಟ್ಟು ಎತ್ತರ ಇರುತ್ತದೆ.

ಶಿಖರಗಳ ತುದಿಯ ಉಷ್ಣಾಂಶ -10 ರಿಂದ -20 ಡಿಗ್ರಿ ಇರುವದರಿಂದ ಅಲ್ಲಿ ವಿಸ್ತಾರವಾದ ಹಿಮ ನೀರ್ಗಲ್ಲು ಅಥವ ಹಿಮ ನದಿಗಳು ಕಾಣುತ್ತವೆ. ಇದರಲ್ಲಿ ಪ್ರಮುಖವಾದುದು ಗೋಮುಖ ನೀರ್ಗಲ್ಲು. ಗಂಗೋತ್ರಿಯಿಂದ 18 ಕಿಲೋಮೀಟರ್ಸ ಚಾರಣ ಮಾಡಿದರೆ ಈ ನೀರ್ಗಲ್ಲಿನ ಹತ್ತಿರ ಹೋಗಬಹುದು. ಮಾನವನ ಜಾಣ ಕುರುಡುತನದಿಂದ, ಇವನ ಅತಿ ಆಸೆಯಿಂದ ಮತ್ತು ಜಾಗತಿಕ ಮಟ್ಟದಲ್ಲಿನ ಉಷ್ಣಾಂಶ ಹೆಚ್ಚಾಗುತ್ತಿರುವದರಿಂದ ಈ ಗೋಮುಖ ನೀರ್ಗಲ್ಲು ಕರಗುತ್ತಾ ಬರುತ್ತಿದೆ.
ಚಾಪರ್ ಇಂದ ಶಿಖರಗಳನ್ನು ವೀಕ್ಷಿಸುತ್ತಿದ್ದ ನನಗೆ ಎಲ್ಲೋ ನಾನು ಸ್ವರ್ಗ ಲೋಕದಲ್ಲಿ ಇರುವನೆಂದು ಭಾಸವಾಯಿತು. ಪ್ರಾಯಶಃ ತುಂಬ ಎತ್ತರದಲ್ಲಿ ಹಾರಾಟ ಮಾಡುತ್ತಿದ್ದ ನಮಗೆ ಆಮ್ಲಜನಕ ಕೂರತೆ ಇರುತ್ತೆ ಎಂದು ನನಗೆ ಮೊದಲೇ ತಿಳಿದ್ದಿದ್ದರಿಂದ ಅಸಿಟೊಜಲಮೈಡ್ 125 ಮಿಲಿಗ್ರಾಮ್ ಮಾತ್ರೆಗಳನ್ನು ಐದು ದಿವಸ ಮುಂಚೆಯೇ ಎಲ್ಲರಿಗೂ ಕೊಟ್ಟಿದ್ದೆ.
ಏನೇ ಆಗಲಿ ಆಕಾಶದಿಂದ ಹಿಮಾಲಯ ಪರ್ವತ ನೋಟ ನನಗೆ ಸುಖಾನುಭವ ತಂದಿತ್ತು. ಹಿಮಗಟ್ಟಿದ ಶಿಖರ ಮೋಡಗಳ ಜೊತೆಗಿನ ನೃತ್ಯೋತ್ಸವ ಮತ್ತು ಅವುಗಳ ಆಕಾಶ ಚುಂಬನ ನೋಡಿದ ನನ್ನ ಮನಕ್ಕೆ ಹರ್ಷೋತ್ಸವೇ ಆಗಿತ್ತು.
ನಾವು “ಸಿರ್ಸಾ” ಹೆಲಿ ಪ್ಯಾಡ್ಗೆ ಬಂದು ಇಳಿದೆವು. ಚಳಿ, ಮಳೆ ಮತ್ತು ಮೋಡ ನಮ್ಮನ್ನೆಲ್ಲಾ ಸ್ವಾಗತ ಬಯಸಿದವು. ಈ ಹವಾಮಾನಕ್ಕೆ ತಕ್ಕಂತೆ ಮೊದಲೇ ಉಡುಪುಗಳನ್ನು ಧರಿಸಿದ್ದೆವು. ನಾವು ಇಳಿದ ಕಣಿವೆಯನ್ನು “ಗರ್ವಾಲ್” ಕಣಿವೆ ಎಂದು ಕರೆಯುತ್ತಾರೆ. ನಮ್ಮ ಹೋಟೆಲ್ ಹೆಲಿ ಪ್ಯಾಡ್ ಹತ್ತಿರವೇ ಇತ್ತು. ಯಾರೇ ಯಾತ್ರಿಗಳು ಕೇದಾರನಾಥಗೆ ಹೆಲಿಕಾಪ್ಟರ್ ಬಯಸುವರೂ ಸಿರ್ಸಾಗೆ ಬಂದು ಸರ್ಕಾರಿ ಪ್ರಾಯೋಜಕತ್ವದ ಅಥವ ಖಾಸಗಿ ಚಾಪರ್ ಹಿಡಿಯುಲೇ ಬೇಕು.

ಕೆಲವರು ಬಸ್ಸು ಮತ್ತು ಕಾರನಲ್ಲಿ ಬಂದವರು ಕೇದಾರನಾಥಗೆ ಚಾರಣ ಬಯಸುವರು. ಪ್ರವಾಸಿಗರು ತಮ್ಮ ವಾಹನಗಳನ್ನು ಸಿರ್ಸ, ಸೋನಪ್ರಯಾಗ ಅಥವ ಗೌರಿಕುಂಡ್ ನಿಲುಗಡೆಯ ಪ್ರದೇಶಗಳಲ್ಲಿ ನಿಲ್ಲಿಸಿ ಪಾದ ಯಾತ್ರೆ ಮಾಡುತ್ತಾರೆ. ಗೌರಿಕುಂಡದಿಂದ ಸುಮಾರು18 kms ಕೇದಾರನಾಥಕ್ಕೆ ನೆಡೆಯಬೇಕು.
ಈ ಹಿಂದೆ ಮೇಘ ಸ್ಪೂಟದಿಂದ ಕಾಲು ದಾರಿ ಕೊಚ್ಚಿಕೊಂಡು ಹೋಗಿತ್ತು. ಈಗ ಕಾಲು ದಾರಿಯನ್ನು ಸರಿಪಡಿಸಿದಲ್ಲದೆ ಹೂಸ ಕಾಲು ದಾರಿಯನ್ನು ಚಾರಣರ ಅನುಕೂಲಕ್ಕೆ ಮಾಡಿಕೊಡಲಾಗಿದೆ. ನಾವು ಅಂದೆ ಕೇದಾರನಾಥಕ್ಕೆ ಚಾಪರನಲ್ಲಿ ಹೋಗುವುದಿತ್ತು. ಆದರೆ ಡೈರೆಕ್ಟರ್ ಜನರಲ್ ಆಫ್ ಎವಿಯೇಶನ್ ಕೇದಾರನಾಥನಲ್ಲಿ ವಾಸ್ತವ್ಯ ಹೂಡಿದ್ದರಿಂದ ಆ ದಿವಸ ನಮಗೆ ಹೋಗಲು ಸಾಧ್ಯವಾಗಲಿಲ್ಲ. ಆಂದು ಸಿರ್ಸಾದಲ್ಲೇ ನಮ್ಮ ವಾಸ್ತವ್ಯ. ನಮಗೆ ಸ್ವಿಸ್ ಕಾಟೇಜ್ ಕೊಟ್ಟಿದ್ದರು. ಈ ಕಾಟೇಜಿನ ಅನುಭವ ಬೇರೆಯದೇ ಆಗಿತ್ತು.
ಮುಂದುವರಿಯುತ್ತದೆ…
– ಖ್ಯಾತ ಮನೋವೈದ್ಯ ನಾಗೇಶ್ ಎ.ಎಂ.

