ಚಾರ್ ಧಾಮ- ಪ್ರವಾಸ ಕಥನ
ಮುಂದುವರಿದ ಭಾಗ…
ಆ ದಿವಸ ನಮ್ಮನ್ನೆಲ್ಲ ಹೆಲಿ ಗೈಡ್ಸ ಮಧ್ಯಾಹ್ನ 3 ಗಂಟೆಗೆ ತ್ರಿಯುಗ ನಾರಾಯಣ ದೇವಸ್ಥಾನದ ಕಡೆ ಕರೆದುಕೊಂಡು ಹೋದರೈ. ಸುಮಾರು 1,500 ಅಡಿ ಎತ್ತರಕ್ಕೆ ನಮ್ಮ ಚಾಲಕ ಕರೆದೋಯ್ದ. ದೂರ ಕ್ರಮಿಸಿದ್ದು 25 ಕಿಲೋಮೀಟರ್ಸ. ದೇವಸ್ಥಾನ ಚಿಕ್ಕದು. ನಾಗರ ವಾಸ್ತುಶಿಲ್ಪ ಹೊಂದಿದೆ. ಇಲ್ಲೆ ನಾರಾಯಣನ ಸಮ್ಮುಖದಲ್ಲಿ ಶಿವ ಪಾರ್ವತಿಯರ ಮದುವೆ ಆಗಿತ್ತು ಎಂಬ ವಿವರಣೆಯನ್ನು ಅಲ್ಲಿಯ ಪಂಡಿತರು ಹೇಳುತ್ತಾರೆ. ಶಿವ ಪಾರ್ವತಿ ಮದುವೆ ದಿನದಿಂದ ಇಂದಿಗೂ ಅಲ್ಲಿ ಹೋಮ ಕುಂಡ ಜಗಮಗಿಸುತ್ತಿದೆ ಅಥವ ಉರುಯುತ್ತಿದೆ. ಶ್ರೀ ಚಕ್ರವೂ ಇದೆ.
ಅಲ್ಲಿ ದರ್ಶನವಾದ ಮೇಲೆ ನಾವು ಸುಮಾರು 45 ಕಿಲೋಮೀಟರ್ಸನಷ್ಟು ಕಣಿವೆಯ ಕೆಳಗೆ ಇಳಿಯ ಬೇಕು. ಇಳಿದರೆ ನಾವು ಗುಪ್ತ ಕಾಶಿ ಸೇರುತ್ತೇವೆ. ಆಲ್ಲೂ ಸಹ ಮೇಲೆ ಹೇಳಿದ ವಾಸ್ತುಶಿಲ್ಪದ ಚಿಕ್ಕ ದೇವಸ್ಥಾನ ಇದೆ. ಪಾಂಡವರು ಕುರುಕ್ಷೇತ್ರ ಯುದ್ಧಕ್ಕೆ ಹೋಗುವ ಮುನ್ನ ಶಿವನನ್ನು ಪ್ರಾರ್ಥಿಸಿ ದರ್ಶನ ಪಡೆಯಲು ನಿಶ್ಚಯಿಸಿದರು.
ಶಿವ ಇವರಿಗೆ ದರ್ಶನ ಕೊಡಲಿಲ್ಲ. ಕಾರಣ ಪಾಂಡವರು ಮಾಡಿದ್ದ ಹಿಂದಿನ ಪಾಪ. ಅಂದರೆ ಹಿಂದೆ ಅವರ ಬಂಧುಗಳನ್ನೇ ಸಂಹರಿಸಿದ್ದರು ಎನ್ನುವ ಕಾರಣಕ್ಕೆ. ಈ ವಿಷಯವನ್ನು ತಿಳಿದ ಪಾಂಡವರು ಅ ಸ್ಥಳದಲ್ಲೇ ವಿಶ್ವನಾಥನನ್ನು ಪ್ರತಿಷ್ಠಾಪಿಸಿದರು. ಆಗ ಶಿವ ಒಲಿದು ಆರ್ಧ ನಾರಿಶ್ವೀರ ರೂಪದಲ್ಲಿ ಪ್ರತ್ಯಕ್ಷನಾದ ಎನ್ನುವುದು ಇಲ್ಲಿಯ ಪುರಾಣ. ನಾನು ಅರ್ಧ ನಾರಿಶ್ವೀರ ಕತೆ ಸಮಯ ಸಿಕ್ಕಾಗ ಹೇಳುವೆ. ವಿಶ್ವನಾಥನ ಪಕ್ಕದಲ್ಲೇ ಅರ್ಧ ನಾರಿಶ್ವೀರನ ದೇವಸ್ಥಾನ ಇದೆ. ಇಲ್ಲಿನ ಪುಷ್ಕರಣಿಗೆ ಎರಡು ಗೂ ಮುಖದಿಂದ ಶುದ್ಧವಾದ ಬುಗ್ಗೆ ನೀರು ವರ್ಷವಿಡೀ ಸುರಿಯುತ್ತಿರುತ್ತದೆ. ಇದು ಇಲ್ಲಿಯ ವಿಶೇಷತೆ.
ನಮಗೆ ಮೂರು ದಿವಸ ಕಳದೇ ಹೋಯಿತು. ನಾಲ್ಕನೆಯ ದಿನ ಕೇದಾರನಾಥ ಮತ್ತು ಬದರಿನಾಥ ಎರಡೂ ಪುಣ್ಯ ಕ್ಷೇತ್ರಗಳನ್ನು ನೋಡಬೇಕಿತ್ತು. ಬೆಳಿಗ್ಗೆ 9 ಗಂಟೆಗೆ ರೆಡಿ ಇದ್ದೆವು. 10 ರ ವೇಳೆಗೆ ನಮ್ಮ ಸರದಿ ಬಂತು. ಇಲ್ಲಿಂದ ಕೇದಾರನಾಥಗೆ 7 ನಿಮಿಷದ ಹಾರಾಟ. ಈ ಕಣಿವೆ ಕಿರಿದು. ಆದರೆ ಈ ಕಣಿವೆಯಲ್ಲಿ ಹೆಲಿಕಾಪ್ಟರ್ ಹಾರಾಟಗಳು ದಟ್ಟವಾಗಿ ಇರುತ್ತದೆ. ಪೈಲಟ್ಗಳು ತುಂಬ ಜಾಗೃತರಾಗಿರಬೇಕು. ಇಲ್ಲವಾದರೆ ಅಪಘಾತ ಅಥವ ಅವಘಡಗಳು ನೆಡೆಯಬಹುದು.
ಮೇಲಿಂದ ಕಳಗೆ ನೋಡಿದ ನನಗೆ ಕೆಳಗಿನ ಚಾರಣರನ್ನು ಕಂಡು, ‘ಚೇ, ನಾನು 30 ಅಥವ 35 ವರ್ಷ ಹಿಂದೆ ಬರಬಹುದಿತ್ತಲ್ಲವಾ’ ಎಂಬ ಭಾವನೆ ಬಂತು. ದೇವಸ್ಥಾನದ ಹಿಂಭಾಗದಲ್ಲಿ ಇರುವ ವಿ ಐ ಪಿ ಹೆಲಿ ಪ್ಯಾಡ್ ನಲ್ಲಿ ಇಳಿದೆವು. ನಿಗದಿತ ಹೆಲಿ ಗೈಡ್ಸ ನಮ್ಮನ್ನು ತ್ವರಿತವಾಗಿ ದೇವಸ್ಥಾನದ ಅಂಗಳಕ್ಕೆ ಕರೆದುಕೊಂಡು ಹೋದರು. ನಾವು 200 ಮೀಟರಷ್ಟು ನೆಡೆಯುಬೇಕಿತ್ತು. ಚಳಿ, ಮಳೆ ಮತ್ತು ಮೋಡ ಇದ್ದಿದ್ದರಿಂದ ಚಪ್ಪಲಿ ಮತ್ತು ಶೂ ಬಿಟ್ಟು ನೆಡೆಯುಬೇಕೆಂದರೆ ಕಷ್ಟವಾಗಿತ್ತು.
ನಮ್ಮ ಅದೃಷ್ಟವೂ ಏನೂ ಜನಸಂದಣಿ ಕಮ್ಮಿ ಇದ್ದಿದ್ದರಿಂದ ಬೇಗ ದರ್ಶನವಾದರೂ ನೂಕುನುಗ್ಗಲು ಕಡಿಮೇ ಇರಲಿಲ್ಲ. ಇಲ್ಲಿಯ ಪಂಡಿತರು ಚೆಂಡು ಹೂವಿನ ಹಾರ ಹಿಡಿದು ಬಕ ಪಕ್ಷಿಯಂತೆ ಕಾಯುವರು. ಇವರ ಕಪಿ ಮುಷ್ಟಿಗೆ ಸಿಕ್ಕರೆ ನಮ್ಮ ಜೇಬಿಗೆ ಕತ್ತರಿ ಖಂಡಿತ. ಕೇದಾರನಾಥ ಮತ್ತು ಬದರಿನಾಥ ಎರಡು ದೇವಸ್ಥಾನಗಳಲ್ಲಿ ಇರುವ ಪ್ರಧಾನ ಆರ್ಚಕರು ಮೂಲತಹ ಕರ್ನಾಟಕದವರು.

ಕೇದಾರನಾಥನನ್ನು ಅನೇಕ ತರಹದ ನಿರೂಪಣೆಗಳಲ್ಲಿ ವಿವರಿಸಿದ್ದಾರೆ. ಇಲ್ಲಿಯ ಶಿವನಲಿಂಗನ ಆಕರ ಮಾಮೂಲಿನಂತೆ ಇಲ್ಲ. ಕೆಲವರು ಸಂಕಲ್ಪ ಮಾಡಿಸಿ ಗಂಗಾ ಜಲವನ್ನು ಕೇದಾರನಾಥನ ಮೇಲೆ ಬಿಡಿಸುತ್ತಾರೆ. ಅಲ್ಲಿಯ ಪ್ರಸಾದ ನಮ್ಮ ಜಾತ್ರೆಗಳಲ್ಲಿ ಸಿಗುವ ಬತ್ತಾಸು ಮತ್ತು ಸಕ್ಕರೆ ಕಡ್ಲೆ ಕಾಳಿನ ತರ ಇರುತ್ತೆ. ದರ್ಶನ ಆದ ತಕ್ಷಣ ಗೈಡ್ ಬೇಗ ಬೇಗ ಹೆಲಿ ಪ್ಯಾಡ್ ಕಡೆಗೆ ಹೋಗಲು ಹೇಳುತ್ತಾರೆ. ಜನಸಂದಣಿಯನ್ನು ಕಡಿಮೆ ಮಾಡುವ ಪ್ರಯತ್ನ ಇವರದ್ದು . ದೇವಸ್ಥಾನದ ಹಿಂಭಾಗ ಭೀಮ ಶಿಲೆ ಇದೆ. ಈ ಬೃಹತ್ ಕಲ್ಲನ್ನು ಪೂಜಾ ಮನೋಭಾವದಿಂದ ನೋಡುವರು.
ಈ ಕಲ್ಲು ಮೇಘ ಸ್ಪೂಟವಾದಾಗ ಎಲ್ಲಿಂದಲೂ ಬಂದು ದೇವಸ್ಥಾನವನ್ನು ಕಾಪಾಡಿತು ಎಂದು ಸ್ಥಳೀಯರು ಹೇಳುವರು. ನನಗೆ ಮಾತ್ರ ಊಹಿಸಲು ಅಸಾಧ್ಯ. ದೇವಸ್ಥಾನ ಬಾಜುವಿನಲ್ಲೇ ಸರಸ್ವತಿ ನದಿಯು ಹರಿಯುತ್ತದೆ. ಈಗ ದೇವಸ್ಥಾನದ ಹಿಂಭಾಗ ಪೂರ್ತಿ 8 ಅಡಿ ಗೋಡೆಯನ್ನು ಕಟ್ಟಿರುವರು. ಇದರ ಮುಂದೆ ಕಬ್ಬಿಣದಿಂದ ನಿರ್ಮಿಸಿರುವ ಬೇಲಿ ಹಾಕಿರುವರು. ಮೇಲಿಂದ ಉರುಳುವ ಕಲ್ಲುಗಳನ್ನು ಈ ಬೇಲಿ ತಡೆಯುವದು. ಅಕಸ್ಮಾತ್ ಪ್ರವಾಹಗಳು ಬಂದರೆ ನೀರನ್ನು ಗೋಡೆ ತಡೆಯುವದು. ದೇವಸ್ಥಾನಕ್ಕೆ ಯಾವ ಹಾನಿಯೂ ಆಗುವುದಿಲ್ಲ.
ದೇವಸ್ಥಾನದ ಹಿಂಭಾಗದಲ್ಲೇ ಆದಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ನೋಡಬಹುದು. ಬಾವಿ ಆಕಾರದಲ್ಲಿದ್ದು ಕೆಳಗೆ ಆದಿ ಶಂಕರಾಚಾರ್ಯರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ವಿಗ್ರಹವನ್ನು ಕೆತ್ತಿರುವರು ಮೈಸೂರಿನ ಶಿಲ್ಪಿಗಳು. ತುಂಬಾ ತುಂಬಾ ಮುದ್ದಾಗಿ ಇರುವದರಿಂದ ಮತ್ತೆ ಮತ್ತೆ ನೋಡಬೇಕನಿಸುತ್ತದೆ. ಇಲ್ಲಿಂದ ನಾವು ಸೀದಾ ಹೆಲಿಕಾಪ್ಟರ್ ಕಡೆಗೆ ನೆಡೆದೆವು. ಅರ್ಧ ಗಂಟೆಯಲ್ಲಿ ನಮ್ಮ ಚಾಪರ್ ಬಂದು ಸಿರ್ಸಾಗೆ ಕರೆದೋಯ್ತು.

ಸಿರ್ಸಾ ಹೆಲಿ ಪ್ಯಾಡ್ಗೆ ಬಂದು ಇಳಿದ ನಾವು ಅಲ್ಲೆ ಇದ್ದ ತಂಗು ತಾಣದಲ್ಲಿ ಕುಳಿತೆವು. ಮೂದಲೇ ನಮ್ಮ ಲಗೆಜ್ ಇಲ್ಲಿ ತಂದಿಟ್ಟಿದ್ದರು. ಅರ್ಧ ಗಂಟೆಗೆ ಹೆಲಿಕಾಪ್ಟರ್ ಬಂತು. ಇಲ್ಲಿಂದ ಬದರಿನಾಥಗೆ 30 ನಿಮಷದ ಪ್ರಯಾಣ. ಮತ್ತೆ ಅದೇ ಹಿಮಾಲಯ ಪರ್ವತಗಳು. ಆಳದ ಕಂದಕಗಳಲ್ಲಿ ಹರಿಯುತ್ತಿರುವ ಅಲಕಾನಂದ ನದಿ ಮತ್ತು ಈ ನದಿಗೆ ಸೇರುವ ಉಪ ನದಿಗಳು, ಝರಿಗಳು ಹಾಗು ತೊರೆಗಳು. ದೂರದ ಹಿಮ ಶಿಖರಗಳು ಎಲ್ಲವನ್ನೂ ನೋಡಿ ಮೈ ಮರೆತಿದ್ದ ನನಗೆ ಬದರಿನಾಥ ಬಂದೇ ಬಿಡ್ತು. ನಮ್ಮನ್ನೆಲ್ಲಾ ಕಾರಿನಲ್ಲಿ “ಕೋಕಿಲಾ ಬೆನ್ (ಮುಖೇಶ್ ಅಂಬಾನಿ ತಾಯಿ) ಪ್ರವಾಸ ಮಂದಿರಕ್ಕೆ ಕರೆತಂದರು.ಇದು ದೇವಸ್ಥಾನದ ಹತ್ತಿರವೇ ಇದೆ. ಕೋಣೆಗಳು ಶುಭ್ರವಾಗಿ ಇವೆ. ಒಂದು ವಿಷಯ, ನಾವು ಇಳಿದಿದ್ದ ಎಲ್ಲಾ ರೂಮ್ಗಳಲ್ಲಿ ಬಿಸಿ ನೀರು ಸಿಗುವುದಲ್ಲದೆ ರೂಮ್ ಹೀಟರ್ ಇರುತ್ತಿತ್ತು. ರಜಾಯಿ ದಪ್ಪನೆಯದಾಗಿ ಇರುತ್ತೆ. ಒಟ್ಟಾರೆಯಾಗಿ ರೂಮಿನಲ್ಲಿ ಬೆಚ್ಚಗೆ ಇರಬಹದು.
ಮುಂದುವರಿಯುತ್ತದೆ…
– ಖ್ಯಾತ ಮನೋವೈದ್ಯ ನಾಗೇಶ್ ಎ.ಎಂ.

