ಚಾರ್ ಧಾಮ- ಪ್ರವಾಸ ಕಥನ
ಮುಂದುವರಿದ ಭಾಗ…
“ಕರ್ಸಾಲಿ” ಕಣಿವೆಯಲ್ಲಿ ಯಮುನೋತ್ರಿ ಇದೆ. ಹೋಟೆಲ್ನಲ್ಲಿ ನಮ್ಮ ಆಯಾಸವನ್ನು ನೀಗಿದ ತರುವಾಯ ನಮಗೆಂದು ಮೀಸಲಿಟ್ಟಿದ್ದ ಅಡ್ಡ ಪಲ್ಲಕ್ಕಿ ಮೇಲೆ ಕೂತ ನಮ್ಮನ್ನು ನಾಲ್ಕು ನೇಪಾಳ ಮೂಲದ ಯುವಕರು ಎತ್ತಿಕೂಂಡು ಯಮುನೋತ್ರಿ ಕಡೆ ಸಾಗಿದರು. 6 ಕಿಲೋಮೀಟರ್ಸ ನಷ್ಟು ಕಿರಿದಾದ ದಾರಿಯಲ್ಲಿ ಮತ್ತು ಮೆಟ್ಟಿಲ ಮೇಲೆ 3,000 ಅಡಿ ಎತ್ತರಕ್ಕೆ ಸಾಗಬೇಕು.
ಕೆಲವರು ಕಾಲ್ನಡಿಗೆಯಲ್ಲಿ ಚಾರಣ ಮಾಡುವರು. ಕುದುರೆಯ ಮೇಲೇರಿ ಸಹ ಹೋಗಬಹುದು. ಪಲ್ಲಕ್ಕಿ ಬೆಲೆ 8 ರಿಂದ 10 ಸಾವಿರ ಆಗುತ್ತೆ. ತೂಕ ಜಾಸ್ತಿ ಇದ್ದರೆ ಬೆಲೆ ದುಪ್ಪಟ್ಟು. ಕಾಲ್ನಡಿಗೆ ಕ್ಲಿಷ್ಟಕರ. ಸಮಯ ಬೇಕಾಗುವದು. ಪಲ್ಲಕ್ಕಿ ಮೇಲೆ ಹೋದರೆ ದರ್ಶನ ಬೇಗ ಪಡೆದು ಹಿಂದಿರುಗಬಹುದು.
ಕಣಿವೆಯ ದುಡಿಮೆ ಆರು ತಿಂಗಳು ಮಾತ್ರ. ಉಳಿದ ತಿಂಗಳುಗಳು ಹಿಮ ಮತ್ತು ಮಳೆಯಿಂದ ಬಂದ್ ಮಾಡುವರು. ಈ ಸಮಯದಲ್ಲಿ ಪಲ್ಲಕ್ಕಿ ಹೋರಲು ಯುವಕರು ನೇಪಾಳಿಂದ ಬಂದರೇ, ಟಾಕ್ಸಿ ಚಾಲಕರು ಪಂಜಾಬ್ ಕಡೆಯಿಂದ ಬರುವರು. ಪಲ್ಲಕ್ಕಿ ಹೋರುವ ಯುವಕರು ಸಪೂರವಾಗಿ ಇದ್ದು ಬಲವನ್ನು ಹೊಂದಿರುತ್ತಾರೆ. ಅವರ ಎತ್ತರ ಸಮಾನವಾಗಿದ್ದು, ಅವರ ಕಾಲುಗಳು ಬಲವಾಗಿದ್ದು, ಸಮನ್ವಯ ಮತ್ತು ಸಂಯೋಜನೆ ಕರಾರುವಕ್ಕಾಗಿರುವುದರಿಂದ ನಮ್ಮನ್ನು ಎತ್ತರಕ್ಕೆ ಕರೆದೊಯ್ಯುಲು ಇವರಿಗೆ ಸಾಧ್ಯ. ದಾರಿ ಉದ್ದಕ್ಕೂ ಕುದುರೆ ಮತ್ತು ಮ್ಯೂಲ್ ಹಾಕಿದ ಲದ್ದಿ ಕಾಣಬಹುದು.

ಚಾರಣರಿಗೆ ಹಿಂಸೆ. ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ಕುದುರೆ ಇಲ್ಲ ಕತ್ತೆಗಳಿಂದ ಒದೆ. ಕೆಲವು ವೇಳೆ ಪಲ್ಲಕ್ಕಿಗಳಿಂದ ಪೆಟ್ಟು. ತುಂಬ ಏರು ಜಾಗಗಳಲ್ಲಿ ಪಲ್ಲಕ್ಕಿ ಹೋರುವರ ಬಗ್ಗೆ ಅನುಕಂಪ ಉಂಟಾಗುವುದು ಸಹಜ. ಕೆಲ ಕಾಯಕರು ಬುಟ್ಟಿಯಲ್ಲಿ ಯಾತ್ರಿಯನ್ನು ಕೂರಿಸಿಕೊಂಡು, ಬುಟ್ಟಿಯ ಹಗ್ಗವನ್ನು ತಮ್ಮ ಹಣೆ ಪಟ್ಟಿಗೆ ಸಿಕ್ಕಸಿ ಮೇಲೆ ಹತ್ತುವರು. ಪಾಪ, ಹತ್ತುವನು ನೆಲ ನೋಡುತ್ತಾನೆ, ಕೂತಿರುವನು ಆಕಾಶ ನೋಡುತ್ತಿರುತ್ತಾನೆ.
ಈವರ ಶಕ್ತಿಗೆ ಮತ್ತು ಪುಪ್ಪಸ (ಲಂಗ್ಸ್) ಕ್ಕೆ ನನ್ನ ಒಂದು ಸಲಾಮು. ಪಲ್ಲಕ್ಕಿ ಹೋರುವರ ಧಣಿವು ಮತ್ತು ಆಹಾರಕ್ಕೆಂದು ತಗೊಂಡ ಸಮಯ ಸೇರಿ ಏರಲು 2 ತಾಸುಗಳಾದವು. ಮಧ್ಯೆ ಮಧ್ಯೆ ಇವರ ಶ್ರಮ ನೋಡಿ ನಾವೇ ಇಳಿದು ಅವರಿಗೆ ಭಾರ ಕಡಿಮೆ ಮಾಡುತ್ತಿದ್ದೆವು. ಇಳಿಸುವಾಗ ಮುಕ್ಕಾಲು ಗಂಟೆ. ಇವರಲ್ಲೇ ಪೈಪೋಟಿ, ನಮಗೆ ಪ್ರಾಣ ಸಂಕಟ. ಪಲ್ಲಕ್ಕಿ ಮರದಿಂದ ಮಾಡಿದ್ದು ಮತ್ತು ಸುಮಾರಾಗಿರುವುದರಿಂದ ನಮ್ಮ ವೃಷ್ಟ ಮತ್ತು ಬೆನ್ನು ಪದ ಹಾಡತೊಡಗಿದವು. ಸುಧಾರಿಸಿಕೊಳ್ಳಲು ಒಂದು ದಿನ ಬೇಕಾಯಿತು.

ಕೊನೆಗೂ ದೇಗುಲ ತಲುಪಿದೆವು. ಹಿಂದಿನ ದಿನವೇ ದರ್ಶನಕ್ಕೆ 2 ರಿಂದ ಕಿಲೋಮೀಟರ್ಸ ರಷ್ಟು ಸಾಲು ಇತ್ತೆಂದು ಸ್ಥಳೀಯರು ಹೇಳಿದರು. ಯಾತ್ರಿಗಳು ಕಮ್ಮಿ ಇದ್ದಿದ್ದರಿಂದ ನಮಗೆ ಬೇಗ ದರ್ಶನ ಪಡೆದೆವು. ಆದರೂ ನೂಕು ನುಗ್ಗಲು ಕಡಿಮೆಯಾಗಿರಿಲಿಲ್ಲ. ಅಲ್ಲಿಗೆ ಬಂದ ಯಾತ್ರಿಗಳಿಗೆ ಸಾಲು ಎಂಬುದೇ ತಿಳಿದಿಲ್ಲ. ನುಗ್ಗಿ ದರ್ಶನ ಪಡೆದೆವು. ಚಿಕ್ಕ ದೇವಸ್ಥಾನ. ಸಮೀಪದಲ್ಲೇ ಯಮುನೆ ಭೋರ್ಗರೆಯುತ್ತಿದ್ದಾಳೆ. ಪಕ್ಕದಲ್ಲೇ ಬಿಸಿ ನೀರಿನ ಬುಗ್ಗೆ ಇವೆ.
ಹಿಂದೂ ಧಾರ್ಮಿಕ ಪದ್ದತಿಯಲ್ಲಿ ಪೂಜಾ ಮನೋಭಾವ ಸರಿಯಷ್ಟೆ. ನನಗೆ ನುಂಗಲಾರದ ತುತ್ತು, ಏನೆಂದರೆ ಇಂತಹ ಪುಣ್ಯ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ ಎಂಬುದು. ನನಗೆ ಪವಿತ್ರವಾದ ಕ್ಷಣ ಯಮುನೆಯ ಸ್ಪರ್ಶ. ಇದೇ ನನಗೆ ಬೇಕಾಗಿದ್ದು. ನನ್ನ ಜನ್ಮ ಪಾವನವಾಯಿತು. ಒಂದು ಕಿವಿ ಮಾತು, ಯಾರು ಅಲ್ಲಿಯ ಪೂಜಾರಿಗಳಿಗೆ ಮಾರು ಹೋಗಬಾರದು.
ನಾವು 4 ತಾಸುಗಳ ಬಳಿಕ ನಮ್ಮ ಹೋಟೇಲ್ಗೆ ಬಂದು ಸೇರಿದವು. ಧಣಿದಿದ್ದೆವು. ನಮ್ಮ ಧಣಿವು ನೀಗಿಸುಕೊಂಡು ಸಾಯಂಕಾಲ 6 ಗಂಟೆಗೆ ನಮ್ಮನ್ನು ಹೆಲಿ ಗೈಡ್ ಕೆಲವು ದೇವಸ್ಥಾನಳಿಗೆ ಕರೆದೋಯ್ದರು. “ಬರ್ಸಾಲಿ” ಹೆಸರಿನ ಹಳ್ಳಿ ಇದು. ಕಾಲ್ನೆಡಿಗೆಯ ದೂರ. ಇಲ್ಲಿ ಶನೀಶ್ವರನ ದೇವಸ್ಥಾನ ದೇವದಾರ್ ಮರದಿಂದ ಕಟ್ಟಲ್ಪಟ್ಟಿದೆ. ಅಕ್ಕಪಕ್ಕದಲ್ಲೇ ಈಶ್ವರ ಮತ್ತು ಯಮುನೆಯ ದೇವಸ್ಥಾನಗಳು ಕಾಣಬರುತ್ತವೆ.

ಧಣಿದ್ದಿದ್ದ ನಮಗೆ ರಾತ್ರಿ ನಿದ್ದೆ ಬಂದಿದ್ದೆ ಗೊತ್ತಾಗಲಿಲ್ಲ. ಬೆಳಿಗ್ಗೆ 6 ಗಂಟೆಗೆ ರೆಡಿ ಆದೆವು. ಬೆಳಿಗ್ಗೆಯ ಟೀ ಕುಡಿದ ನಮಗೆ ಆಲ್ಲಿಯ ಹೆಲಿ ಗೈಡ್ ನಮ್ಮನ್ನೆಲ್ಲ ಕಾರಿನಲ್ಲಿ ಕೂರಿಸಿ ಹೆಲಿ ಪ್ಯಾಡ್ಗೆ ಕರೆದುಕೊಂಡು ಹೋದರು. 5 ನಿಮಿಷ ಆಗಿರಬೇಕು, ಆಕಾಶದಿಂದ ಹೆಲಿಕಾಪ್ಟರ್ ಪ್ರತ್ಯಕ್ಷ. ಚಾಪರ್ ಏರಿದ ನನಗೆ ಖುಷಿಯೋ ಖುಷಿ.
ಮತ್ತೆ ಹಿಮಾಲಯ ಪರ್ವತ ದರ್ಶನ ನಯನ ಮನೋಹರ. 30 ನಿಮಿಷಗಳ ಹಾರಾಟ, ದೂರದಲ್ಲಿ ಶ್ವೇತ ಧಾರಿ, ಗಂಗಾ ಕುಮುಟ ಸಾಕ್ಷಾತ್ ಶಿವ ದರ್ಶನದ ಭಾವನೆ. ಕಣ್ತುಂಬ ಆಸ್ವಾದಿಸಿ “ಹರ್ಸಿಲ್” ಕಣಿವೆ ಹೆಲಿ ಪ್ಯಾಡ್ಗೆ ಬಂದಿಳಿದೆವು. ಬೆಟ್ಟದ ಸಾಲುಗಳನ್ನ ವೀಕ್ಷಿಸಿದ ನನಗೆ ಕಂಡಿದ್ದು “ಲಾರ್ಡ ಆಫ ರಿಂಗ್ (ಇಂಗ್ಲಿಷ್ ಚಿತ್ರ)” ನ ಹೆಸರುವಾಸಿಯಾದ “ಹರ್ಸಿಲ್ ಹಾರ್ನ” ಶಿಖರ.
ಈ ಹಳ್ಳಿಯ ಹೆಸರು ಬಗೂಲಿಯಾ. ಇಲ್ಲಿ ಆರ್ಮಿ ರೆಜಿಮೆಂಟ ವಾಸ್ತವ್ಯ ಹೂಡಿದೆ. ನಮ್ಮ ಹೋಟೆಲ್ಗೆ ಹೋಗುವ ದಾರಿಯಲ್ಲೇ ಇದೆ. 1962 ಇಸವಿಯ ಮೆಲಕು ಹಾಕಿದಾಗ ಅಂದಿನ ಭಾರತ ಮತ್ತು ಚೀನಾದ ಯುದ್ಧ ನಡೆದಾಗ ಈ ಭಾಗದಿಂದ ಶಸ್ತಾಸ್ತ್ರ ಪೂರೈಕೆ ಆಗುತ್ತಿತ್ತು ಎಂದ ಹೇಳಲಾಗಿದೆ. ಬೋಫಾರ್ ಗನ್ಸ ಮತ್ತು ಅಂತಾಹುದೇ ಸ್ವಲ್ಪ ಚಿಕ್ಕ ಗನ್ಗಳನ್ನ ನೋಡಿದೆವು. ಕೆಲವು ಟ್ಯಾಂಕರ್ಗಳು ಇದ್ದವು. ಹೋಗುವ ದಾರಿಯಲ್ಲಿ ಅರ್ಕಾಟ್, ಆಪ್ರಿಕಾಟ್, ಪ್ಲಮ್, ಪಿಯರ್ಸ ಮತ್ತು ಬೇರೆ ಬೇರೆ ಉಪ ಜಾತಿಯ ಸೇಬಿನ ಗಿಡ ಪರಿಚಯಿಸಿದರು ನಮ್ಮ ಹೆಲಿ ಗೈಡ್. ಹೆಲಿ ಪ್ಯಾಡ್ ಪಕ್ಕದಲ್ಲೇ ಭಗೀರಥಿ ನದಿ ಹರಿಯುತ್ತದೆ. ಇಳಿದ ತಕ್ಷಣ ನದಿಗೆ ಹೋಗಿ ನೀರಿನ್ನು ತಲೆಯ ಮೇಲೆ ಪ್ರೋಕ್ಷನೆ ಮಾಡಿಕೊಂಡೆವು. ನನಗೆ ಬೇಕಿದ್ದು ಇಷ್ಟೆ. ಹಿಂದು ಧರ್ಮದಲ್ಲಿ ಜನಿಸಿದ ನನಗೆ ಮೋಕ್ಷ ಸಿಕ್ಕಿದಷ್ಟು ಖುಷಿ. ನಮ್ಮ ಹೋಟೆಲ್ ಹಿಂದೆ ಭಗೀರಥಿಯ ಉಪ ನದಿ “ಜಲಂಧಾರಿ” ಭೋರ್ಗರೆಯುತ್ತಿದ್ದಾಳೆ. ನಮ್ಮ ರೂಮ್ಗಳು ಸೇಬಿನ ತೋಟದ ಒಳಗೆ ಇವೆ. ಮರದಲ್ಲಿ ಹೇರಳವಾಗಿ ಸೇಬು ಬಿಟ್ಟಿತ್ತು. ಇನ್ನೂ ಈಚು. ಸೆಪ್ಟೆಂಬರ ವೇಳೆಗೆ ಹಣ್ಣಾಗುತ್ತವಂತೆ.

ನಮನ್ನು ಗಂಗೋತ್ರಿಗೆ 2 ಗಂಟೆಗೆ ರೆಡಿ ಇರಲು ಹೇಳಿದ್ದರು. ನಮ್ಮ ಹಳ್ಳಿಯಿಂದ ಗಂಗೋತ್ರಿಗೆ ಒಂದು ಗಂಟೆಯ ಪ್ರಯಾಣ. ಈ ವೇಳೆ ಅಷ್ಟು ರಶ್ ಇರವುದಿಲ್ಲವೆಂದು ಮಧ್ಯಾಹ್ನ ಸಮಯ ನಿಗದಿಪಡಿಸಿದ್ದರು. ಗಂಗೋತ್ರಿ ಕಣಿವೆಯಿಂದ ಸುಮಾರು 500 ಮೀಟರ್ಸ ಏರಬೇಕು. ದೇವಸ್ಥಾನಕ್ಕೆ ಹೋಗುವದಿಕ್ಕಿಂತ ಮುನ್ನ ಆ ಗಂಗೆಯ ಸ್ಪರ್ಶ ಮಾಡಿದೆ. ಕೆಲವರು ಗಂಗೆಯನ್ನು ತಾವು ತಂದ ಚಂಬು, ಪಾತ್ರೆ ಮತ್ತು ಬಾಟಲ್ಗಳಲ್ಲಿ ತುಂಬಿಸಿಕೊಂಡರು. ದೇವಸ್ಥಾನ ಚಿಕ್ಕದಾಗಿ ಇದೆ. ಅದೇ ನೂಕು ನುಗ್ಗಲು. ನಾನು ಬೇಗ ದರ್ಶನ ಮಾಡಿ ಗಂಗೆಯ ದಡದಲ್ಲಿ ಕೂತುಬಿಟ್ಟೆ. ‘ದರ್ಶನ ಚೆನ್ನಾಗಿ ಆಯಿತ’, ಎಲ್ಲರ ಬಾಯಲ್ಲೂ ಸ್ಟಾಂಡರ್ಡ್ ಪ್ರಶ್ನೆ ಇದಾಗಿತ್ತು. ‘ಹೌದು, ಆಯಿತು. ಗಂಗಾ ಮಾತೆ, ವಿಗ್ರಹ ಅಲ್ಲ’, ಅಂದೆ. ನಮಗೆ ದಾರಿಯಲ್ಲಿ “ಲಂಕಾ” ಎಂಬ ಹಳ್ಳಿಯೊಂದು ಎದುರಾಗುತ್ತದೆ. ಎಡಕ್ಕೆ ಹೋದರೆ ಚೀನಾ, ಬಲಕ್ಕೆ ಭಾರತ. ಒಟ್ಟಾರೆ ಈ ಪುಣ್ಯ ಕ್ಷೇತ್ರ ಸೂಕ್ಷ್ಮ ಪ್ರದೇಶ.
ಮುಂದುವರಿಯುತ್ತದೆ…
– ಖ್ಯಾತ ಮನೋವೈದ್ಯ ನಾಗೇಶ್ ಎ.ಎಂ.

