
ಹಾಸನ: ತಾಲ್ಲೂಕಿನ ಗೋಪನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನ-ಜಾನುವಾರುಗಳಿಗೆ ಭಯ ಹುಟ್ಟಿಸಿದ್ದ ಚಿರತೆ ಕಡೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಇದು ಕಳೆದ ಎರಡು-ಮೂರು ತಿಂಗಳಿಂದ ಗೋಪನಹಳ್ಳಿ ಗ್ರಾಮದ ಸುತ್ತಮುತ್ತ ಕಾಣಿಸಿ ಕೊಂಡು ಆತಂಕ ಸೃಷ್ಟಿಸಿತ್ತು.
ಮಾತ್ರವಲ್ಲದೆ ಕುರಿ, ನಾಯಿ ಮೊದಲಾದ ಸಾಕು ಪ್ರಾಣಿಗಳನ್ನು ಹೊತ್ತೊಯ್ದು ತಿಂದು ಹಾಕಿತ್ತು. ಹಗಲು ವೇಳೆ ರೈತರ ಜಮೀನಿನಲ್ಲಿ ಕಾಣಿಸಿಕೊಂಡು, ರೈತರು ಹಾಗೂ ಇತರರು ಹೊರ ಹೋಗಲು ಭಯ ಪಡುವಂತೆ ಮಾಡಿತ್ತು. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದ ಗ್ರಾಮಸ್ಥರು, ಈ ಸಂಬಂಧ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಅದರಂತೆ ಚಿರತೆ ಸೆರೆಗಾಗಿ ಬೋನಿಟ್ಟು ಅದರೊಳಗೆ ನಾಯಿ ಕಟ್ಟಲಾಗಿತ್ತು. ಶ್ವಾನ ತಿನ್ನುವ ಆಸೆಯಿಂದ ಬಂದ ಚಿರತೆ ಅಲ್ಲೇ ಬಂಧಿಯಾಗಿದ್ದು, ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.