ಚಿಕ್ಕಬಳ್ಳಾಪುರ, ಜೂನ್ 10: 2025ನೇ ಸಾಲಿನ 13ನೇ ರಾಜ್ಯ ಸಚಿವ ಸಂಪುಟದ ಸಭೆ (Cabinet Meeting) ಜೂನ್ 19 ರಂದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನಂದಿ ಗಿರಿಧಾಮದಲ್ಲಿ (Nandi Hills) ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಸಚಿವ ಸಂಪುಟ ದರ್ಜೆಯ ಎಲ್ಲ ಮಂತ್ರಿಗಳು, ಶಾಸನ ಸಭಾ ಹಾಗೂ ವಿಧಾನಸಭಾ ಸದಸ್ಯರು, ಇಲಾಖಾ ಮುಖ್ಯಸ್ಥರು ಭಾಗಿಯಾಗುತ್ತಾರೆ. ಈ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜೂನ್ 16 ರ ಸಂಜೆ 6 ಗಂಟೆಯಿಂದ ಜೂನ್ 20ರ ನಸುಕಿನ ಜಾವ 5 ಗಂಟೆವರೆಗೂ ಸಾರ್ವಜನಿಕರು ನಂದಿ ಬೆಟ್ಟಕ್ಕೆ ಬರದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ಆದೇಶ ಹೊರಡಿಸಿದ್ದಾರೆ.
ಇನ್ನು ನಂದಿ ಬೆಟ್ಟದ ಮೇಲೆ ಇರುವ ಅತಿಥಿ ಗೃಹಗಳ ಕಾರ್ಯ ಚಟುವಟಿಕೆಗೂ ನಿರ್ಬಂಧ ಹೇರಲಾಗಿದೆ. ಜೂನ್ 17 ರಿಂದ 19 ರವರೆಗೆ ನಂದಿ ಬೆಟ್ಟದ ಮೇಲೆ ವಸತಿ ಕೊಠಡಿಗಳ ಬುಕಿಂಗ್ ರದ್ದು ಮಾಡಲಾಗಿದೆ.
ಏಕೆ ಬಂದ್ ಮಾಡಲಾಗಿದೆ ?
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಹೋಗಲು ಹಾಗೂ ಬರಲು ಒಂದೇ ರಸ್ತೆ ಇದ್ದು ವಾಹನ ದಟ್ಟಣೆ ಹೆಚ್ಚಾಗುತ್ತದೆ. ನಂದಿ ಬೆಟ್ಟದಲ್ಲಿನ ರಸ್ತೆಗಳು ಕಡಿದಾದ ತಿರುವುಗಳಿಂದ ಕೂಡಿದ್ದು, ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಈ ಹಿನ್ನಲೆಯಲ್ಲಿ ಪೊಲೀಸರು ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 16 ರ ಸಂಜೆ 6 ಗಂಟೆಯಿಂದ ಜೂನ್ 20 ರ ಬೆಳಿಗ್ಗೆ 5 ಗಂಟೆಯವರೆಗೆ ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಿ ಆದೇಶಿಸಿದ್ದಾರೆ. ಹಾಗೂ ಜೂನ್ 17 ರಿಂದ 19 ರವರೆಗೆ ನಂದಿ ಬೆಟ್ಟದ ಮೇಲೆ ವಸತಿ ಕೊಠಡಿಗಳ ಬುಕ್ಕಿಂಗ್ ನಿಷೇಧಿಸಿದ್ದಾರೆ.
ನಂದಿ ಬೆಟ್ಟದಲ್ಲಿ ಸಾರ್ಕ್ ಶೃಂಗಸಭೆ
1986ರಲ್ಲಿ ನಂದಿ ಗಿರಿಧಾಮದಲ್ಲಿ ಎರಡನೇ ಸಾರ್ಕ್ ಶೃಂಗಸಭೆ ನಡೆದಿತ್ತು. ಇದೀಗ, ರಾಜ್ಯ ಸರ್ಕಾರ ನಂದಿ ಬೆಟ್ಟದಲ್ಲಿನ ಪ್ರಕೃತಿ ಸೊಬಗಿನತ್ತ ಚಿತ್ತಹರಿಸಿದ್ದು, ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ಮಹಾತ್ಮ ಗಾಂಧಿಜಿ, ಜವಾಹರಲಾಲ್ ನೆಹರು ಸೇರಿದಂತೆ ವಿಶ್ವದ ಖ್ಯಾತನಾಮರು ನಂದಿ ಬೆಟ್ಟದ ಪ್ರಕೃತಿ ಸೊಬಗಿಗೆ ಮನಸೋತಿದ್ದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
ಇದೇ ವರ್ಷ ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆ ನಡೆದಿತ್ತು. ಕಳೆದ ವರ್ಷ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು.

[…] ಚಿಕ್ಕಬಳ್ಳಾಪುರ-“ನಂದಿ ಬೆಟ್ಟ ಪ್ರವೇಶಕ್… […]