ಕೊಣನೂರು : ಕೊಣನೂರು ಹೋಬಳಿಯ ಚಿಕ್ಕಬೊಮ್ಮನಹಳ್ಳಿಯ ಶ್ರೀ ರಂಗನಾಥಸ್ವಾಮಿ ಜಾತ್ರಾಮಹೋತ್ಸವವು ಮಾರ್ಚ್ 12ರಿಂದ 14ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಹಾಸನ ಮತ್ತು ಕೊಡಗು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥಸ್ವಾಮೀಜಿ ತಿಳಿಸಿದ್ದಾರೆ.
ಚಿಕ್ಕಬೊಮ್ಮನಹಳ್ಳಿ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿನ ಮಠದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಜಾತ್ರಾಮಹೋತ್ಸವವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಮಾರ್ಚ್ 12ರ ಸಂಜೆ ಗೋಧೂಳಿ ಲಗ್ನದಲ್ಲಿ ದೇವಾಲಯದ ಆವರಣದಲ್ಲಿ ಧರ್ಮಧ್ವಜ ಸ್ಥಾಪನೆ ನಡೆಯಲಿದೆ. ಮಾರ್ಚ್ 13ರ ಬೆಳಿಗ್ಗೆ ಕ್ಷೇತ್ರದ ಅಧಿದೇವತೆ ಶ್ರೀ ರಂಗನಾಥಸ್ವಾಮಿಗೆ ಪುಣ್ಯಾಹ, ವಿವಿಧ ಅಭಿಷೇಕಗಳು, ಸುದರ್ಶನ ಹೋಮ, ಗಣಪತಿ ಹೋಮ, ಮಹಾಪೂಜೆ, ಷೋಡಷೋಪಚಾರ ಪೂಜೆ, ಮಹಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಅದೇ ದಿನ ಸಂಜೆ ಗೋಧೂಳಿ ಲಗ್ನದಲ್ಲಿ ಮಹಾರಥೋತ್ಸವ ನಡೆಯಲಿದೆ ಎಂದು ವಿವರಿಸಿದರು.
ಸಂಜೆ ಕ್ಷೇತ್ರಕ್ಕೆ ಆಗಮಿಸುವ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಮತ್ತಿನಪಲ್ಲಕ್ಕಿ ಉತ್ಸವದ ಮೂಲಕ ದೇವಾಲಯದ ಬಳಿಗೆ ಕರೆತರಲಾಗುತ್ತದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಸಕರು, ಮಾಜಿ ಶಾಸಕರು ಹಾಗೂ ತಾಲ್ಲೂಕಿನ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಥೋತ್ಸವದಂದು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಜಾತ್ರಾಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಳೆನಹಳ್ಳಿ ಅಣ್ಣೇಗೌಡ, ಬೊಮ್ಮನಹಳ್ಳಿ ಕೋಡಿಗೌಡ, ಹೊನ್ನಗೋಡನಹಳ್ಳಿ ಶ್ರೀನಿವಾಸ್, ಪ್ರಾಂಶುಪಾಲ ಹೋಡೆನೂರು ಮಹೇಶ್, ಮಠದ ಶಿಷ್ಯ ರತನ್, ಗ್ರಾಮ ಪಂಚಾಯಿತಿ ಸದಸ್ಯ ರಾಮನಾಥಪುರ ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ- ಕುಮಾರಸ್ವಾಮಿ
