
ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ನಾಗರೀಕರಿಗೂ ತಲುಪಿಸಿ ಅವರ ಜೀವನ ಸುಧಾರಣೆಗೆ ಸಹಕರಿಸುವುದರೊಂದಿಗೆ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿಗೊಳಿಸುವುದೇ ನನ್ನ ಗುರಿ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಸಖರಾಯಪಟ್ಟಣ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿ ಸೇರಿದಂತೆ ಸಖರಾಯಪಟ್ಟಣ ವ್ಯಾಪ್ತಿಯ ರಸ್ತೆ, ದೇವಸ್ಥಾನ, ಸಮುದಾಯ ಭವನ, ಕಾಂಪೌಂಡ್ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸುವುದರ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮಾಂತರ ಭಾಗವನ್ನು ಒಳಗೊಂಡಂತೆ ಕ್ಷೇತ್ರಕ್ಕೆ ಒಟ್ಟು ೨೫ ಕೋಟಿ ರೂ.ಗಳ ವಿಶೇಷ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಸಖರಾಯಪಟ್ಟಣ ವ್ಯಾಪ್ತಿಯಲ್ಲಿ ದೇವಸ್ಥಾನ, ಆಟೋ ನಿಲ್ದಾಣ ಹಾಗೂ ರಸ್ತೆ ಸೇರಿದಂತೆ ಸುಮಾರು ೨ ಕೋಟಿಗೂ ಹೆಚ್ಚಿನ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ೪ ತಿಂಗಳೊಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಗುಬ್ಬಿಹಳ್ಳಿ ಗೇಟ್ನಿಂದ ದೇವನೂರುವರೆಗೂ ಒಟ್ಟು ೨೯ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಂಡು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದ ಅವರು ಅಭಿವೃದ್ಧಿ ಕಾರ್ಯಗಳೊಂದಿಗೆ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರವು ಸಮಾಜದ ಎಲ್ಲಾ ಬಡವರು, ಹಿಂದುಳಿದ ವರ್ಗ ಹಾಗೂ ಶೋಷಿತ ವರ್ಗದವರ ಪರವಾದ ಯೋಜನೆಗಳನ್ನು ರೂಪಿಸಿ ಅವರ ಏಳಿಗೆಗಾಗಿ ದುಡಿಯುವುದಲ್ಲದೇ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಎತ್ತಿನ ಹೊಳೆ ಯೋಜನೆ ಮೂಲಕ ಯೋಜನಾ ವ್ಯಾಪ್ತಿಯಲ್ಲಿ ನಮ್ಮ ಕ್ಷೇತ್ರ ಇಲ್ಲದಿದ್ದರು ಸಹ ಮನವಿ ಮೇರೆಗೆ ಹಳೇಬೀಡು, ದೇವನೂರು, ಬೆಳವಾಡಿ ಕೆರೆಗಳನ್ನು ಭರ್ತಿಗೊಳಿಸಿರುವುದು ಇಲ್ಲಿನ ರೈತರ ಸಂತಸಕ್ಕೆ ಕಾರಣವಾಗಿದೆ ಹೇಳಿದರು.
ಈ ಸಂದರ್ಭದಲ್ಲಿ ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿ ಮನೆ ಸತೀಶ್, ಗಣೇಶ್, ರಾಜಣ್ಣ, ಕಿರಣ್, ಲೋಕೇಶ್, ಸಚಿನ್ಎತ್ತಿನ ಮನೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.