ಬೆಂಗಳೂರು, ಫೆ. 6: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಮ್ಯೂಲ್ ಅಕೌಂಟ್ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚನಾ ಜಾಲವನ್ನು ಸಿಐಡಿ ಸೈಬರ್ ಕ್ರೈಂ ವಿಭಾಗ ಭೇದಿಸಿದೆ. ರಾಜ್ಯಾದ್ಯಂತ ಏಕಕಾಲಕ್ಕೆ ನೂರಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ ಸಿಐಡಿ ತಂಡಗಳು, ಅಕ್ರಮಕ್ಕೆ ಬಳಸಲಾಗುತ್ತಿದ್ದ 40 ಸಾವಿರಕ್ಕೂ ಅಧಿಕ ಮ್ಯೂಲ್ ಅಕೌಂಟ್ಗಳನ್ನು ಪತ್ತೆಹಚ್ಚಿವೆ.
ಫೆಬ್ರವರಿ 6ರಂದು ನಡೆದ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಈ ದಂಧೆಯ ಪ್ರಮುಖ 13 ಮಾಸ್ಟರ್ಮೈಂಡ್ಗಳನ್ನು ಬಂಧಿಸಿದ್ದಾರೆ. ಅಮಾಯಕ ಜನರ ಬ್ಯಾಂಕ್ ಖಾತೆಗಳು, ಎಟಿಎಂ ಕಾರ್ಡ್ಗಳು ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ಒದಗಿಸಲಾಗುತ್ತಿತ್ತು ಎಂಬುದು ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಮ್ಯೂಲ್ ಅಕೌಂಟ್ಗಳ ಮೂಲಕ ಆನ್ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್ಡ್ರಾ ಮಾಡಲಾಗುತ್ತಿತ್ತು.
ಇದನ್ನು ಓದಿ: ಬೆಂಗಳೂರುದಲ್ಲಿ ವಿದೇಶಿ ರಾಯಭಾರಿ ಕಚೇರಿಗಳಿಗೆ ಸರಣಿ ಬಾಂಬ್ ಬೆದರಿಕೆ; ಭದ್ರತೆ ಬಿಗಿಗೊಳಿಸಿದ ಪೊಲೀಸರು
ತನಿಖೆಯ ವೇಳೆ ಖಾತೆ ವಿವರ ನೀಡಿದ ಅಮಾಯಕ ಜನರಿಗೆ ತಮ್ಮ ಖಾತೆಗಳು ವಂಚನೆಗೆ ಬಳಸಲಾಗುತ್ತಿದೆ ಎಂಬ ಮಾಹಿತಿ ಇರಲಿಲ್ಲ ಎಂಬುದು ತಿಳಿದುಬಂದಿದೆ. ಇದುವರೆಗೆ ಸುಮಾರು 42 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್ಗಳು ಸಕ್ರಿಯವಾಗಿದ್ದವು ಎಂಬುದನ್ನು ಸಿಐಡಿ ಪತ್ತೆಹಚ್ಚಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮ್ಯೂಲ್ ಅಕೌಂಟ್ಗಳ ವಿರುದ್ಧ ಸಿಐಡಿ ಸೈಬರ್ ಕ್ರೈಂ ತಂಡ ತೀವ್ರ ನಿಗಾ ವಹಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
