ಚಿಕ್ಕಮಗಳೂರು, ಜುಲೈ 25: ಜಿಲ್ಲೆಯ ಅಮೃತಮಹಲ್ ಕಾವಲ್ ಪ್ರದೇಶದಲ್ಲಿ ನಡೆದಿರುವ ಭೂಅಧಿಕ್ರಮಣವನ್ನು ತಕ್ಷಣವೇ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಸಮಗ್ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಸಭೆಯಲ್ಲಿಯೇ ಈ ಬಗ್ಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಜಂಟಿ ಸರ್ವೇ ನಡೆಸಿ, ಒತ್ತುವರಿ ತೆರವುಗೊಳಿಸಿ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಸೂಚಿಸಿದರು.
ಅನುದಾನಿತ ಶಾಲೆಗಳ ಫಲಿತಾಂಶದ ಕುರಿತು ಚುರುಕಾಗಿ ಕ್ರಮ:
2024–25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಅನುದಾನಿತ ಶಾಲೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಶೀಘ್ರ ಕ್ರಮ ಜರುಗಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾ ಉಪನಿರ್ದೇಶಕರ ಪ್ರಕಾರ, ಶೇ. 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ 13 ಶಾಲೆಗಳ ಮಾನ್ಯತೆ ರದ್ದುಪಡಿಸಲು ನೋಟಿಸ್ ನೀಡಲಾಗಿದೆ. ಮುಂದಿನ ವರ್ಷ ಉತ್ತಮ ಫಲಿತಾಂಶಕ್ಕಾಗಿ 29 ಅಂಶಗಳ ಯೋಜನೆಯನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.
ವಿದ್ಯುತ್, ರಸ್ತೆ ಮತ್ತು ಸೇತುವೆಗಳಿಗೆ ಭಾರಿ ಹಾನಿ:
ಜುನ್ ತಿಂಗಳಿಂದ ಈವರೆಗೆ ಜಿಲ್ಲೆಯಾದ್ಯಂತ 1273 ವಿದ್ಯುತ್ ಕಂಬಗಳು ಧರೆಗುರುಳಿದ್ದು, ₹217.51 ಲಕ್ಷ ನಷ್ಟ ಸಂಭವಿಸಿದೆ. ಬದಲಾವಣೆಯ ಕಾರ್ಯ ಚುರುಕಾಗಿ ನಡೆಯುತ್ತಿದ್ದು, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಬಗಳು ಬದಲಾಗಿವೆ.
ಹೀಗೇ, ಜಿಲ್ಲೆಯಲ್ಲಿ 11.49 ಕಿಮೀ ರಾಜ್ಯ ಹೆದ್ದಾರಿ ಹಾಗೂ 10.97 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳು ಹಾನಿಗೀಡಾಗಿದ್ದು, ಒಟ್ಟು ₹4525 ಲಕ್ಷ ನಷ್ಟ ಸಂಭವಿಸಿದೆ. 16 ಸೇತುವೆಗಳು ಹಾನಿಗೊಂಡಿವೆ. ಗ್ರಾಮೀಣ ರಸ್ತೆಗಳ 525 ಕಿಮೀ ಪ್ರದೇಶದ ಹಾನಿಯಿಂದ ₹2788 ಲಕ್ಷ ನಷ್ಟ ಸಂಭವಿಸಿದೆ. ಈ ನಡುವೆ 11 ಸರ್ಕಾರಿ ಶಾಲಾ ಕಟ್ಟಡಗಳು, 2 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸರ್ಕಾರಿ ಕಟ್ಟಡಗಳಿಗೆ ₹26 ಲಕ್ಷ ನಷ್ಟವಾಗಿದೆ.
ವಸತಿ ನಷ್ಟ ಮತ್ತು ಪರಿಹಾರ:
ಜಿಲ್ಲೆಯಲ್ಲಿ ಈವರೆಗೆ 38 ಮನೆಗಳಿಗೆ ಹಾನಿಯಾಗಿದ್ದು, 9 ಮನೆಗಳು ಸಂಪೂರ್ಣ ಹಾನಿಗೊಂಡಿವೆ. 8 ಮನೆಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, ಉಳಿದ ಮನೆಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ C.N., ZP CEO H.S. ಕೀರ್ತನಾ, SP ಡಾ. ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
