ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭವಾರ್ತೆ ನೀಡಿದ್ದಾರೆ. ಹಳೆ ಪಿಂಚಣಿ ಯೋಜನೆ ಕುರಿತು ನೌಕರರು ಒತ್ತಾಯಿಸುತ್ತಿರುವ ನಡುವೆಯೇ, ಇದೀಗ ತುಟ್ಟಿಭತ್ಯೆ ನೀಡುವ ಕುರಿತು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಅವರು ಘೋಷಿಸಿದರು. ಕೇಂದ್ರ ಸರ್ಕಾರ ತುಟ್ಟಿಭತ್ಯೆ ನೀಡಿದ ನಂತರ ರಾಜ್ಯದಲ್ಲೂ ಅದೇ ರೀತಿ ಅನುಸರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ ಉತ್ಸವ ರಾಜಕೀಯದ ವಿಷಯವಲ್ಲ ಎಂದು ಸ್ಪಷ್ಟನೆ ನೀಡಿದರು. ದಸರಾ ಉದ್ಘಾಟಕರ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದವರ ವಿರುದ್ಧ ಸುಪ್ರೀಂ ಕೋರ್ಟ್ ತಿರುಗೇಟು ನೀಡಿದೆ. “ಸಂವಿಧಾನದ ಬಗ್ಗೆ ಅರಿವಿಲ್ಲದವರೇ ಇಂತಹ ವಿರೋಧ ವ್ಯಕ್ತಪಡಿಸುತ್ತಾರೆ. ಕರ್ನಾಟಕ ಜಾತ್ಯಾತೀತ ರಾಜ್ಯ” ಎಂದು ಅವರು ತಿಳಿಸಿದರು.
ಇದನ್ನು ಓದಿ: ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಯ ಹಾದಿ : ಗಮನ ಸೆಳೆದ “ಸಮುದ್ರ ಹಸು” ಡುಗಾಂಗ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ದೀಪಾಲಂಕಾರ, ಡ್ರೋನ್ ಶೋ ಸೇರಿದಂತೆ ವಿವಿಧ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ದಸರಾ ಪ್ರಾಧಿಕಾರದ ಅವಶ್ಯಕತೆಯ ಬಗ್ಗೆ ಕೇಳಿದ ಪ್ರಶ್ನೆಗೆ, “ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ, ವಸ್ತು ಪ್ರದರ್ಶನ ಪ್ರಾಧಿಕಾರಗಳಿವೆ. ಹೊಸ ಪ್ರಾಧಿಕಾರದ ಅಗತ್ಯವಿಲ್ಲ” ಎಂದು ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡರು.
ವಿಪಕ್ಷಗಳು ಮಾಡಿದ ಭವಿಷ್ಯವಾಣಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ವಿಪಕ್ಷಗಳು ಭವಿಷ್ಯಕಾರರಲ್ಲ. ವಾಸ್ತವ ಅರಿವಿಲ್ಲದೇ ಮಾತನಾಡುತ್ತಿದ್ದಾರೆ. ನಾನು ಮುಂದಿನ ವರ್ಷಗಳಲ್ಲಿಯೂ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಾತಿ ಸಮೀಕ್ಷೆಯ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಅಸಮಾನತೆಯನ್ನು ನಿವಾರಿಸಿ ದುರ್ಬಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಉದ್ದೇಶಿಸಲಾಗಿದೆ ಎಂದರು. “ಅಸಮಾನತೆ ಶಾಶ್ವತವಾಗಿರಬೇಕೆಂದು ಬಿಜೆಪಿ ಬಯಸುತ್ತದೆ. ಆದರೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯವರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರವೂ ಜಾತಿ ಗಣತಿಗೆ ಮುಂದಾಗಿದೆ” ಎಂದು ಅವರು ಹೇಳಿದರು.
