ನವದೆಹಲಿ : ಎಲ್ಐಸಿ ಹಾಗೂ ಐಆರ್ಡಿಎ ನಿಯಮಗಳಲ್ಲಿನ ಬದಲಾವಣೆಯಿಂದ ಬಡ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ವಿಮೆ ಕೈಗೆಟುಕದಂತಾಗಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಎಲ್ಐಸಿ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಲ್ಐಸಿ “ ಸಂಸದ ರಾಹುಲ್ ಗಾಂಧಿ ಎಲ್ಐಸಿ ಏಜೆಂಟರ್ನ್ನು ಭೇಟಿಯಾಗಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಕೆಲವು ಸ್ಪಷ್ಟನೆ ನೀಡಲು ಬಯಸುತ್ತೇವೆ. ಎಲ್ಐಸಿ ಅಕ್ಟೋಬರ್ 1, 2024ರಿಂದ ಜಾರಿಗೆ ಬರುವಂತೆ ಐಆರ್ಡಿಎ ರೂಪಿಸಿರುವ ಹೊಸ ಉತ್ಪನ್ನಗಳ ನಿಯಮಕ್ಕೆ ಅನುಗುಣವಾಗಿ ಪಾಲಿಸಿದಾರರ ಹಿತಾಸಕ್ತಿ ಹಾಗೂ ಅವರ ಆದ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಎಲ್ಐಸಿ ತನ್ನ ಉತ್ಪನ್ನಗಳನ್ನು ಪರಿಚಯಿಸಿದೆ. ಜೀವ ವಿಮಾ ರಕ್ಷಣೆಯನ್ನು ವಿಸ್ತರಿಸಲು ನಿಗಮವು ಬದ್ಧವಾಗಿದೆ. ಎಲ್ಐಸಿ ನಿರಂತರವಾಗಿ ಗ್ರಾಮೀಣ ಪ್ರದೇಶ , ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪ್ರದೇಶವನ್ನು ತಲುಪಲು ತನ್ನ ಕಾರ್ಯಚಟುವಟಿಕೆಯನ್ನು ಕೇಂದ್ರೀಕರಿಸಿದೆ. ವಿಮೆಗೆ ಅರ್ಹವಾದ ಪ್ರತಿಯೊಬ್ಬ ವ್ಯಕ್ತಿಗೆ ಕೈಗೆಟುಕುವ ದರದಲ್ಲಿ ಆರ್ಥಿಿಕ ರಕ್ಷಣೆಯನ್ನು ವಿಸ್ತರಿಸುವುದು ನಮ್ಮ ಗುರಿ “ ಎಂದು ಎಲ್ಐಸಿ ಸಿಇಒ ಹಾಗೂ ಎಂಡಿ ಸಿದ್ದಾರ್ಥ ಮೊಹಾಂತಿ ತಿಳಿಸಿದ್ದಾರೆ.
ಎಲ್ಐಸಿ ಎಲ್ಲಾ ರೆಗ್ಯೂಲೆಟರಿ ನಿಯಮಗಳಿಗೆ ಬದ್ಧವಾಗಿದೆ. ವಿವಿಧ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ವಿವಿಧ ಯೋಜನೆಗಳನ್ನು ಪರಿಚಯಿಸಲಾಗಿದೆ. ಉದಾಹರಣೆಗೆ ನಮ್ಮ ಮೈಕ್ರೋ ಬಚತ್ ಪ್ಲ್ಯಾನ್ ಕನಿಷ್ಟ 1 ಲಕ್ಷ ರು ವಿಮಾ ಮೊತ್ತದ ಭರವಸೆಯನ್ನು ನೀಡುತ್ತದೆ. ಈ ಯೋಜನೆಗೆ ಜಿಎಸ್ಟಿ ವಿನಾಯಿತಿ ಕೂಡ ನೀಡಲಾಗಿದೆ. ಉತ್ಪನ್ನಗಳ ನಿಯಮಗಳಲ್ಲಿ ಬದಲಾವಣೆ ಬಳಿಕವೂ ಏಜೆಂಟ್ಗಳ ಕಮಿಷನನ್ನು ಕಡಿಮೆ ಮಾಡಿಲ್ಲ. ಗ್ರಾಹಕರಿಗೆ ಆರ್ಥಿಕ ಭದ್ರತೆ ನೀಡುವುದರ ಜತೆಗೆ ಏಜಂಟರ ಹಿತಾಸಕ್ತಿಗೂ ಬದ್ಧವಾಗಿದೆ ಎಂದು ಮೊಹಾಂತಿ ಸ್ಪಷ್ಟನೆ ನೀಡಿದ್ದಾರೆ.

