ಮಂಗಳೂರು: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಐವರು ಡ್ರಗ್ ಪೆಡ್ಲರ್ಗಳನ್ನು ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಿಕರ್ನಕಟ್ಟೆ ಬಳಿಯ ಅಡು ಮರೋಳಿ ನಿವಾಸಿ ತುಷಾರ್ ಸೋನು(21), ನಾಗುರಿ ನಿವಾಸಿ ಧನ್ವಿ ಶೆಟ್ಟಿ(20), ಜಲ್ಲಿಗುಡ್ಡೆ ನಿವಾಸಿ ಸಾಗರ್ ಕರ್ಕೇರ(19), ಶಕ್ತಿನಗರ ನಿವಾಸಿ ವಿಕಾಸ್ ಥಾಪಾ ಅಲಿಯಾಸ್ ಪುಚ್ಚಿ(23), ಅಳಕೆ, ಕಂಡೆಟ್ಟು ನಿವಾಸಿ ವಿಶ್ವೇಶ್ ಕಾಮತ್(24) ಬಂಧಿತ ಪೆಡ್ಲರ್ಗಳು.
ಮಾದಕ ವ್ಯಸನಕ್ಕೆ ಬಲಿಯಾಗಿರುವ ವಿದ್ಯಾರ್ಥಿಯೋರ್ವನ ತಂದೆ ಪೊಲೀಸ್ ಕಮಿಷನರ್ಗೆ ಈ ಬಗ್ಗೆ ದೂರು ನೀಡಿದ್ದರು. ಅದರಂತೆ ಸೆನ್ ಠಾಣೆಯಿಂದ ತಂಡವೊಂದು ರಚಿಸಿ ತನಿಖೆ ನಡೆಸಲಾಗಿತ್ತು. ತನಿಖೆ ವೇಳೆ ಮಂಗಳೂರು ನಗರದ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಮಾದಕದ್ರವ್ಯ ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದ ಐವರು ಪೆಡ್ಲರ್ಗಳು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪ್ರತಿಯೊಬ್ಬ ಪೆಡ್ಲರ್ಗಳ ಬಳಿ 1 ಕೆ.ಜಿ.ಗಿಂತ ಅಧಿಕ ಪ್ರಮಾಣದ ಗಾಂಜಾ ಹಾಗೂ ಗಾಂಜಾ ಪ್ಯಾಕೇಟ್ ಸೇರಿದಂತೆ ಒಟ್ಟು 5.759 ಕೆ.ಜಿ. ತೂಕದ 5,20,000ರೂ. ಮೌಲ್ಯದ ನಿಷೇಧಿತ ಮಾದಕದ್ರವ್ಯ ಪತ್ತೆಯಾಗಿದ್ದು, ಇದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪೆಡ್ಲರ್ಗಳು ಗಾಂಜಾವನ್ನು ಸಣ್ಣ ಸಣ್ಣ ಪೊಟ್ಟಣಗಳನ್ನಾಗಿ ಮಾಡಿ, ಅದನ್ನು 1000ರೂ.ನಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ತನಿಖೆ ಮುಂದುವರೆದಿದ್ದು, ಆರೋಪಿಗಳಿಗೆ ಎಲ್ಲಿಂದ ಗಾಂಜಾ ಪೂರೈಕೆಯಾಗುತ್ತಿದೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆರು ಮೊಬೈಲ್ ಫೋನ್ಗಳು, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, “ಗಾಂಜಾ ವ್ಯಸನಿಯ ತಂದೆ ನೀಡಿದ ದೂರಿನಂತೆ ತನಿಖೆಗೆ ತಂಡ ರಚಿಸಿದಾಗ 200 ಜನರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ 5 ಮಂದಿ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಇವರು ಸಣ್ಣಸಣ್ಣ ಪ್ಯಾಕೆಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದರು. ಇವರಿಂದ 7 ಕೆ ಜಿ ಗಾಂಜಾ ವಶಪಡಿಸಲಾಗಿದೆ. ಒಬ್ಬರು ಬಂದು ದೂರು ಕೊಟ್ಟಾಗ 200 ಮಂದಿಗೆ ಡ್ರಗ್ಸ್ ಸಪ್ಲೈ ಮಾಡುವುದನ್ನು ತಡೆಯಲಾಗಿದೆ. ಅದೇ ರೀತಿ ನೂರು ಮಂದಿ ಕಂಪ್ಲೆಂಟ್ ಕೊಟ್ಟರೆ ಮಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಇಲ್ಲದಂತೆ ಮಾಡಬಹುದು” ಎಂದು ತಿಳಿಸಿದ್ದಾರೆ.
