ಚನ್ನರಾಯಪಟ್ಟಣ, ಜುಲೈ 9 – ಹಿರಿಸಾವೇ ಹೋಬಳಿಯ ತೋಟಿ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ಹೇಮಾವತಿ ಜಲಾಶಯ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ, “ತೋಟಿ ಯೋಜನೆಯ ವಿಳಂಬದಿಂದ ನೂರಾರು ಎಕರೆ ಭೂಮಿ ಹಂಗಾಮಿ ಬೆಳೆ ಇಲ್ಲದೇ ಉಳಿದಿದ್ದು, ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಮುಂದುವರೆದಿದೆ. ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸಿ, ಎಲ್ಲ ಕೆರೆಗಳನ್ನು ತುಂಬಿಸಿ, ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷರಾದ ಸೋಮಶೇಖರ್ ಮತ್ತು ಕುಮಾರ್, ಉಡುಪಿ ಜಿಲ್ಲೆಯ ಪ್ರೇಮ್, ಹಾಸನ ಜಿಲ್ಲಾಧ್ಯಕ್ಷ ಹೊಸಹಳ್ಳಿ ಮೀಸೆ ಮಂಜಣ್ಣ, ತಾಲೂಕು ಅಧ್ಯಕ್ಷ ಪಡುವನಹಳ್ಳಿ ಟೈಲರ್ ಕುಮಾರ್, ಮುಖಂಡರಾದ ವಿಜಯಕುಮಾರ್, ನಾಗಣ್ಣ, ಮಂಜು, ಶಿವರಾಜು, ಶ್ರೀಮತಿ ದ್ರಾಕ್ಷಾಯಿಣಿ, ಶ್ರೀಮತಿ ಹೇಮಾ, ನಾಗಣ್ಣ ಹಾಗೂ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.
ಹಲಸಿನೆಳೆ ಹಿಡಿದು, ಘೋಷಣೆಗಳನ್ನು ಕೂಗಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ರೈತರು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಸಂಬಂಧಪಟ್ಟ ಇಲಾಖೆಗಳು ತಕ್ಷಣ ಪ್ರಕ್ರಿಯೆಗೆ ಇಳಿಯದಿದ್ದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನು ಅವರು ನೀಡಿದರು.
– ವರದಿ: ಮಂಜುನಾಥ್ ಐ.ಕೆ, ಚನ್ನರಾಯಪಟ್ಟಣ
