ಹಾಸನ: ಅಲ್ಪಸಂಖ್ಯಾತರು ತಮ್ಮ ರಕ್ಷಣೆಗೆಂದು ಆಯ್ಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷವೇ ಇಂದು ಬೆಂಗಳೂರಿನಲ್ಲಿ ಆ ಸಮುದಾಯದ ಮಕ್ಕಳನ್ನು ಮನೆ ಇಲ್ಲದೇ ಕೊರೆಯುವ ಚಳಿಯಲ್ಲಿ ಮಲಗುವ ಪರಿಸ್ಥಿತಿಗೆ ತಳ್ಳಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಆರೋಪಿಸಿದರು.
ನಗರದಲ್ಲಿ ನಡೆದ ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, “ಅಲ್ಪಸಂಖ್ಯಾತರು ಕೆಲವರು ಇಲ್ಲಿ ಬಂದು ಹೋಗಿದ್ದಾರೆ. ಆದರೆ ಯಾವುದೇ ಸಮುದಾಯಕ್ಕೂ, ಯಾವುದೇ ಪಕ್ಷವೂ ಶಾಶ್ವತವಲ್ಲ” ಎಂದು ಹೇಳಿದರು.
ಬೆಂಗಳೂರಿನ ಥಣಿಸಂದ್ರ ಹಾಗೂ ಕೋಗಿಲು ಬಡಾವಣೆಗಳ ವ್ಯಾಪ್ತಿಯ ಶಾಸಕರು ಹಾಸನ ಜಿಲ್ಲೆಯ ಮಂತ್ರಿಗಳೇ ಆಗಿದ್ದಾರೆ. “ಅಲ್ಪಸಂಖ್ಯಾತರು ಅಲ್ಲಿ ನಾಲ್ಕೈದು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವುದು ಅವರಿಗೆ ಗೊತ್ತಿರಲಿಲ್ಲವೇ?” ಎಂದು ಪ್ರಶ್ನಿಸಿದರು.
ಈ ವರ್ಷ ಬೆಂಗಳೂರಿನಲ್ಲಿ ಎಂಟು ಡಿಗ್ರಿಯಷ್ಟು ಚಳಿ ಇದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಬುಲ್ಡೋಜರ್ಗಳನ್ನು ತಂದು ಮನೆಗಳನ್ನು ಕೆಡವಲಾಗಿದೆ. “ಸಿರಿಯಾ ಬಾಂಬ್ ಬ್ಲಾಸ್ಟ್ನಂತೆಯೇ ದೃಶ್ಯ ಕಂಡುಬರುತ್ತಿದೆ. ಮುಸ್ಲಿಂ ಬಾಂಧವರು ನಿಮ್ಮ ರಕ್ಷಣೆಗಾಗಿ ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದೀರಲ್ಲ? ಆದರೆ ಚಳಿಯಲ್ಲಿ ನಿಮ್ಮ ಮಕ್ಕಳನ್ನು ಮಲಗಿಸುವ ಸ್ಥಿತಿಗೆ ತಂದವರು ಯಾರು? ನಿಮ್ಮನ್ನು ಯಾವ ಪರಿಸ್ಥಿತಿಗೆ ತಳ್ಳಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಅಲ್ಲಿ ಜನ ಕಣ್ಣೀರು ಹಾಕುತ್ತಿದ್ದಾರೆ. ಈ ಸರ್ಕಾರಕ್ಕೆ ಮಾನವೀಯತೆ ಬೇಡವೇ?” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಜನತಾ ಸಮಾವೇಶಕ್ಕೆ ಜನರು ಸ್ವಯಂಪ್ರೇರಿತವಾಗಿ ಆಗಮಿಸಿದ್ದಾರೆ. “ಕೇವಲ ಹಾಸನ ಜಿಲ್ಲೆಯಿಂದಲೇ ಎರಡೂವರೆ ಲಕ್ಷ ಜನ ಬಂದಿದ್ದಾರೆ. ಆದರೆ ಕಾಂಗ್ರೆಸ್ ಏಳು–ಎಂಟು ಜಿಲ್ಲೆಗಳಿಂದ ಜನರನ್ನು ಕರೆತರಬೇಕು. ಜೊತೆಗೆ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳಬೇಕು” ಎಂದು ಟೀಕಿಸಿದರು.
ರಾಜ್ಯದ ನಿವೃತ್ತ ನೀರಾವರಿ ಅಧಿಕಾರಿ ಕೆಲ ರಾಜಕಾರಣಿಗಳ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡು ನಾಲ್ಕು ವರ್ಷ ಶಿಕ್ಷೆಗೆ ಒಳಗಾಗಿರುವುದನ್ನು ಉಲ್ಲೇಖಿಸಿದ ಅವರು, ರಾಜ್ಯದ ಇತಿಹಾಸದಲ್ಲಿ ವೀರಪ್ಪನ್ ಹಿಡಿಯಲು ಹೋದ ಪೊಲೀಸರನ್ನು ಹೊರತುಪಡಿಸಿದರೆ, ಉಡುಗೊರೆ ನೀಡಿದ್ದು ಎಸ್ಐಟಿ ತಂಡಕ್ಕೆ ಮಾತ್ರವೇ ಇರಬಹುದು ಎಂದು ವ್ಯಂಗ್ಯವಾಡಿದರು. “ಆ ಪ್ರಕರಣದಲ್ಲಿ ಯಾವ ರೀತಿಯ ತನಿಖೆ ನಡೆಸಲಾಗಿದೆ ಎಂಬುದು ನನಗೆ ಗೊತ್ತಿದೆ” ಎಂದರು.
ಇಲಿವಾಲ ಬಳಿ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿದ ಪ್ರಕರಣ ಹಾಗೂ ಇತ್ತೀಚೆಗೆ ಪೊಲೀಸ್ ಅಧಿಕಾರಿಯ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿರುವುದನ್ನು ಉಲ್ಲೇಖಿಸಿದ ಅವರು, “ಇದೇ ನಿಮ್ಮ ಪರಿಶುದ್ಧ ಆಡಳಿತವೇ? ನೀವು ಯಾವ ದಾಖಲೆ ಮುರಿದಿದ್ದೀರಿ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು ದೇವರ ದಯೆಯಿಂದ ಎರಡು ಬಾರಿ ಮುಖ್ಯಮಂತ್ರಿ ಆದೆ. “ತಂದೆಗೆ ಕೊಟ್ಟ ನೋವು ಕಡಿಮೆ ಮಾಡಲು ನಾನು ದಿನಕ್ಕೆ 20 ಗಂಟೆ ದುಡಿದೆ. ಜನತಾದರ್ಶನ, ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳನ್ನು ತಂದೆ. ಆದರೆ ಈ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗಾಗಿ ಈ ವರ್ಷ ಎಷ್ಟು ಲಕ್ಷ ಕೋಟಿ ಸಾಲ ಮಾಡುತ್ತದೋ ಗೊತ್ತಿಲ್ಲ” ಎಂದು ಸರ್ಕಾರವನ್ನು ವ್ಯಂಗ್ಯವಾಗಿ ಟೀಕಿಸಿದರು.
