ಕೆ.ಆರ್.ಪೇಟೆ,ಫೆ.26: ತಮ್ಮ ಹುಟ್ಟೂರಿನಲ್ಲಿ ದಾಖಲಾತಿ ಇಲ್ಲದೆ ಮುಚ್ಚಿಹೋಗಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಪುನರ್ ಆರಂಭಿಸಲು, ತಮ್ಮ ಸ್ವಂತ ಖಾಸಗಿ ಶಾಲೆಯನ್ನು ಮುಚ್ಚಿ ಅಲ್ಲಿ ದಾಖಲಾಗಿದ್ದ ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಯನ್ನು ಉಳಿಸಿದ ರಾಜ್ಯದ ಏಕೈಕ ಶಾಸಕ ಎಂಬ ಬಿರುದಿಗೆ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರು ಭಾಜನರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025-2026ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಹುತೇಕ ರಾಜಕಾರಣಿಗಳು ಸರ್ಕಾರಿ ಶಾಲೆ ಏನಾದರೇನು ತನ್ನ ಖಾಸಗಿ ಶಾಲೆ ಅಭಿವೃದ್ಧಿಯಾಗಬೇಕು ಎಂಬ ಧೋರಣೆಯನ್ನು ಹೊಂದಿರುತ್ತಾರೆ. ಆದರೆ ನಮ್ಮ ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರು ತಾವು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದ ಶಾಲೆಯು ತಮ್ಮ ಗ್ರಾಮದಲ್ಲಿ ಎರಡು ವರ್ಷಗಳ ಕಾಲ ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚಿ ಹೋಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪುನರ್ ಆರಂಭಿಸುವ ಸಂಕಲ್ಪತೊಟ್ಟು ತಮ್ಮ ಒಡೆತನದ ನೀತಿಮಂಗಲದಲ್ಲಿದ್ದ ಆದರ್ಶ ಕಾನ್ವೆಂಟ್ ಅನ್ನು ಬಂದ್ ಮಾಡಿಸಿ ಅಲ್ಲಿ ದಾಖಲಾಗಿದ್ದ ಎಲ್ಲಾ ಮಕ್ಕಳನ್ನು ಹರಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲು ಮಾಡಿಸುವ ಮೂಲಕ ಶಾಲೆಯನ್ನು ಮತ್ತೆ ಆರಂಭಿಸಿದ್ದಾರೆ. ಅಲ್ಲದೆ ಶಾಲೆಗೆ ವಿವಿಧ ಶಾಲೆಗಳಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಪಡೆದಿದ್ದ ಶಿಕ್ಷಕರನ್ನು ನೇಮಕಾತಿ ಮಾಡಿಸುವ ಮೂಲಕ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿದ್ದಾರೆ.
ಇದರಿಂದಾಗಿ ಎರಡು ವರ್ಷಗಳ ಕಾಲ ದಾಖಲಾತಿ ಇಲ್ಲದೆ ಮುಚ್ಚಿದ್ದ ಶಾಲಾ ಕೊಠಡಿಗಳು ಇದೀಗ ಮಕ್ಕಳ ಕಲರವದಿಂದಾಗಿ ಗ್ರಾಮಸ್ಥರಲ್ಲಿ ಸಂತಸದ ವಾತಾವರಣನ್ನು ನಿರ್ಮಿಸಿವೆ. ಇದೇ ರೀತಿ ತಾಲ್ಲೂಕಿನ ಯಾವುದೇ ಸರ್ಕಾರಿ ಶಾಲೆಗಳು ನನ್ನ ಅಧಿಕಾರದ ಅವಧಿಯಲ್ಲಿ ಮುಚ್ಚಬಾರದು. ಶಾಲೆಯನ್ನು ಉಳಿಸಿಕೊಳ್ಳಲುಬೇಕಾದ ಎಲ್ಲಾ ಸಹಕಾರವನ್ನು ನೀಡುವುದಾಗಿ ಶಾಸಕರು ಘೋಷಣೆ ಮಾಡಿದ್ದಾರೆ. ಅಗತ್ಯವಿರುವ ಪ್ರತಿಯೊಂದು ಗ್ರಾಮದಲ್ಲಿಯೂ ಮಕ್ಕಳ ಮನೆ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಲು ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಅದರಂತೆ ಶಿಕ್ಷಣ ಇಲಾಖೆಯು ಮಕ್ಕಳ ದಾಖಲಾತಿ ಹೆಚ್ಚಿಸಲು ಹಾಗೂ ಮಕ್ಕಳ ಮನೆ ಆರಂಭಿಸಲು ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಕ್ರಮ ಕೈಗೊಳ್ಳುತ್ತಿದೆ. ಹರಳಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಕಾನ್ವೆಂಟ್ ಮಕ್ಕಳಿಗಿಂತೆ ಕಡಿಮೆ ಇದ್ದರೆ ನಿಮ್ಮ ಮಕ್ಕಳನ್ನು ಸೇರಿಸಬೇಡಿ. ಬಂದು ಪರೀಕ್ಷೆ ಮಾಡಿ ನಂತರ ತಮ್ಮ ಮಕ್ಕಳನ್ನು ತಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.

ಕ್ಷೇತ್ರದ ಶಾಸಕರು ಹಾಗೂ ಗ್ರಾಮದ ಸುಪುತ್ರರೂ ಆದ ಹೆಚ್.ಟಿ.ಮಂಜು ಅವರು ಕಾರ್ಯಕ್ರಮದಲ್ಲಿ ಶಾಲೆಯನ್ನು ಪುನರ್ ಆರಂಭಿಸಲು ಸಹಕಾರ ನೀಡಿದ ಶಾಲೆಯ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿ ಸರ್ಕಾರಿ ಶಾಲೆಗೆ ಉಳಿದರೆ ಮಾತ್ರ ಬಡವರು ಮತ್ತು ಮಧ್ಯಮ ವರ್ಗದವರಿಗೆ ಶಿಕ್ಷಣ ಪಡೆದುಕೊಳ್ಳಲು ಅವಕಾಶವಾಗುತ್ತದೆ. ನನ್ನ ಅಧಿಕಾರದ ಅವಧಿಯಲ್ಲಿ ತಾಲ್ಲೂಕಿನಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚದಂತೆ ಅಗತ್ಯ ಸಹಕಾರ ನೀಡುತ್ತೇನೆ. ಇದಕ್ಕೆ ಸ್ಥಳೀಯ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಪೂರ್ಣ ಸಹಕಾರ ನೀಡಬೇಕು. ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಕಲಿಕೆಗೆ ಒತ್ತು ನೀಡಲಾಗಿದೆ ಹಾಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕರು ಕೈಮುಗಿದು ಮನವಿ ಮಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಶಿಕ್ಷಣ ಸಂಯೋಜಕ ಸುರೇಶ್, ಸಿ.ಆರ್.ಪಿ.ಮಹೇಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಆನಂದಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಲೋಕೇಶ್, ಗ್ರಾ.ಪಂ.ಆಡಳಿತಾಧಿಕಾರಿ ಎಂ.ಎನ್.ವೆಂಕಟೇಶ್, ಪಿಡಿಓ ಬಸವಶೆಟ್ಟಿ, ಮುಖ್ಯ ಶಿಕ್ಷಕ ವಿಜಯ್, ಸಹ ಶಿಕ್ಷಕರಾದ ಸಿ.ರಾಧಾ, ಅನುಸೂಯ, ಇಂದ್ರಾಕ್ಷಿ, ಮಂಜುಳಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಶೋಕ್, ಸದಸ್ಯರಾದ ಉಮಾಶ್ರೀಧರ್, ಮುಖಂಡರಾದ ಕಾರ್ ಸುರೇಶ್, ವಿಜಯೇಂದ್ರ, ನಂದೀಶ್, ಕೆ.ಎಲ್.ಮಹೇಶ್, ಶಿವಲಿಂಗಣ್ಣ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಶಾಲೆಯ ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರನ್ನು ಹಗೂ ಗ್ರಾಮಸ್ಥರನ್ನು ರಂಜಿಸಿದವು.
– ಶ್ರೀನಿವಾಸ್ ಆರ್.
