ನವದೆಹಲಿ/ಗುರುಗ್ರಾಮ, ಮಾ.20: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ದೇಶದಲ್ಲೇ ಮೊದಲ ಬಾರಿಗೆ ‘ಎಲ್ಪಿಜಿ ಗ್ಯಾಸ್ ಎಟಿಎಂ’ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿ ಗ್ಯಾಸ್ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.
ಹಣದ ಎಟಿಎಂ ಮಾದರಿಯಲ್ಲೇ ಕಾರ್ಯನಿರ್ವಹಿಸುವ ಈ ಅತ್ಯಾಧುನಿಕ ಸ್ಮಾರ್ಟ್ ಮಿಷನ್ ಮೂಲಕ ಗ್ರಾಹಕರು ಕೇವಲ 2ರಿಂದ 3 ನಿಮಿಷಗಳೊಳಗೆ ಭರ್ತಿಯಾದ ಎಲ್ಪಿಜಿ ಸಿಲಿಂಡರ್ ಪಡೆಯಬಹುದಾಗಿದೆ. ದಿನದ 24 ಗಂಟೆಗಳೂ ಲಭ್ಯವಿರುವ ಈ ಸೇವೆಯಿಂದ ಡೆಲಿವರಿ ಬಾಯ್ಗಾಗಿ ಕಾಯುವ ಕಿರಿಕಿರಿ ತಪ್ಪಿ, ಗ್ರಾಹಕರಿಗೆ ತ್ವರಿತ ಹಾಗೂ ಸುಲಭ ಸೌಲಭ್ಯ ಒದಗಲಿದೆ.
ಗುರುಗ್ರಾಮದಲ್ಲಿ ಪೈಲಟ್ ಪ್ರಾಜೆಕ್ಟ್
ಸದ್ಯ ಈ ವಿನೂತನ ಯೋಜನೆಯನ್ನು ಹರಿಯಾಣದ ಗುರುಗ್ರಾಮದ ಸೋಹ್ನಾ ಪ್ರದೇಶದ ಸೆಕ್ಟರ್-22ರಲ್ಲಿ ಪ್ರಾಯೋಗಿಕವಾಗಿ (Pilot Project) ಆರಂಭಿಸಲಾಗಿದೆ. ಸಂಪೂರ್ಣವಾಗಿ ಆಟೋಮೇಟೆಡ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಈ ಗ್ಯಾಸ್ ಎಟಿಎಂ, ಭವಿಷ್ಯದ ಎಲ್ಪಿಜಿ ವಿತರಣಾ ವ್ಯವಸ್ಥೆಗೆ ಮಾದರಿಯಾಗಲಿದೆ ಎನ್ನಲಾಗಿದೆ.
ಹೇಗೆ ಪಡೆಯಬಹುದು ಸಿಲಿಂಡರ್?
ಗ್ಯಾಸ್ ಎಟಿಎಂ ಬಳಕೆ ಪ್ರಕ್ರಿಯೆ ಬಹಳ ಸರಳವಾಗಿದೆ.
ಮೊದಲು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಬೇಕು. ಬಳಿಕ ಫೋನ್ಗೆ ಬರುವ OTP ದೃಢೀಕರಣ ನಡೆಸಬೇಕು. ನಂತರ ಸ್ಕ್ರೀನ್ ಮೇಲೆ ಕಾಣಿಸುವ QR ಕೋಡ್ ಸ್ಕ್ಯಾನ್ ಮಾಡಿ UPI ಮೂಲಕ ಪಾವತಿ ಮಾಡಬಹುದು. ಪಾವತಿ ಪೂರ್ಣಗೊಂಡ ಬಳಿಕ 2-3 ನಿಮಿಷಗಳಲ್ಲಿ ಭರ್ತಿಯಾದ ಹೊಸ ಸಿಲಿಂಡರ್ ಹೊರಬರುತ್ತದೆ. ಅದೇ ವೇಳೆ ಬಳಕೆದಾರರು ತಮ್ಮ ಖಾಲಿ ಸಿಲಿಂಡರ್ ಅನ್ನು ಮಿಷನ್ ಒಳಗೆ ಇರಿಸಬೇಕು.
ಕಂಪೋಸಿಟ್ ಸಿಲಿಂಡರ್ಗಳ ವಿಶೇಷತೆ
ಈ ಗ್ಯಾಸ್ ಎಟಿಎಂನಲ್ಲಿ ನೀಡಲಾಗುವವು ಸಾಮಾನ್ಯ ಕಬ್ಬಿಣದ ಸಿಲಿಂಡರ್ಗಳಲ್ಲ. ಇವು ಫೈಬರ್ನಿಂದ ತಯಾರಾದ ‘ಕಂಪೋಸಿಟ್ ಸಿಲಿಂಡರ್’ಗಳು ಆಗಿದ್ದು, ತೂಕದಲ್ಲಿ ಹಗುರವಾಗಿವೆ. ಸಾಮಾನ್ಯ ಸಿಲಿಂಡರ್ಗಳಿಗೆ ಹೋಲಿಸಿದರೆ ಕೇವಲ 15 ಕೆಜಿ ತೂಕ ಇರುವುದರಿಂದ ಮಹಿಳೆಯರು ಸಹ ಸುಲಭವಾಗಿ ಎತ್ತಬಹುದಾಗಿದೆ.
ಇದರ ಮತ್ತೊಂದು ವಿಶೇಷತೆ ಎಂದರೆ, ಈ ಸಿಲಿಂಡರ್ಗಳು ಪಾರದರ್ಶಕ ವಿನ್ಯಾಸ ಹೊಂದಿರುವುದರಿಂದ ಒಳಗೆ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ಹೊರಗಿನಿಂದಲೇ ಗಮನಿಸಬಹುದು. ಇದರಿಂದ ಗ್ಯಾಸ್ ಕಡಿಮೆ ತುಂಬಲಾಗಿದೆ ಅಥವಾ ಕಳ್ಳತನವಾಗಿದೆ ಎಂಬ ಅನುಮಾನಗಳಿಗೆ ತೆರೆ ಬೀಳಲಿದೆ. ಜೊತೆಗೆ ಫೈಬರ್ ಬಾಡಿ ಇರುವುದರಿಂದ ತುಕ್ಕು ಹಿಡಿಯದ ಸುರಕ್ಷಿತ ಸಿಲಿಂಡರ್ಗಳು ಎಂಬ ಹೆಗ್ಗಳಿಕೆಯನ್ನು ಕೂಡ ಪಡೆದಿವೆ.
ಗ್ರಾಹಕರಿಗೆ ದೊಡ್ಡ ಅನುಕೂಲ
ಈ ಸೇವೆಯ ಪ್ರಮುಖ ಲಾಭವೆಂದರೆ, ಇದು 24×7 ಲಭ್ಯ. ಗ್ರಾಹಕರು ತಮ್ಮ ಅನುಕೂಲಕರ ಸಮಯದಲ್ಲಿ—ಬೆಳಿಗ್ಗೆ, ರಾತ್ರಿ ಅಥವಾ ಆಫೀಸ್ನಿಂದ ವಾಪಸ್ ಬರುವಾಗ—ಗ್ಯಾಸ್ ಪಡೆಯಬಹುದು. ಏಜೆನ್ಸಿಗೆ ಕರೆ ಮಾಡಿ ಬುಕ್ಕಿಂಗ್ ಮಾಡಿ, ನಂತರ ಡೆಲಿವರಿ ಬಾಯ್ಗಾಗಿ ಕಾಯುವ ಅವಶ್ಯಕತೆ ಇಲ್ಲ.
ಇದಲ್ಲದೆ, ಎಟಿಎಂನಲ್ಲಿ ಸಿಲಿಂಡರ್ಗಳ ಸ್ಟಾಕ್ ಕಡಿಮೆಯಾಗುತ್ತಿದ್ದಂತೆ, ಮಿಷನ್ ತಾನಾಗಿಯೇ ಸಂಬಂಧಿತ ಏಜೆನ್ಸಿಗೆ ಆಟೋ ಅಲರ್ಟ್ ಕಳುಹಿಸುವ ವ್ಯವಸ್ಥೆಯೂ ಇದೆ. ಇದರಿಂದ ನಿರಂತರ ಪೂರೈಕೆ ಖಚಿತವಾಗಲಿದೆ.
ದೇಶದಾದ್ಯಂತ ವಿಸ್ತರಣೆ ಸಾಧ್ಯತೆ
ಸದ್ಯ ಗುರುಗ್ರಾಮದಲ್ಲಿ ಆರಂಭಗೊಂಡಿರುವ ಈ ಯೋಜನೆ ಯಶಸ್ವಿಯಾದಲ್ಲಿ, ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ. ಗ್ಯಾಸ್ ವಿತರಣೆಯಲ್ಲಿ ಡಿಜಿಟಲ್ ಕ್ರಾಂತಿಗೆ ಇದು ಚಾಲನೆ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
