ಕೆ.ಆರ್.ಪೇಟೆ,ಮಾ.09: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾವಿವಿದ್ದ ದಂಪತಿಗಳಿಬ್ಬರು ಒಂದೇ ಕುಣಿಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಿಗ್ಗೆ ಸುಮಾರು 8ಗಂಟೆ ಸಮಯದಲ್ಲಿ ನಡೆದಿದೆ.
ಹೊಸಕೋಟೆ ಗ್ರಾಮದ ಗಣೇಶಗೌಡ ಮತ್ತು ಮಂಜುಳಾ ದಂಪತಿಗಳ ಪುತ್ತ ದರ್ಶನ್ (29) ಮತ್ತು ದರ್ಶನ್ ಪತ್ನಿ ಎನ್.ಎಲ್.ದಿವ್ಯ(25) ಮೃತ ದಂಪತಿಗಳು ಎಂದು ತಿಳಿದು ಬಂದಿದೆ.
ನಾಟನಹಳ್ಳಿ ಗ್ರಾಮದ ಲಕ್ಷ್ಮಣ್ ಗೌಡ ಮತ್ತು ಸುನಂದ ದಂಪತಿಗಳ ಪುತ್ರಿಯನ್ನು ಕಳೆದ ಮೂರು ವರ್ಷಗಳ ಹಿಂದೆ ದರ್ಶನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.
ಈ ದರ್ಶನ್ ಮತ್ತು ದಿವ್ಯ ದಂಪತಿಗಳಿಗೆ ಎರಡು ವರ್ಷದ ಹೆಣ್ಣು ಮಗು ಇದ್ದು ಈ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಮಗು ಬಚಾವ್ ಆಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ ಕರೆದುಕೊಂಡು ಬರಲಾಗಿದೆ. ದಿವ್ಯ ಮತ್ತು ದರ್ಶನ್ ದಂಪತಿಗಳು ಅನೂನ್ಯವಾಗಿ ಜೀವನ ನಡೆಸುತ್ತಿದ್ದು ಎನ್ನಲಾಗುತ್ತಿದೆ ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಘಟನೆ ಕುರಿತು ಮೃತ ದರ್ಶನ ತಂದೆ ಗಣೇಶಗೌಡ ಅವರು ಪಟ್ಟಣ ಪೋಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಕೆ.ಆರ್.ಪೇಟೆ ಟೌನ್ ಇನ್ಸ್ ಪೆಕ್ಟರ್ ಸುನಿಲ್ಕುಮಾರ್ ಬೇಟಿ ನೀಡಿ ಶವವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ. ಅಲ್ಲದೆ ದಂಪತಿಗಳ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಮಾಡಲು ತನಿಖೆ ಕೈಗೊಂಡಿದ್ದಾರೆ.
ಅನಾಥವಾದ ಮಗು, ಮಗುವಿನಿಂದಲೇ ಅಗ್ನಿಸ್ಪರ್ಷ: ದಿವ್ಯ ಮತ್ತು ದರ್ಶನ್ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ 2ವರ್ಷದ ಹೆಣ್ಣು ಮಗು ಅನಾಥವಾಗಿದೆ. ಹೊಸಹೋಟೆ ಗ್ರಾಮದಲ್ಲಿ ಸಂಹೆ ಸುಮಾರು 6.30ಗಂಟೆ ಸಮಯದಲ್ಲಿ ಮೃತ ದರ್ಶನ್ ಮತ್ತು ದಿವ್ಯ ಅವರ ಮೃತ ದೇಹವನ್ನು ಒಂದೇ ಚಿತೆಯಲ್ಲಿಟ್ಟು ದಂಪತಿಗಳ ಎರಡು ವರ್ಷದ ಹೆಣ್ಣು ಮಗುವಿನ ಕೈಯಿಂದಲೇ ಸಂಪ್ರದಾಯದಂತೆ ಅಗ್ನಿಸ್ಪರ್ಷ ಮಾಡಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.
– ಶ್ರೀನಿವಾಸ್ ಆರ್.
