ದೊಡ್ಡಬಳ್ಳಾಪುರ : ಅರ್ಧರಾತ್ರಿಯಲ್ಲಿ ತಾಲೂಕಿನ ನಿಜಗಲ್ ಲೇಔಟ್, ನಂದಿನಿ ಲೇಔಟ್, ಟಿ.ಬಿ ನಾರಾಯಣಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ನಡೆಸುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ, ಕೈಗಳಿಗೆ ಗ್ಲೌಸ್ ಹಾಕಿಕೊಂಡು, ಕದ್ದ ವಸ್ತುಗಳನ್ನು ತುಂಬಿಕೊಳ್ಳಲು ಬೆನ್ನಿಗೆ ಒಂದು ಬ್ಯಾಗ್ ತಗುಲಿಸಿಕೊಂಡು, ಕೈಗಳಲ್ಲಿ ಲಾಂಗ್, ಮಚ್ಚು, ಕಬ್ಬಿಣದ ರಾಡ್, ಕಲ್ಲುಗಳನ್ನು ಹಿಡಿದುಕೊಂಡು ನುಗ್ಗುತ್ತಿದ್ದ ಈ ಗ್ಯಾಂಗ್ ಸಿಸಿಟಿವಿ ಇದ್ದರೂ ರಾಜಾರೋಷವಾಗಿ ಮನೆಗಳಿಗೆ ಕನ್ನ ಹಾಕುತ್ತಿತ್ತು. ಗೇಟ್ ತೆಗೆದು ಕಾಂಪೌಡ್ ಹತ್ತಿ ಕಿಟಕಿಗಳಲ್ಲಿ ಬಗ್ಗಿ ನೋಡಿ ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ನೇರವಾಗಿ ಮನೆ ಬೀಗ ಹೊಡೆದು ಒಳ ಹೋಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ ಈ ಕಳ್ಳರ ಗ್ಯಾಂಗ್ ನ್ನು ಹೆಡೆಮುರಿಕಟ್ಟುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
A1 ಪುರುಷೋತ್ತಮ, A2 ಚಂದ್ರು, A3 ದರ್ಶನ್, A4 ಸೌಭಾಗ್ಯ ಬಂಧಿತ ಆರೋಪಿಗಳು.
ಮೂಲತಃ ದಾವಣಗೆರೆ ಜಿಲ್ಲೆಯ ನಾಗರಕಟ್ಟೆ ಗ್ರಾಮದವನಾದ ಪುರುಷೋತ್ತಮ 10ನೇ ಕ್ಲಾಸಿನವರೆಗೂ ಓದಿದ್ದ. ಬೆಂಗಳೂರಿನ ಕೂಡ್ಲು ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ. ಈತನ ಮೇಲೆ 8 ಕಳ್ಳತನ ಪ್ರಕರಣ, ಒಂದು ಕೊಲೆ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಚಂದ್ರು(24) ಮೂಲತಃ ದಾವಣಗೆರೆ ಜಿಲ್ಲೆಯ ಬಸವನಾಳ್ ಗೊಲ್ಲರಹಟ್ಟಿಯವನು. ಈತನೂ ಸಹ ಕೂಡ್ಲು ಗೇಟ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆಟೋ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ವಿವಿಧ ಠಾಣೆಗಳಲ್ಲಿ 6 ಪ್ರಕರಣಗಳು ದಾಖಲಾಗಿವೆ. ದರ್ಶನ್ (20) ದಾವಣಗೆರೆ ಜಿಲ್ಲೆಯ ಆದೋಡಿ ಗ್ರಾಮದನಾಗಿದ್ದು ಬಿಬಿಎ ಪದವೀಧರ. ಈತನ ಮೇಲೆ ವಿವಿಧ ಠಾಣೆಗಳಲ್ಲಿ 4 ಕೇಸ್ ದಾಖಲಾಗಿವೆ.
ಹೀಗೆ ಈ ಮೂವರು ಆರೋಪಿಗಳು ಬೆಂಗಳೂರಿನ ಕೂಡ್ಲೂ ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡು ಒಂದೇ ರೂಮಿನಲ್ಲಿದ್ದುಕೊಂಡು ವಿವಿಧ ಕೆಲಸಗಳಿಗೆ ಹೋಗುತ್ತಾ. ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಈ ಮೂವರು ಆರೋಪಿಗಳಿಗೆ ಸೌಭಾಗ್ಯ ಎಂಬಾಕೆ ಪರೋಕ್ಷವಾಗಿ ಸಾಥ್ ನೀಡುತ್ತಿದ್ದಳು ಎಂದು ತನಿಖೆ ವೇಳೆ ತಿಳಿದುಬಂದಿದೆ.
ದಾವಣಗೆರೆ, ಕೊಪ್ಪಳ, ತುಮಕೂರು ಸೇರಿದಂತೆ ಐದಾರು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ಪ್ರಕರಣಗಳು ದಾಖಲಾಗಿದ್ದರು. ಹಲವು ಪ್ರಕರಣಗಳಲ್ಲಿ ಬಂಧನವಾಗಿ, ಜೈಲಿನಿಂದ ಬಿಡುಗಡೆಯಾದ ನಂತರ ಕಳ್ಳತನ ಮಾಡಿದ್ದ ಸುಮಾರು 12 ಲಕ್ಷ ಹಣವನ್ನು ಬರೀ ಮೋಜುಮಸ್ತಿಗೆ ಖರ್ಚು ಮಾಡಿದ್ದರು. ಹಣ ಖರ್ಚಾದ ಬಳಿಕ ದೊಡ್ಡಬಳ್ಳಾಪುರಕ್ಕೆ ಎಂಟ್ರಿ ಕೊಟ್ಟಿದ್ದರು.
ಸೆ.16 ರಂದು ರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ನಿಜಗಲ್ ಲೇಔಟ್, ನಂದಿನಿ ಲೇಔಟ್, ಟಿ.ಬಿ ನಾರಾಯಣಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆ ಕಳ್ಳತನಕ್ಕೆ ಇಳಿದಿದ್ದ ಈ ಖದೀಮರು, ಟಿ.ಬಿ ನಾರಾಯಣಪ್ಪ ಬಡಾವಣೆಯಲ್ಲಿರುವ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಪತ್ತೆ ಹಚ್ಚಿ, ಆ ಮನೆಗೆ ಎಂಟ್ರಿ ಕೊಟ್ಟು ಸ್ಕ್ರೂ ಡ್ರೈವರ್ ನಿಂದ ಮನೆಗೆ ಅಳವಡಿಸಿದ್ದ ಲಾಕ್ ನ ಸ್ಕ್ರೂಗಳು ಉದುರಿಸಿ ಮನೆ ಒಳಗೆ ಹೋಗಿ ಮನೆಯಲ್ಲಿನ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ, ಕಬೋರ್ಡ್ ನ ಬೀಗವನ್ನು ಮುರಿದು ಒಳಗೆ ಇದ್ದ 32 ಗ್ರಾಂನ ನೆಕ್ಲೇಸ್, 15 ಗ್ರಾಂನ ಬ್ರಾಸ್ಲೈಟ್, 20 ಗ್ರಾಂನ 2 ಜೊತೆ ಜುಮುಕಿ, 1 ಗ್ರಾಂನ ತಾಳಿ, 11 ಗ್ರಾಂನ ಉಂಗುರ, 20 ಗ್ರಾಂನ ಫ್ಯಾನ್ಸಿ ಚೈನು, 10 ಗ್ರಾಂನ ಕತ್ತಿನ ಚೈನು, 4 ಗ್ರಾಂನ ಮಹಿಳೆಯ ಬ್ರಾಸ್ಲೈಟ್, ಬೆಳ್ಳಿಯ ಕಾಲು ಚೈನು ಸೇರಿದಂತೆ ಒಟ್ಟು 115 ಗ್ರಾಂ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದರು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು.
ಕಳ್ಳತನಕ್ಕೆ ಇಳಿಯುವುದಕ್ಕೂ ಮುನ್ನ ಟ್ರೈನಿನಲ್ಲಿ ಬರುತ್ತಿದ್ದ ಈ ಗ್ಯಾಂಗ್, ಟ್ರೈನ್ ಇಳಿಯುತ್ತಿದ್ದಂತೆ ಮೊಬೈಲ್ ಗಳನ್ನು ಇಂಟರ್ ನೆಟ್ ಬಳಸದೇ ಆಫ್ ಲೈನ್ ಗೆ ಹೋಗುತ್ತಿದ್ದರು. ರೈಲಿನಿಂದ ಇಳಿದು ಸುಮಾರು ಮೂರಕ್ಕೂ ಹೆಚ್ಚು ಕಿಲೋಮೀಟರ್ ದೂರದಷ್ಟು ಟ್ರ್ಯಾಕ್ ನಲ್ಲೇ ನಡೆದುಕೊಂಡು ಹೋಗುತ್ತಿದ್ದರು. ಕಳ್ಳತನ ಮಾಡುವ ಮನೆಯ ಬಳಿ ಚಪ್ಪಲಿ ಧರಿಸದೇ, ಅಮಾವಸ್ಯೆ ಹಿಂದಿನ ದಿನ ಹಾಗೂ ಮರುದಿನದಂದು ಕಪ್ಪುಬಟ್ಟೆ ಧರಿಸಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಮನೆ ಕಳ್ಳತನದಲ್ಲಿ ಕೇವಲ ಚಿನ್ನ, ನಗದು ಮಾತ್ರ ಕದಿತ್ತಿದ್ದರು. ಇಬ್ಬರು ಆರೋಪಿಗಳು ತಮ್ಮ ಎದೆ ಭಾಗದಲ್ಲಿ “Teach The Peace” ಎಂಬ ಬರಹವಿರುವ ಟ್ಯಾಟೋವನ್ನು ಹಾಕಿಸಿಕೊಂಡಿದ್ದರು.
ಈ ಕಳ್ಳರ ಗ್ಯಾಂಗ್ ಗೆ ಪರೋಕ್ಷವಾಗಿ ಸಹಕರಿಸುತ್ತಿದ್ದ ಸೌಭಾಗ್ಯ ಎಂಬ ಯುವತಿಯನ್ನು ಈ ಹಿಂದೆಯೇ ಬಂಧಿಸಿ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಆಗ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿ ಬೆಂಗಳೂರಿನ ಎಸ್ಪಿ ಆಫೀಸ್ ಬಳಿ ಪ್ರತ್ಯಕ್ಷವಾಗಿ ಪೊಲೀಸರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಳು. ಪೊಲೀಸರು ವಶಪಡಿಸಿಕೊಂಡಿದ್ದ ಒಡವೆಗಳೆಲ್ಲಾ ನಂದೇ ಎಂದು ಸುಳ್ಳು ಹೇಳಿ, ಕಳ್ಳತನಕ್ಕೂ ನನಗೂ ಸಂಬಂಧವಿಲ್ಲ ಎಂಬ ನಾಟಕವಾಡಿದ್ದಳು. ಸೂಕ್ತ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
