
ಹಾಸನ: ಯಾವುದೇ ಭಾಷೆ ಇರಲಿ ಅದನ್ನು ಪ್ರತಿನಿತ್ಯ ಬಳಸಿದ್ದಲ್ಲಿ ಮಾತ್ರ ಭಾಷೆ ಉಳಿಯುತ್ತದೆ ಎಂದು ಪಡುವಲಹಿಪ್ಪೆ ಹೆಚ್.ಡಿ.ದೇವೇಗೌಡ ಸರ್ಕಾರಿ ಪ್ರ.ದ.ಕಾಲೇಜು ಪ್ರಾಧ್ಯಾಪಕ ಡಾ.ಶಿವಕುಮಾರ್.ಪಿ.ಆರ್. ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು, ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ “ ವಿಶ್ವ ಮಾತೃ ಭಾಷಾ ದಿನಾಚರಣೆ “ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಭಾಷೆಯನ್ನು ಬಳಸದೇ ಹೋದಲ್ಲಿ ಸಂಸ್ಕೃತಿಯು ಸಾಯುತ್ತದೆ. ಮಾತೃ ಭಾಷೆಗಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಸಾಯಿಸುತ್ತಾರೆ.ಇದರ ನೆನಪಾರ್ಥವಾಗಿ ವಿಶ್ವ ಮಾತೃಭಾಷಾ ದಿನವನ್ನು ಆಚರಿಸುತ್ತಾರೆ.
ಎಲ್ಲಾ ಭಾಷೆ ಮತ್ತು ಸಂಸ್ಕೃತಿಯನ್ನು ಯನ್ನು ಉಳಿಸುವ ಸಲುವಾಗಿ ಯುನೆಸ್ಕೋ ಈ ದಿನವನ್ನು ಆಚರಿಸುತ್ತಿದೆ. ಭಾಷೆ ರೂಪುಗೊಳ್ಳಬೇಕೆಂದರೆ ಎಷ್ಟೋ ತಲೆಮಾರಿನ ಕೊಡುಗೆ ಇದೆ. ಮಾತೆಯಿಂದ ಬಂದ ಭಾಷೆ ಮಾತೃ ಭಾಷೆಯಾಗಿದೆ. ಭಾಷೆ ವೈಜ್ಞಾನಿಕವಾಗಿ ಬಹಳಷ್ಟು ಅಂದವಾಗಿದೆ. ಭಾಷೆಯನ್ನು ಮುಂದಿನ ತಲೆ ಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮದ್ದಾಗಿದೆ. ಭಾಷಾ ಕೌಶಲ್ಯ ಇತ್ತೀಚೆಗೆ ಮರೆ ಮಾಚುತ್ತಿದೆ. ನಮ್ಮ ಆಲೋಚನೆ, ಯೋಚನೆ, ಯಾವತ್ತಿಗೂ ಮಾತೃ ಭಾಷೆಯಲ್ಲೇ ಇರುತ್ತದೆ. ಹೃದಯದಿಂದ ಬರುವಂತದ್ದು ಮಾತೃ ಭಾಷೆಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗ ಮುಖ್ಯಸ್ಥ ದೇವರಾಜು ಎಚ್.ಡಿ. ಮಾತನಾಡಿ, ಭಾಷೆ ಎಂದರೇ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಬಹುಸಂಸ್ಕೃತಿಯನ್ನು ಹೊಂದಿರುವ ಜಗತ್ತಿನ ವಿಶೇಷವಾದ ದೇಶ ಎಂದರೆ ಭಾರತ. ೮,೫೦೦ ಭಷೆಗಳು ಪ್ರಪಂಚದಲ್ಲಿವೆ. ಭಾರತದಲ್ಲಿಯೇ 2000 ಭಾಷೆಗಳಿವೆ. ಸಂವಿಧಾನದಲ್ಲಿ 4 ನೇ ಅತೀ ದೊಡ್ಡ ಭಾಷೆಯಾಗಿ ನಮ್ಮಲ್ಲಿ ಹೆಚ್ಚಿನ ಗೌರವ ಸ್ಥಾನ-ಮಾನ ನೀಡಲಾಗಿದೆ. ತಿಂಗಳಿಗೆ ಒಂದೊಂದು ಭಾಷೆ ಅವನತಿ ಹೊಂದುತ್ತಿವೆ. ಸ್ಥಳೀಯ ಭಾಷೆಗಳು ಪೈಪೋಟಿ ಕೊಡಲಾಗದೆ ಅಳಿವಿನ ಅಂಚಿನಲ್ಲಿವೆ. ನಮ್ಮೆಲ್ಲರ ಹೃದಯ ಭಾಷೆ ಕನ್ನಡ ಭಾಷೆ. ಹಳ್ಳಿ-ಹಳ್ಳಿಯನ್ನು ಆಂಗ್ಲ ಭಾಷೆ ಆವರಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್, ಭಾಷೆ ಮನುಷ್ಯನ ಭಾವನೆಗಳ ಅಭಿವ್ಯಕ್ತಿ. ಅವಿಭಾಜ್ಯ ಅಂಗ. ಅವರವರ ತಾಯಿ ಭಾಷೆಯನ್ನು ಗೌರವಿಸುವ ಪ್ರೋತ್ಸಾಹಿಸುವ ದಿನವೇ ಮಾತೃಭಾಷಾ ದಿನ. ಕನ್ನಡ ಭಷೆಗೆ ಮಾತ್ರ ರಕ್ಷಣಾ ಸಮಿತಿ ಇರುವುದು. ಕನ್ನಡಿಗರಿಗೆ ಸಂದೇಶ ಕೊಡುವುದು. ಶ್ರೇಷ್ಠತೆಯನ್ನು ಕಾಪಾಡುವ ಮೂಲಕ ಭಾಷೆಯನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾ ನಿಯಂತ್ರಕ ಡಾ.ಮುರುಳೀಧರ ಕೆ.ಡಿ, ಪಾತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಕಾರ್ಯಕ್ರಮ ಸಂಚಾಲಕರ ಡಾ. ಪ್ರಮೀಳಾ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರ ಡಾ.ಶ್ರೀನಿವಾಸ್ ಬಿ.ಎಚ್. ಸಹ ಪ್ರಾಧ್ಯಾಪಕರ ಡಾ. ದಿನೇಶ್ ಕೆ.ಎಸ್., ಸಹಾಯಕ ಪ್ರಾಧ್ಯಾಪಕ ಅನುರಾಧ ಡಿ.ಆರ್, ಅನಿತಾ.ವೈ.ಆರ್. ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟನರಸಯ್ಯ ಉಪಸ್ಥಿತರಿದ್ದರು.