ನವದೆಹಲಿ : ನಿಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ನೀವೂ ಕೂಡಾ ರೀಲ್ಸ್ ನೋಡ್ತಾ ಬ್ಯುಸಿ ಆಗೋ ಮಂದಿ ನೀವಾಗಿದ್ರೆ ಇತ್ತ ಸ್ವಲ್ಪ ಗಮನ ಹರಿಸಿ.. ಯಾಕಂದ್ರೆ ಅಮೆರಿಕದಿಂದ ಬಂದ ಮಾಹಿತಿಯ ಆಧಾರದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ), ಆಪರೇಷನ್ ಹಾಕ್ ಮೂಲಕ ಅಂತಾರಾಷ್ಟ್ರೀಯ ಆನ್ಲೈನ್ ಮಕ್ಕಳ ಲೈಂಗಿಕ ಶೋಷಣೆ ಜಾಲವನ್ನು ಬೇಧಿಸಿದೆ.
ಮಾರ್ಚ್ 2024 ರಲ್ಲಿ, ಮಂಗಳೂರಿನ ನಿವಾಸಿ ಆರೋಪಿ ಶೇಖ್ ಮುಯಿಜ್ ಅಹ್ಮದ್, “ಹೈಸೆನ್ಬರ್ಗ್ 7343” ಎಂಬ ಖಾತೆಯ ಹೆಸರಿನಡಿಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ “ಡಿಸ್ಕಾರ್ಡ್” ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದ ಮತ್ತು ಅಮೆರಿಕದ ಅಪ್ರಾಪ್ತ ಬಾಲಕಿಯೊಂದಿಗೆ ಆನ್ಲೈನ್ ಚಾಟ್ನಲ್ಲಿ ತೊಡಗಿದ್ದ.
ಚಾಟ್ಗಳ ಸಮಯದಲ್ಲಿ, ಆರೋಪಿಯು ಅಪ್ರಾಪ್ತ ಬಾಲಕಿಯನ್ನು ತನ್ನೊಂದಿಗೆ ಲೈಂಗಿಕ ಸಂದೇಶಗಳನ್ನು ಕಳಿಸಿ ತನ್ನೊಂದಿಗೆ ಅಶ್ಲೀಲವಾಗಿ ಚಾಟ್ ಮಾಡುವಂತೆ ಒತ್ತಾಯಿಸಿದ್ದ. ಅಲ್ಲದೇ ಆರೋಪಿಯು ಅಪ್ರಾಪ್ತ ವಯಸ್ಕ ಸಂತ್ರಸ್ತೆಯನ್ನು ಆನ್ಲೈನ್ನಲ್ಲಿ ಅಶ್ಲೀಲ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಬೆದರಿಕೆಯನ್ನೂ ಹಾಕಿದ್ದ.
ಪ್ರಕರಣ ದಾಖಲಾದ ನಂತರ, ಸಿಬಿಐ ಮುಂಬೈ ಮತ್ತು ಮಂಗಳೂರಿನ ವಿವಿಧ ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿ ಶೇಖ್ ಮುಯಿಜ್ ಅಹ್ಮದ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಸಿಬಿಐನ ಅಂತರರಾಷ್ಟ್ರೀಯ ಕಾರ್ಯಾಚರಣೆ ವಿಭಾಗವು ಶೇಖ್ ಮುಯಿಜ್ ಅಹ್ಮದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 66D ಮತ್ತು POCSO ಕಾಯ್ದೆ 2012 ರ ಸೆಕ್ಷನ್ 11 ರೊಂದಿಗೆ ಓದಲಾದ ಸೆಕ್ಷನ್ 12 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಏನಿದು ಡಿಸ್ಕಾರ್ಡ್?
2015 ರಲ್ಲಿ ಪ್ರಾರಂಭವಾದ ಡಿಸ್ಕಾರ್ಡ್, ಸಮಾನ ಆಸಕ್ತಿ ಹೊಂದಿರುವ ಜನರು ಮಾಹಿತಿ, ಅಭೀಪ್ರಯ ಹಾಗೂ ಹಂಚಿಕೊಳ್ಳಲು ಮತ್ತು ಚಾಟಿಂಗ್ ನಡೆಸಬಹುದಾದ ಒಂದು ಸಾಮಾಜಿಕ ವೇದಿಕೆಯಾಗಿದೆ. ಇದು ಗೇಮಿಂಗ್ ಸಮುದಾಯದಲ್ಲಿ ಜನಪ್ರಿಯವಾಗಿದೆ. ಏಕೆಂದರೆ ಇದು ವಿಡಿಯೋ ಗೇಮ್ ಆಟಗಾರರು ಪರಸ್ಪರ ಚಾಟಿಂಗ್ ಮಾಡಿ ಆನ್ಲೈನ್ ಆಟದಿಂದಾಚೆಗೂ ಒಂದು ಸಮಾನ ಮನಸ್ಕರ ಸಮುದಾಯವನ್ನು ಕಟ್ಟಲು ಅನುಕೂಲ ಮಾಡಿಕೊಡುತ್ತದೆ
140 ಮಿಲಿಯನ್ಗೂ ಹೆಚ್ಚು ಸಕ್ರಿಯ ಮಾಸಿಕ ಬಳಕೆದಾರರೊಂದಿಗೆ ಪೂರ್ಣ ಪ್ರಮಾಣದ ಸಾಮಾಜಿಕ ನೆಟ್ವರ್ಕ್ ಆಗಿ ಬೆಳೆದಿರುವ ಡಿಸ್ಕಾರ್ಡ್ ಆಪ್ ಮೂಲಕ ಕೇವಲ ಗೇಮರ್ಸ್ ಅಷ್ಟೇ ಅಲ್ಲದೇ ಎಲ್ಲಾ ರೀತಿಯ ಬಳಕೆದಾರರೂ ಕೂಡಾ ಇದನ್ನು ಉಪಯೋಗಿಸುತ್ತಿದ್ದಾರೆ
ಈಗೀಗ ಫೇಸ್ಬುಕ್ ಇನ್ಸ್ಟಾಗ್ರಾಂ ಸಿಕ್ಕಾಪಟ್ಟೆ ಫೇಮಸ್ ಆದ ನಂತರ ಮಕ್ಕಳು ತಂದೆತಾಯಿಯರ ಕಣ್ಣು ತಪ್ಪಿಸಿ ಈ ಡಿಸ್ಕಾರ್ಡ್ ಆಪ್ ಬಳಕೆಗೆ ಮುಂದಾಗಿದ್ದು ಅಪರಿಚಿತರೊಂದಿಗೆ ಚಾಟ್ ಮಾಡುತ್ತಾ ಸಮಸ್ಯೆಗೆ ಸಿಲುಕುವಂತಾಗಿದೆ. ಈಗಾಗಲೇ ಡಿಸ್ಕಾರ್ಡ್ನಲ್ಲಿ ಹಲವರು ಈ ರೀತಿಯ ಶೋಷಣೆಯ ಕುರಿತು ದನಿ ಎತ್ತಿದ್ದು ಹತ್ತಾರು ಪ್ರಕರಣಗಳು ದಾಖಲಾಗಿದೆ
