ಮಂಗಳೂರು, ಫೆಬ್ರವರಿ 6: ನೇಪಾಳದಲ್ಲಿ ಕುಳಿತು ಭಾರತವನ್ನೇ ಗುರಿಯಾಗಿಸಿಕೊಂಡು ನೂರಾರು ಕೋಟಿ ರೂಪಾಯಿ ಮೌಲ್ಯದ ಸೈಬರ್ ವಂಚನೆ ನಡೆಸುತ್ತಿದ್ದ ಅತಿದೊಡ್ಡ ಸೈಬರ್ ಫ್ರಾಡ್ ನೆಟ್ವರ್ಕ್ ಅನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ನೇಪಾಳ ಪೊಲೀಸರ ಸಹಕಾರದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ, ನೇಪಾಳದಲ್ಲೇ ನೆಲೆಸಿಕೊಂಡು ವಂಚನೆ ನಡೆಸುತ್ತಿದ್ದ 11 ಮಂದಿ ಭಾರತೀಯ ಮೂಲದ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಲವು ಪ್ರಕರಣಗಳ ತನಿಖೆ ವೇಳೆ ಆರೋಪಿಗಳ ಜಾಡು ಪತ್ತೆಯಾಗಿತ್ತು. ಬಂಧಿತ ತಂಡದಲ್ಲಿ ಭಾರತೀಯರ ಜೊತೆಗೆ ಚೀನಾ ಮೂಲದ ವಂಚಕರು ಸೇರಿದ್ದು, ಇಡೀ ವಂಚನಾ ಜಾಲವನ್ನು ಚೀನಾದ ಹ್ಯಾಂಡ್ಲರ್ಗಳು ನಿಯಂತ್ರಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಗಳಿಂದ ಲ್ಯಾಪ್ಟಾಪ್ಗಳು, 21 ಮೊಬೈಲ್ ಫೋನ್ಗಳು, 20 ವಿವಿಧ ಕಂಪನಿಗಳ ಸಿಮ್ ಕಾರ್ಡ್ಗಳು ಹಾಗೂ 20 ಬ್ಯಾಂಕ್ ಡೆಬಿಟ್–ಕ್ರೆಡಿಟ್ ಕಾರ್ಡ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಂದೇ ಖಾತೆಯಿಂದ ₹167 ಕೋಟಿ ವರ್ಗಾವಣೆ
ತನಿಖೆಯಲ್ಲಿ ಒಟ್ಟು 624 ಬ್ಯಾಂಕ್ ಖಾತೆಗಳ ಮಾಹಿತಿ ಪತ್ತೆಯಾಗಿದ್ದು, ಈ ಖಾತೆಗಳ ವಿರುದ್ಧ NCRP ಪೋರ್ಟಲ್ನಲ್ಲಿ 4,580ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಒಂದು ಬ್ಯಾಂಕ್ ಖಾತೆಯಿಂದಲೇ ₹167 ಕೋಟಿ ಹಣ ವರ್ಗಾವಣೆ ನಡೆದಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಅಲ್ಲದೆ, ಇನ್ನೂ 10 ಖಾತೆಗಳ ಪರಿಶೀಲನೆ ವೇಳೆ ಸುಮಾರು ₹30.70 ಕೋಟಿ ಹಣ ವರ್ಗಾವಣೆ ನಡೆದಿರುವುದೂ ಪತ್ತೆಯಾಗಿದೆ.
ಹೇಗೆ ನಡೆಯುತ್ತಿತ್ತು ವಂಚನೆ?
ಸಾಮಾಜಿಕ ಜಾಲತಾಣಗಳ ಮೂಲಕ ಖಾತೆದಾರರು ಹಾಗೂ ಏಜೆಂಟ್ಗಳನ್ನು ನೇಮಿಸಿಕೊಂಡು ದಿನಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚಿಸಲಾಗುತ್ತಿತ್ತು. ವಂಚನೆಯ ಹಣವನ್ನು ಯುಎಸ್ ಡಾಲರ್ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು. ಈ ಅಕ್ರಮ ಜಾಲಕ್ಕೆ ಕಾಂಬೋಡಿಯಾದಲ್ಲಿರುವ ವಂಚನಾ ಬಿಪಿಒ ಸಹ ಬೆಂಬಲ ನೀಡುತ್ತಿದ್ದುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳು
ಗುಜರಾತ್ನ ಬಾವಾ ನಗರ ಜಿಲ್ಲೆ ನಿವಾಸಿ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್ನ ಸಿಂಗಬುಮ್ ಜಿಲ್ಲೆಯ ಪುಪ್ಲ ಶಿವಕುಮಾರ್ ರಾವ್ (32), ಉತ್ತರ ಪ್ರದೇಶದ ಮಾವೋ ಜಿಲ್ಲೆ ನಿವಾಸಿ ಗೌರವ್ ಪಾಂಡೆ (24), ಸುಲ್ತಾನ್ಪುರ ಜಿಲ್ಲೆಯ ಹರ್ಷ್ ಮಿಶ್ರಾ (22), ಜಾರ್ಖಂಡ್ ಮೂಲದ ರಾಜೇಶ್ ಮಂಡನ್ (30), ಲಖನೌ ಮೂಲದ ಮೊಹಮ್ಮದ್ ಆಕೀಬ್ ಅಲಿ (27), ಬಿಹಾರದ ನಲಂದಾ ಜಿಲ್ಲೆಯ ರಾಜೀವ್ ರಂಜನ್ ಕುಮಾರ್ (30), ಜಾರ್ಖಂಡ್ ನಿವಾಸಿ ಮಿಥುನ್ ಕುಮಾರ್ ಮಂಗರಾಜ್ (38), ರಾಜಸ್ಥಾನದ ಜೈಪುರದ ಓಂ ಪ್ರಕಾಶ್ ಯಾದವ್ (37) ಹಾಗೂ ಝಾನ್ಸಿ ಮೂಲದ ನೌಶಾದ್ ಅಲಿ (34) ಸೇರಿ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
