ಬೇಲೂರು: ಸಿಲಿಂಡರ್ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯ ಪರಿಣಾಮವಾಗಿ ಹಾಸನ ಜಿಲ್ಲೆಯ ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದ ಅನ್ನದಾಸೋಹವನ್ನು ಆಡಳಿತ ಮಂಡಳಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಐತಿಹಾಸಿಕ ಹಾಗೂ ವಿಶ್ವಪಾರಂಪರಿಕ ತಾಣ ಪಟ್ಟಿಯಲ್ಲಿರುವ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ನಿತ್ಯವೂ ಸಾವಿರಾರು ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಇರುತ್ತದೆ. ಸಾಮಾನ್ಯವಾಗಿ ದಿನಕ್ಕೆ ಸುಮಾರು 1,500ರಿಂದ 2,000 ಭಕ್ತರು ಇಲ್ಲಿ ಅನ್ನದಾಸೋಹ ಪಡೆಯುತ್ತಿದ್ದರು.
ಆದರೆ, ಸಿಲಿಂಡರ್ ಅಲಭ್ಯತೆ ಹಾಗೂ ಸೌದೆ ಒಲೆ ಬಾಯ್ಲರ್ನ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನೆನ್ನೆಯಿಂದಲೇ ದಾಸೋಹವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಅನ್ನದಾಸೋಹ ಸ್ಥಗಿತಗೊಳಿಸಿರುವ ಕುರಿತು ದೇವಾಲಯದ ಪ್ರವೇಶ ದ್ವಾರದ ಬಳಿ ಆಡಳಿತ ಮಂಡಳಿ ಸೂಚನಾ ಫಲಕ ಅಳವಡಿಸಿ ಭಕ್ತರಿಗೆ ಮಾಹಿತಿ ನೀಡಿದೆ.
ಸಾವಿರಾರು ಕುಟುಂಬಗಳ ಮನೆದೇವರಾಗಿರುವ ಚನ್ನಕೇಶವ ಸ್ವಾಮಿ ದೇವರ ದರ್ಶನಕ್ಕೆ ಆಗಮಿಸಿದ ಅನೇಕ ಭಕ್ತರು, ಪ್ರಸಾದ ದೊರೆಯದೆ ನಿರಾಶೆಯಿಂದ ವಾಪಸ್ ಆಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಪ್ರಸಾದ ನಿಲಯಕ್ಕೆ ಬಂದ ಹಲವರು ಅನ್ನದಾಸೋಹ ಸಿಗದೆ ಹಿಂದಿರುಗುತ್ತಿರುವುದು ಭಕ್ತರಲ್ಲಿ ಬೇಸರಕ್ಕೆ ಕಾರಣವಾಗಿದೆ.
ಈ ಕುರಿತು ದೇವಾಲಯದ ಆಡಳಿತಾಧಿಕಾರಿ ಯೋಗೇಶ್ ಪ್ರತಿಕ್ರಿಯಿಸಿ, ಸಿಲಿಂಡರ್ ಕೊರತೆ ಹಾಗೂ ತಾಂತ್ರಿಕ ಸಮಸ್ಯೆ ನಿವಾರಣೆಯಾದ ಬಳಿಕ ಮತ್ತೆ ಅನ್ನದಾಸೋಹ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
