ಇತ್ತೀಚಿಗೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ಶ್ರೀಮತಿ ಮಂಗಳ ವೆಂಕಟೇಶ್ ಸ್ಮರಣಾರ್ಥ ಶ್ರೀಮತಿ ಶ್ವೇತಾ ಮೋಹನ್ ನಿರ್ದೇಶನದಲ್ಲಿ ಶ್ರೀ ವಿಜಯ ವಿರಚಿತ ದಶರಥ ಶ್ರೀರಾಮ ಎಂಬ ನಾಟಕವನ್ನು ಶ್ರೀ ಶಾರದಾ ಕಲಾ ಸಂಘದ ವನಿತೆಯರು ಪ್ರಸ್ತುತಪಡಿಸಿದರು.
ಇದು ಸುಮಾರು ಒಂದುವರೆ ಗಂಟೆಯ ಪೌರಾಣಿಕ ನಾಟಕವಾಗಿದ್ದು ದಶರಥನನ್ನು ನಾಟಕದ ಕೇಂದ್ರ ಬಿಂದುವಾಗಿಸಿಕೊಂಡು ನಾಟಕ ರಚಿತಗೊಂಡಿದೆ. ತನ್ನ ಮಗ ಶ್ರೀರಾಮನಿಲ್ಲದೆ ಬದುಕಲು ಸಾಧ್ಯವಿಲ್ಲವೆಂದು ದಶರಥನು ಪ್ರಾಣ ಬಿಡುವ ಪ್ರಸಂಗವೇ ಈ ನಾಟಕದ ಕಥಾವಸ್ತು. ಮಕ್ಕಳಿಲ್ಲದ ದಶರಥನು ವಸಿಷ್ಟರ ಮಾರ್ಗದರ್ಶನದಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿ ಕೌಸಲ್ಯಗೆ ಶ್ರೀರಾಮನು, ಕೈಕೆಗೆ ಭರತನು, ಸುಮಿತ್ರಗೆ ಲಕ್ಷ್ಮಣ ಶತ್ರುಘ್ನರು ಜನಿಸಿದರು. ನಾಲ್ಕು ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಈ ಮಧ್ಯೆ ಬ್ರಹ್ಮರ್ಷಿ ವಿಶ್ವಮಿತ್ರರು ತಾವು ನಡೆಸುತ್ತಿದ್ದ ಯಾಗದ ರಕ್ಷಣೆಗೆ ರಾಮ ಲಕ್ಷ್ಮಣರನ್ನು ಜೊತೆಗೆ ಕಳುಹಿಸುವಂತೆ ದಶರಥನನ್ನು ಕೇಳುತ್ತಾರೆ. ಒಲ್ಲದ ಮನಸ್ಸಿನಿಂದ ಅವರೊಡನೆ ದಶರಥ ಕಳಿಸುತ್ತಾನೆ.

ಮಾರೀಚ ಮತ್ತು ಬಾಹುವನ್ನು ರಾಮ ಲಕ್ಷ್ಮಣರು ಸಂಹರಿಸಿ ವಿಶ್ವಾಮಿತ್ರ ಮಿಥಿಲೆಯ ಜನಕ ಮಹಾರಾಜನ ಆಸ್ಥಾನದಲ್ಲಿ ಆತಿಥ್ಯ ಸ್ವೀಕರಿಸಲು ಹೋದಾಗ ಸೀತೆಯ ಸ್ವಯಂವರ ಏರ್ಪಟ್ಟಿರುತ್ತದೆ ರಾಮನು ಶಿವಧನಸ್ಸನ್ನು ಲೀಲಾಜಾಲವಾಗಿ ಮುರಿದು ಸೀತೆಯನ್ನು ಗೆದ್ದು ಅವರಿರ್ವರ ಹಾಗೂ ಉಳಿದ ಸಹೋದರರ ಕಲ್ಯಾಣೋತ್ಸವ ಜರುಗುತ್ತದೆ. ದಶರಥನು ರಾಮನಿಗೆ ಯುವ ಪಟ್ಟಾಭಿಷೇಕ ಮಾಡಲು ಹೊರಡುತ್ತಾನೆ. ಮಂಥರೆಯ ಕುತಂತ್ರದಿಂದ ಕೈಕೆಯ ಮನ ಕೆಡುತ್ತದೆ. ಇದರ ಪರಿಣಾಮವಾಗಿ ರಾಮನು ನಾರುಮುಡಿಯನ್ನುಟ್ಟು 14 ವರ್ಷ ವನವಾಸಕ್ಕೆ ಹೋಗಬೇಕಾಗುತ್ತದೆ.
ಇದೇ ಕಾರಣಕ್ಕೆ ದಶರಥನು ಮನನೊಂದು ಪ್ರಾಣ ಬಿಡುವ ದೃಶ್ಯದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಾಟಕದ ಕೇಂದ್ರ ಪಾತ್ರ ದಶರಥನ ಪಾತ್ರವನ್ನು ಶ್ರೀಮತಿ ಶ್ವೇತಾ ಮೋಹನ್ ಸಮರ್ಥವಾಗಿ ಹಾಗೂ ಲೀಲಾಜಾಲವಾಗಿ ಅಭಿನಯಿಸಿ ತಮ್ಮ 15 ವರ್ಷಗಳ ರಂಗಾಭಿನಯ ಅನುಭವ ತೋರಿದರು. ಮಂಥರೆ ಪಾತ್ರದಲ್ಲಿ ಶ್ರೀಮತಿ ಲಲಿತಾ ರಘು ಎಲ್ಲರ ಮನಸೂರೆಗೊಂಡರು.

ವಸಿಷ್ಠರಾಗಿ ಪ್ರಭಾಮಣಿ ಮಂಜುನಾಥ್ ಪಾತ್ರಕ್ಕೆ ನ್ಯಾಯ ಒದಗಿಸಿದರು. ತಿಮ್ಮಿ ಯ ಪಾತ್ರದಲ್ಲಿ ಶ್ರೀಮತಿ ಸಂಗೀತ ಶ್ರೀನಿವಾಸ್ ಸಭಿಕರನ್ನು ನಗಿಸಿದರು. ಕೌಸಲ್ಯೆ ಪಾತ್ರದಲ್ಲಿ ಶ್ರೀಮತಿ ತೀರ್ಥ ಅವರು, ಸುಮಿತ್ರ ಪಾತ್ರದಲ್ಲಿ ಕನಕ ಮೇಡಂ, ಕೈಕೆ ಪಾತ್ರದಲ್ಲಿ ಜಯ ರಮೇಶ್ ಅದ್ಭುತ ನಟನೆ ತೋರಿದರು. ವಿಶ್ವಾಮಿತ್ರನ ಪಾತ್ರದಲ್ಲಿ ಆಶಾ ಗಿರೀಶ್ ಭಟ್ ರಾಮನ ಪಾತ್ರದಲ್ಲಿ ರಾಜರಾಜೇಶ್ವರಿ, ಸೀತಾ ಪಾತ್ರದಲ್ಲಿ ಶ್ರೀಮತಿ ಪೂಜಾ ಅವರು, ಲಕ್ಷ್ಮಣನ ಪಾತ್ರದಲ್ಲಿ ಶ್ರೀಮತಿ ಮಾಲಾ, ಸೂತ್ರದಾರಿಯಾಗಿ ಶ್ರೀಮತಿ ಹೇಮಾರಾಣಿ, ಸೇವಕಿಯಾಗಿ ಶ್ರೀಮತಿ ಅನ್ನಪೂರ್ಣ, ತಿಮ್ಮನ ಪಾತ್ರದಲ್ಲಿ ಶ್ರೀಮತಿ ಪುಷ್ಪ, ಸುಮಂತನ ಪಾತ್ರದಲ್ಲಿ ಶಾಂತಕುಮಾರಿ, ಬಾಲರಾಮನಾಗಿ ಧಾತ್ರಿ ಪ್ರಹರಿ ಅಭಿನಯಿಸಿದರು. ನೃತ್ಯ ದಲ್ಲಿ ಧೃತಿ ಮತ್ತು ವಿಸ್ಮಿತ
ನಾಟಕಕ್ಕೆ ಪೂರಕವಾಗಿದ್ದು ಕಳೆ ತಂದರು. ಹಾಡುಗಾರಿಕೆಯಲ್ಲಿ ಶ್ರೀಮತಿ ಸವಿತಾ ಸುದರ್ಶನ್, ಶ್ರೀಮತಿ ರೂಪ ಸುರೇಶ್, ಅಶ್ವಿನಿ ರಂಗನಾಥ್
ಸುಮಾ ಸತೀಶ್ ರವರು ಮತ್ತು ತಬಲ ಸಹಕಾರನಾಗೇಶ್ ಅವರದು ಮತ್ತು ನೇಪಥ್ಯ ಸಹಕಾರದಲ್ಲಿ ರಾಣಿಮೂರ್ತಿ ಶಾಂತ ರಮೇಶ್ ಇದ್ದರು.

ಸಂಗೀತ ಸ್ವರ ಸಂಯೋಜನೆ ಆಲಾಪನೆ ಜೈ ಶಂಕರ್ ಬೆಳಗುಂಬ ಅವರದು. ಮೇಕಪ್ ಹನುಮಂತು ಅವರ ವಸ್ತ್ರಾಲಂಕಾರ ಶೋಭೆ ತಂದಿತ್ತು.
ಒಟ್ಟಾರೆಯಾಗಿ ನಾಟಕ ಪ್ರೇಕ್ಷಕರ ಮೆಚ್ಚಿಗೆಗೆ ಪಾತ್ರವಾಯಿತು. ತಮ್ಮ ಪ್ರಥಮ ನಿರ್ದೇಶನದಲ್ಲೇ ಉತ್ತಮ ಪ್ರಯೋಗದಿಂದ ಶ್ರೀಮತಿ ಶ್ವೇತಾ ಮೋಹನ್ ಗಮನ ಸೆಳೆದರು.
— – –
ಗೊರೂರು ಅನಂತರಾಜು,
ಹಾಸನ
9449462879
ವಿಳಾಸ: ಹುಣಸಿನಕೆರೆ ಬಡಾವಣಿ,
29ನೇ ವಾರ್ಡ್, 3 ನೇ ಕ್ರಾಸ್,
ಹಾಸನ – 573 201
