
ವಿಶ್ವದ ಅತಿ ದೊಡ್ಡ ಚುನಾವಣೆಗೆ ಹೆಸರಾಗಿರುವ ಭಾರತದ 2024 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಸಮಗ್ರ ದತ್ತಾಂಶವನ್ನು ಬಿಡುಗಡೆ ಮಾಡಿದೆ.
ಈ ದತ್ತಾಂಶವು ಏಕಕಾಲದಲ್ಲಿ ನಡೆದ 2024ರ ಲೋಕಸಭಾ ಚುನಾವಣೆ(543 ಕ್ಷೇತ್ರ) ಹಾಗೂ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ಸೇರಿದಂತೆ ೪ ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಸಂಕ್ಷಿಪ್ತ ಅಂಕಿ-ಅಂಶಗಳನ್ನು ಈ ದತ್ತಾಂಶ ಒಳಗೊಂಡಿದೆ.
ಚುನಾವಣಾ ವಿಶ್ಲೇಷಣೆ ಮಾಡಲು ಶಿಕ್ಷಣ ತಜ್ಞರು, ಸಂಶೋಧಕರು, ಚುನಾವಣಾ ವೀಕ್ಷಕರು ಹಾಗೂ ಮತದಾರರಿಗೆ ಈ ದತ್ತಾಂಶ ಅನುಕೂಲವಾಗಲಿದೆ.
ಚುನಾವಣಾ ಆಯೋಗದ ಈ ಸ್ವಯಂಪ್ರೇರಿತ ದತ್ತಾಂಶ ಬಿಡುಗಡೆ ಕಾರ್ಯವು ಭಾರತದ ಚುನಾವಣಾ ವ್ಯವಸ್ಥೆಯ ಆಧಾರವಾಗಿರುವ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶವನ್ನೊಳಗೊಂಡಿದೆ. ಈ ಸವಿವರವಾದ ದತ್ತಾಂಶ ಬಿಡುಗಡೆಯು ಶೈಕ್ಷಣಿಕ ಸಂಶೋಧನೆ ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಚುನಾವಣೆ ಸಂಬಂಧಿಸಿದ ದತ್ತಾಂಶವನ್ನು ಬಹಿರಂಗಪಡಿಸುವ ಮೂಲಕ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳುವುದಾಗಿದೆ.
ಮತದಾರರ ವಿವರ :-
2024ರ ಲೋಕಸಭಾ ಚುನಾವಣೆಯಲ್ಲಿ 97,97,51,847 ನೋಂದಾಯಿತ ಮತದಾರರಿದ್ದು, ವಿದ್ಯುನ್ಮಾನ ಮತ್ತು ಅಂಚೆ ಮತ ಸೇರಿದಂತೆ ಒಟ್ಟು 64.64 ಕೋಟಿ ಮತಗಳು ಚಲಾವಣೆಗೊಂಡಿವೆ. ಇದರಲ್ಲಿ 32,93,61,948 ಪುರುಷರು; 31,27,64,269 ಮಹಿಳೆಯರು ಹಾಗೂ 13,058 ತೃತೀಯ ಲಿಂಗಿಗಳು ಒಳಗೊಂಡಿದ್ದು, 42,81,594 ಅಂಚೆ ಮತಪತ್ರ ಸೇರಿದಂತೆ ಒಟ್ಟು 64,64,20,869 (63,71,839 -ನೋಟಾ) ಮತಗಳು ಚಲಾವಣೆಗೊಂಡಿವೆ.
ಈ ಚುನಾವಣೆಯಲ್ಲಿ ಅಸ್ಸಾಂ ರಾಜ್ಯದ ಧುಬ್ರಿ ಲೋಕಸಭಾ ಕ್ಷೇತ್ರದಲ್ಲಿ ಶೇ.92.3ರಷ್ಟು ಮತದಾನವಾಗುವ ಮೂಲಕ ಅತಿ ಹೆಚ್ಚು ಮತದಾನವಾಗಿರುವ ಲೋಕಸಭಾ ಕ್ಷೇತ್ರವೆನಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅತಿ ಕಡಿಮೆ ಶೇ.38.7ರಷ್ಟು ಹಾಗೂ 11 ಲೋಕಸಭಾ ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ 91,19,50,734 ಮತದಾರರು ನೋಂದಾಯಿಸಿಕೊಂಡಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿ 97,97,51,847 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಇದರಿಂದ ಶೇ.7.43ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾದಂತಾಗಿದೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿಯೂ 2019 ರಲ್ಲಿ ಕೇವಲ ಶೇ.14.4 ರಷ್ಟಿದ್ದ ಮತದಾನ ಪ್ರಮಾಣ ಶೇ.38.7ಕ್ಕೆ ಏರಿಕೆಯಾಗಿದೆ.
ಮತಗಟ್ಟೆ ವಿವರ :-
2024 ರ ಲೋಕಸಭಾ ಚುನಾವಣೆಯಲ್ಲಿ 10,52, 664 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 40 ಮತಗಟ್ಟೆಗಳಲ್ಲಿ ಮಾತ್ರ ಮರು ಮತದಾನವಾಗಿದೆ. ಮತದಾನಕ್ಕಾಗಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1,62,069 ಹಾಗೂ ಲಕ್ಷದ್ವೀಪದಲ್ಲಿ ಅತಿ ಕಡಿಮೆ ಅಂದರೆ 55 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 11 ಸಂಸದೀಯ ಕ್ಷೇತ್ರಗಳು 1,೦೦೦ಕ್ಕಿಂತ ಕಡಿಮೆ ಹಾಗೂ 3 ಸಂಸದೀಯ ಕ್ಷೇತ್ರಗಳು 3,೦೦೦ಕ್ಕಿಂತ ಹೆಚ್ಚಿನ ಮತಗಟ್ಟೆಗಳನ್ನು ಹೊಂದಿದ್ದವು. 2024ರಲ್ಲಿ ಬಿಹಾರ್ ರಾಜ್ಯದಲ್ಲಿ ಅತಿಹೆಚ್ಚು 4739 ಹೊಸ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು.
ನಾಮನಿರ್ದೇಶನ ವಿವರ :-
2024 ರ ಚುನಾವಣೆಯಲ್ಲಿ ಒಟ್ಟು 12,459 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ದೇಶದಲ್ಲಿಯೇ ಅತಿ ಹೆಚ್ಚು ನಾಮಪತ್ರಗಳನ್ನು ತೆಲಂಗಾಣ ರಾಜ್ಯದ ಮಲ್ಕಾಜ್ಗಿರಿ 114-ಲೋಕಸಭಾ ಕ್ಷೇತ್ರವು ಹೊಂದಿದೆ.
ಮಹಿಳಾ ಮತದಾರರ ವಿವರ :-
2024 ರ ಚುನಾವಣೆಯಲ್ಲಿ ಒಟ್ಟು ನೋಂದಾಯಿತ 97,97,51,847 ಮತದಾರರ ಪೈಕಿ 47,63,11,240 ಮಹಿಳಾ ಮತದಾರರು ನೋಂದಾಯಿಸಿಕೊಂಡಿದ್ದರು. 2009ರ ಚುನಾವಣೆಯನ್ನು ಹೋಲಿಸಿದಾಗ ಈ ಚುನಾವಣೆಯಲ್ಲಿ ನೋಂದಾಯಿತ ಮತದಾರರ ಸಂಖ್ಯೆ ಶೇಕಡ 0.53ರಷ್ಟು ಹೆಚ್ಚಳವಾಗಿದೆ. ಅತಿ ಹೆಚ್ಚು ಮಹಿಳಾ ಮತದಾರರನ್ನು ಪುದುಚೇರಿ (53..೦3%) ಹಾಗೂ ಕೇರಳ(51.56 %) ರಾಜ್ಯ ಹೊಂದಿದೆ. ಅಂದರೆ ಪ್ರತಿ 1,೦೦೦ ಪುರುಷ ಮತದಾರರಿಗೆ 946 ಮಹಿಳಾ ಮತದಾರರಿದ್ದರು.
ಮತದಾನ ಪ್ರಮಾಣ :-
2024 ರಲ್ಲಿ ಶೇಕಡ 65.55 ರಷ್ಟು ಪುರುಷ ಹಾಗೂ ಶೇ.65.78 ರಷ್ಟು ಮಹಿಳಾ ಮತದಾರರು ಮತ ಚಲಾಯಿಸಿದ್ದು, 2019 ರಂತೆಯೇ 2024 ರಲ್ಲಿಯೂ ಮತದಾನ ಪ್ರಮಾಣದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಸಾರ್ವತ್ರಿಕ ಲೋಕಸಭಾ ಚುನಾವಣೆ ಇತಿಹಾಸದಲ್ಲಿ 2ನೇ ಬಾರಿ ಮಹಿಳೆಯರ ಮತದಾನದ ಪ್ರಮಾಣ ಹೆಚ್ಚಳವಾಗಿದೆ.
ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಮಹಾರಾಷ್ಟ್ರ (ಮಹಿಳಾ ಅಭ್ಯರ್ಥಿಗಳ ಸಂಖ್ಯೆ-111,) ಉತ್ತರಪ್ರದೇಶ(80) ಹಾಗೂ ತಮಿಳುನಾಡು(77 ) ರಾಜ್ಯಗಳು ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿದೆ. ಚುನಾವಣೆ ನಡೆದ 543ಲೋಕಸಭಾ ಕ್ಷೇತ್ರಗಳ ಪೈಕಿ 152 ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವುದಿಲ್ಲ.
ತೃತೀಯ ಲಿಂಗ ಮತದಾರರ ವಿವರ :-
2019 ರ ಲೋಕಸಭಾ ಚುನಾವಣೆಯಲ್ಲಿ 39,075 ಹಾಗೂ 2024ರಲ್ಲಿ 48,272 ತೃತೀಯ ಲಿಂಗ ಮತದಾರರು ನೋಂದಾಯಿಸಿಕೊಂಡಿದ್ದು, 5 ವರ್ಷಗಳ ಅವಧಿಯಲ್ಲಿ ಶೇ.23.5 ರಷ್ಟು ತೃತೀಯ ಲಿಂಗ ಮತದಾರರ ಸಂಖ್ಯೆ ಹೆಚ್ಚಳವಾಗಿರುವುದನ್ನು ಗಮನಿಸಬಹುದಾಗಿದೆ.
ತಮಿಳುನಾಡು ರಾಜ್ಯವು ಅತಿ ಹೆಚ್ಚು8,467 ತೃತೀಯ ಲಿಂಗ ಮತದಾರರನ್ನು ಹೊಂದಿದ್ದು, 2019 ರಲ್ಲಿ ಶೇ.14.64 ಹಾಗೂ 2024 ರಲ್ಲಿ ಶೇ.27.09 ರಷ್ಟು ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ್ದು, ಬಹುತೇಕ ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ ಪ್ರಮಾಣ ದ್ವಿಗುಣವಾಗಿರುವುದು ಕಾಣಬಹುದಾಗಿದೆ.
ಈ ಚುನಾವಣೆಯಲ್ಲಿ 90,28,696 ದಿವ್ಯಾಂಗ ಮತದಾರರು ಹಾಗೂ 1,19,374 ಸಾಗರೋತ್ತರ ಮತದಾರರು ನೋಂದಾಯಿಸಿಕೊಂಡಿದ್ದರು.
ಚುನಾವಣಾ ಫಲಿತಾಂಶ ವಿವರ :-
2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದ ಒಟ್ಟು 6 ರಾಷ್ಟ್ರೀಯ ಪಕ್ಷಗಳು ಭಾಗವಹಿಸಿದ್ದವು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7190 ಅಭ್ಯರ್ಥಿಗಳು ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ 279 ಸ್ವತಂತ್ರ ಮಹಿಳಾ ಅಭ್ಯರ್ಥಿ ಸೇರಿ 3,921 ಸ್ವತಂತ್ರ ಅಭ್ಯರ್ಥಿಗಳ ಪೈಕಿ 7 ಮಂದಿ ಮಾತ್ರ ಆಯ್ಕೆಯಾಗಿದ್ದು, 3,905 ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಂಡಿದ್ದಾರೆ.
2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ದತ್ತಾಂಶಗಳ ಸವಿವರವಾದ ವರದಿ ಹಾಗೂ ಅಂಕಿ-ಅಂಶಗಳನ್ನು ಭಾರತ ಚುನಾವಣಾ ಆಯೋಗದ Link: Menu >>MEDIA & PUBLICATION>>Election Results & Statistics< https://www.gov.in.statistical-reports ನಿಂದ ಪಡೆಯಬಹುದಾಗಿದೆ.
ಆರ್. ರೂಪಕಲಾ
ವಾರ್ತಾ ಸಹಾಯಕರು
ವಾರ್ತಾ ಇಲಾಖೆ, ತುಮಕೂರು.