ರಾಮನಾಥಪುರ, ಏ.6 (RNP): ತಂಬಾಕಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ರೈತರು ಹಾಗೂ ಭಾರತೀಯ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರಿದಿತು. ಈ ವೇಳೆ ಹಾಸನ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ರಮೇಶ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿದರು.
ರಾಮನಾಥಪುರದ ಶ್ರೀ ಸುಬ್ರಹ್ಮಣ್ಯನಗರದಲ್ಲಿರುವ ಪ್ಲಾಟ್ ಫಾರಂ 7 ಮತ್ತು 63ರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ತಂಬಾಕು ಮಂಡಳಿ ಹಾಗೂ ಖರೀದಿ ಕಂಪನಿಗಳು ಬೆಳೆಗಾರರನ್ನು ವಂಚಿಸುತ್ತಿವೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಂಟಿ ನಿರ್ದೇಶಕ ರಮೇಶ್ ಕುಮಾರ್, ರೈತರು ಹಾಗೂ ತಂಬಾಕು ಬೆಳೆಗಾರರು ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿ, ರಾಜ್ಯ ಸರ್ಕಾರದ ಗಮನಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಗೌರವಾಧ್ಯಕ್ಷ ಸೀಬಹಳ್ಳಿ ಯೋಗಣ್ಣ, ತಂಬಾಕಿನ ಬೆಲೆ ತೀವ್ರ ಕುಸಿತಗೊಂಡಿರುವುದರಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಈ ನಷ್ಟವನ್ನು ರಾಜ್ಯ ಸರ್ಕಾರ ಪರಿಹರಿಸಬೇಕು. ತಂಬಾಕು ಮಂಡಳಿ ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಇನ್ನೂ ಅರ್ಧದಷ್ಟು ರೈತರ ತಂಬಾಕು ಮಾರಾಟವಾಗದೆ ಉಳಿದಿದ್ದು, ಮಂಡಳಿಗೆ ತರುವ ತಂಬಾಕಿಗೆ ಖರೀದಿ ಕಂಪನಿಗಳು ತಮ್ಮ ಇಚ್ಛೆಯಂತೆ ಕಡಿಮೆ ದರ ನಿಗದಿಪಡಿಸುತ್ತಿವೆ. ಇದರಿಂದ ತಂಬಾಕು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದರು.
ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆ.ಜಿ.ಗೆ ಗರಿಷ್ಠ ₹340 ಹಾಗೂ ಕನಿಷ್ಠ ಗುಣಮಟ್ಟದ ತಂಬಾಕಿಗೆ ₹280 ರಿಂದ ₹300 ವರೆಗೆ ದರ ನೀಡುವಂತೆ ಖರೀದಿ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದಿಂದ ಸ್ಪಷ್ಟ ಭರವಸೆ ಸಿಗುವವರೆಗೆ ಭಾರತೀಯ ರೈತ ಸಂಘ ಹಾಗೂ ತಂಬಾಕು ಬೆಳೆಗಾರರ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಸೀಬಹಳ್ಳಿ ಯೋಗಣ್ಣ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಾರತೀಯ ರೈತ ಸಂಘದ ಅಧ್ಯಕ್ಷ ಬಂಡಿಗನಹಳ್ಳಿ ರವಿ, ಉಪಾಧ್ಯಕ್ಷ ಮಂಜೇಗೌಡ, ಹರಳಹಳ್ಳಿ ತಮ್ಮೇಗೌಡ, ಸಂಜು, ಜಗದೀಶ್, ರಮೇಶ್, ದೋರೆ, ವೇದಾನಂದ, ವೀರೇಂದ್ರ, ಅರಕಲಗೂಡು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕವಿತಾ, ತಂಬಾಕು ಮಂಡಳಿ ಹರಾಜು ಅಧೀಕ್ಷಕಿ ಸವಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೊಣನೂರು ಠಾಣೆ ಪಿ.ಎಸ್.ಐ. ಆರ್. ಮರಿಯಪ್ಪ ಬ್ಯಾಳಿ ಹಾಗೂ ಸಿಬ್ಬಂದಿ ಬಂದುಬಸ್ತು ವ್ಯವಸ್ಥೆ ಕೈಗೊಂಡಿದ್ದರು.
– ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
