ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಸ್ಥಳ ನಿರೀಕ್ಷಣೆಯಲ್ಲಿದ್ದ ಒಟ್ಟು 42 ಸಹಾಯಕ ಕಾರ್ಯಪಾಲಕ ಅಭಿಯಂತರ(ಎಇಇ) ರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, “ಮಾನ್ಯ ಉಪಮುಖ್ಯಮಂತ್ರಿಯವರಿಂದ ಅನುಮೋದಿತ’ ಎಂಬುದನ್ನೂ ಆದೇಶದ ಕೊನೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಇಲಾಖೆಯಲ್ಲಿನ ಇಂಜಿನಿಯರ್ಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, ತಮ್ಮ ಪೂರ್ವಾನುಮತಿ ಇಲ್ಲದೆ ವರ್ಗಾವಣೆ ಮಾಡದಂತೆ ಸೂಚಿಸಿದ್ದರು. ಅದರಂತೆ ಇದೀಗ ಡಿಸಿಎಂ ಅನುಮೋದನೆ ಮೇರೆಗೇ ವರ್ಗಾವಣೆ ಪ್ರಕ್ರಿಯೆಗಳನ್ನು ಜಾರಿಗೊಳಿಸಿದೆ.
ಮೇ 9 ರಂದು “ಮಾನ್ಯ ಮುಖ್ಯಮಂತ್ರಿಯವರಿಂದ ಅನುಮೋದಿತ’ ಎಂಬ ವಾಕ್ಯವುಳ್ಳ ಐವರು ಮುಖ್ಯ ಇಂಜಿನಿಯರ್ಗಳ ವರ್ಗಾವಣೆ ಪ್ರತಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಡಿಸಿಎಂ, ನನ್ನ ಪೂರ್ವಾನುಮತಿ ಪಡೆದ ನಂತರ ವರ್ಗಾವಣೆ ಆದೇಶ ಹೊರಿಸುವಂತೆ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ಟಿಪ್ಪಣಿ ಮೂಲಕ ತಿಳಿಸಿತ್ತು. ಆದರೆ, ಮೇ 9ರಂದು ನನ್ನ ಗಮನಕ್ಕೆ ಬಾರದೆ ಕೆಲವು ಮುಖ್ಯ ಅಭಿಯಂತರರನ್ನು ವರ್ಗಾಯಿಸಿರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ಸೂಚನೆ ಕಡೆಗಣಿಸಿ ಹೊರಡಿಸಿರುವ ಆದೇಶಕ್ಕೆ ನನ್ನ ಆಕ್ಷೇಪವಿದೆ. ಆದೇಶ ಹಿಂಪಡೆಯಿರಿ. ನನ್ನ ಪೂರ್ವಾನುಮತಿ ಪಡೆಯಿರಿ ಎಂದು ಸೂಚಿಸಿದ್ದರು.
ಇದು ಸಿಎಂ ಹಾಗೂ ಡಿಸಿಎಂ ನಡುವಿನ ಅಧಿಕಾರ ತಿಕ್ಕಾಟವನ್ನು ಬಹಿರಂಗಪಡಿಸಿತ್ತು. ಇಲಾಖೆಯಲ್ಲಿ ಇಂಜಿನಿಯರ್ಗಳ ಕೊರತೆ ಇದೆ. ಒಂದೆರಡು ವರ್ಷ ಕೆಲಸ ಮಾಡುತ್ತಿದ್ದಂತೆ ಬಡ್ತಿ ಪಡೆದು ಲೋಕೋಪಯೋಗಿ ಸೇರಿದಂತೆ ಪಂಚಾಯತಿಗಳಲ್ಲಿನ ಇಂಜಿನಿಯರಿಂಗ್ ವಿಭಾಗಗಳಿಗೆ ವರ್ಗಾವಣೆಯಾಗಿಬಿಡುತ್ತಾರೆ. ಇದಕ್ಕಾಗಿ ಆ ರೀತಿ ಪತ್ರ ಬರೆದ್ದಿದೆ ಎಂದು ಡಿಸಿಎಂ ಸಮಜಾಯಿಷಿ ನೀಡಿದ್ದರು.
ಜೂ.13 ರಂದು 42 ಸಹಾಯಕ ಕಾರ್ಯಪಾಲಕ ಅಭಿಯಂತರರ ಆದೇಶ ಹೊರಬಿದ್ದಿದ್ದು, ಅದರಲ್ಲಿ ಡಿಸಿಎಂ ಅವರಿಂದ ಅನುಮೋದನೆ ಪಡೆಯಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
