
ಹಿಂದೂ ರಾಷ್ಟ್ರ ಎಂದು ಘೋಷಿಸುವುದು, ಪ್ರತ್ಯೇಕ ಸಂವಿಧಾನ ರಚಿಸುವುದು ದೇಶ ದ್ರೋಹದ ಕೃತ್ಯ
ಜಾತ್ಯತೀತ ರಾಷ್ಟ್ರವೆಂದು ಒಪ್ಪಿಕೊಂಡ ದೇಶದ ಸಂವಿಧಾನದಲ್ಲಿ, ಹಿಂದೂ ರಾಷ್ಟ್ರ ಎಂದು ಘೋಷಿಸುವುದು, ಪ್ರತ್ಯೇಕ ಸಂವಿಧಾನ ರಚಿಸುವುದು ದೇಶದ್ರೋಹದ ಕೃತ್ಯ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಗಣರಾಜ್ಯದ ಸಂಭ್ರಮದಲ್ಲಿರುವ ದೇಶದಲ್ಲಿ ‘ಹಿಂದೂ ರಾಷ್ಟ್ರಕ್ಕೆ ‘ಸಂವಿಧಾನ’ ಸಿದ್ಧಪಡಿಸಿರುವ ಆಘಾತಕಾರಿ ಹಾಗೂ ಅಪಾಯಕಾರಿ ಬೆಳವಣಿಗೆ ನಡೆದಿರುವುದು ದೇಶ ಭಾರಿ ಗಂಡಾಂತರ ಎದುರಿಸುವ ಮುನ್ಸೂಚನೆಯಂತಿದೆ’ ಎಂದು ಎಚ್ಚರಿಸಿದ್ದಾರೆ.
ಸಂವಿಧಾನ ಬದಲಾಯಿಸುತ್ತೇವೆ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು, ನಮಗೆ ಗೌರವ ಕೊಡುವ ಸಂವಿಧಾನ ರಚಿಸಿಕೊಳ್ಳಬೇಕು, ಇಂತಹ ಸಂವಿಧಾನ ವಿರೋಧಿ ಹೇಳಿಕೆಯ ಮುಂದುವರೆದ ಭಾಗವೇ ‘ಹಿಂದೂರಾಷ್ಟ್ರಕ್ಕಾಗಿ ಪ್ರತ್ಯೇಕ ಸಂವಿಧಾನ’ ರಚಿಸಿರುವುದು ಸ್ಪಷ್ಟ. ಮನುಸ್ಮೃತಿಯನ್ನೇ ಆಧಾರವಾಗಿಟ್ಟಿಕೊಂಡು ‘ಸಂವಿಧಾನ’ ರಚಿಸಲಾಗಿದೆ ಎನ್ನಲಾಗಿರುವುದು, ಮಹಿಳೆಯರು ಹಾಗೂ ದಲಿತ, ಶೋಷಿತ ಸಮುದಾಯಗಳ ಮರಣ ಶಾಸನವೇ ಆಗಿರುವುದರಲ್ಲಿ ಯಾವ ಅನುಮಾನವೂ ಇಲ್ಲ’ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುಕುಲ ಪದ್ಧತಿ ಜಾರಿ ಸೇರಿದಂತೆ ಧರ್ಮ ಸಂಸತ್ತು, ವೇದಾಧ್ಯಯನವೇ ಚುನಾವಣೆಯ ಮಾನದಂಡ ಸೇರಿದಂತೆ ಅಪಾಯಕಾರಿ ಅಂಶಗಳನ್ನು ಚರ್ಚಿಸಿರುವುದು ದೇಶದ ಬಹುಸಂಖ್ಯಾತ ಸಮುದಾಯಗಳಿಗೆ ಮಾಡಿರುವ ಅಪಮಾನ. ‘ಹಿಂದೂ ರಾಷ್ಟ್ರ’ ಕ್ಕೆ ಪ್ರತ್ಯೇಕ ಸಂವಿಧಾನ ರಚನೆ ಮಾಡಲು ಗುಪ್ತವಾಗಿಯೇ ತಯಾರಿ ನಡೆದಂತಿದೆ. ಫೆ.3ರಂದು ಸಂಪೂರ್ಣ 501 ಪುಟಗಳು ಬಹಿರಂಗವಾಗಲಿದೆ ಎನ್ನಲಾಗಿದ್ದು, ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಯಾವ ಕಾರಣಕ್ಕೂ ಬಹಿರಂಗಗೊಳ್ಳದಂತೆ ಹಾಗೂ ದೇಶದ ಸ್ವಾಸ್ಥ್ಯವನ್ನು ಹಾಳುಗೆಡವದಂತೆ ಕ್ರಮ ತೆಗೆದುಕೊಳ್ಳಬೇಕಿದೆ’ ಎಂದು ಅವರು ಮನವಿ ಮಾಡಿದ್ದಾರೆ.
ಪ್ರತಿಯೊಬ್ಬ ಭಾರತೀಯರ ಸ್ವಾಭಿಮಾನ, ಗೌರವ ಹಾಗೂ ಘನತೆಯ ಬದುಕಿನ ಹಕ್ಕು ನೀಡಿರುವ ಸಂವಿಧಾನವನ್ನೇ ಗೌಣಗೊಳಿಸುವ ಹಾಗೂ ಅಪಮಾನಗೊಳಿಸುವ ಪಟ್ಟಭದ್ರ ಹಿತಾಸಕ್ತಿಗಳ ವ್ಯವಸ್ಥಿತ ಸಂಚು ಹೊರ ಬರುತ್ತಲೇ ಇದೆ. ಇಂತಹ ಸಂವಿಧಾನ ವಿರೋಧಿ ದುಷ್ಕರ್ಮಿಗಳ ಕೃತ್ಯವನ್ನು ಹಿಮ್ಮೆಟ್ಟಿಸದಿದ್ದರೆ ಬಹುತ್ವ ಹಾಗೂ ಐಕ್ಯತೆಯ ಭಾರತ ಉಳಿಯುವುದಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.