ನವದೆಹಲಿ, ಆಗಸ್ಟ್ 17: ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಈ ಹುದ್ದೆಗೆ ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲರಾಗಿರುವ ಸಿ.ಪಿ. ರಾಧಾಕೃಷ್ಣನ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಪ್ರಮುಖ ಸಭೆಯ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಕುರಿತು ಘೋಷಣೆ ಮಾಡಿದರು. “ಸಿ.ಪಿ. ರಾಧಾಕೃಷ್ಣನ್ ಅವರು ನಿಷ್ಠಾವಂತ, ಅನುಭವಸಂಪನ್ನ ನಾಯಕರು. ರಾಷ್ಟ್ರದ ಸೇವೆಗೆ ಅವರು ಸಲ್ಲಿಸಿದ ಕೊಡುಗೆ ಮಹತ್ತರವಾಗಿದೆ” ಎಂದು ನಡ್ಡಾ ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಾ – “ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ನಾವು ಸಂಪೂರ್ಣ ಬೆಂಬಲಿಸುತ್ತೇವೆ. ಬೀದಿಗಳಿಂದ ಸಂಸತ್ತಿನವರೆಗೆ ಎನ್ಡಿಎ ಜೊತೆ ನಿಲ್ಲುತ್ತೇವೆ” ಎಂದು ಘೋಷಿಸಿದರು.
ಈ ಘೋಷಣೆಯೊಂದಿಗೆ ಉಪರಾಷ್ಟ್ರಪತಿ ಚುನಾವಣೆ ರಾಜಕೀಯವಾಗಿ ರೋಚಕ ತಿರುವು ಪಡೆದಿದೆ.
