ಹುಬ್ಬಳ್ಳಿ, ಮಾ.30: ಜಿಎಸ್ಟಿ ಬಾಕಿ ವಿಚಾರವನ್ನು ಸುಗಮಗೊಳಿಸುವ ನೆಪದಲ್ಲಿ ಪೆಟ್ರೋಲ್ ಬಂಕ್ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಹುಬ್ಬಳ್ಳಿಯ ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ವಿಭಾಗದ ಡೆಪ್ಯುಟಿ ಕಮಿಷನರ್ (ಡಿಸಿ) ಭರತ್ ಹೆಗಡೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ, ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭರತ್ ಹೆಗಡೆ ಅವರು, ವಿಶ್ವನಾಥ್ ನಾಯಕ್ ಎಂಬ ಪೆಟ್ರೋಲ್ ಬಂಕ್ ಮಾಲೀಕರಿಗೆ ಸುಮಾರು 60 ಲಕ್ಷ ರೂ. ಜಿಎಸ್ಟಿ ಬಾಕಿ ಇದೆ ಎಂದು ನೋಟಿಸ್ ನೀಡಿದ್ದರು ಎನ್ನಲಾಗಿದೆ. ಬಳಿಕ, ಆ ಪ್ರಕರಣವನ್ನು ಸರಾಗವಾಗಿ ಮುಗಿಸಿಕೊಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಪೆಟ್ರೋಲ್ ಬಂಕ್ ಮಾಲೀಕ ವಿಶ್ವನಾಥ್ ನಾಯಕ್ ಅವರು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದರು.
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಆರು ಅಧಿಕಾರಿಗಳ ವಿಶೇಷ ತಂಡ, ಸೋಮವಾರ ಮುಂಜಾನೆ ಸುಮಾರು 11:30ರ ವೇಳೆಗೆ ಹುಬ್ಬಳ್ಳಿಯ ನವನಗರದಲ್ಲಿರುವ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ದಾಳಿ ನಡೆಸಿ ಭರತ್ ಹೆಗಡೆಯನ್ನು ಬಲೆಗೆ ಬೀಳಿಸಿದೆ.
ಕಾರ್ಯಾಚರಣೆ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಮತ್ತೊಮ್ಮೆ ಕಠಿಣ ಸಂದೇಶ ರವಾನಿಸಿದೆ.
