ಹಾವೇರಿ, ಅಕ್ಟೋಬರ್ 1: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ವಿಜಯದಶಮಿಯಂದು ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕಾರಣಿಕ ನುಡಿದ ಭವಿಷ್ಯವಾಣಿ ಈಗಾಗಲೇ ಜನಮನ ಸೆಳೆದಿದೆ.
“ನಾಡು ಬಂಗಾರದ ಗಿಂಡೀಲೇ, ನಾಡು ಸಿರಿಯಾಯಿತಲೇ ಪರಾಕ್” ಎಂಬ ದೈವವಾಣಿಯಿಂದ ಈ ವರ್ಷದ ಭವಿಷ್ಯವನ್ನು ಜನತೆಗೆ ತಿಳಿಸಲಾಗಿದೆ. ಪ್ರಸಕ್ತ ವರ್ಷ ಮಳೆ ಸಮೃದ್ಧವಾಗಿ ಸುರಿದು, ಹಿಂಗಾರು ಬೆಳೆ ಉತ್ತಮವಾಗಿ ಬರಲಿದೆ ಎಂಬುದಾಗಿ ಕಾರಣಿಕ ನುಡಿಯ ಅರ್ಥೈಸಲಾಗಿದೆ.
ಇದನ್ನು ಓದಿ: ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಯ ಹಾದಿ : ಗಮನ ಸೆಳೆದ “ಸಮುದ್ರ ಹಸು” ಡುಗಾಂಗ್
ರಾಜಕೀಯ ಕ್ಷೇತ್ರದಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ಉತ್ತಮ ನಾಯಕರು ಹೊರಹೊಮ್ಮಲಿದ್ದಾರೆ ಎಂದು ಗೊರವಯ್ಯ ತಿಳಿಸಿದ ದೈವವಾಣಿಯ ವಿಶ್ಲೇಷಣೆ ಹೇಳುತ್ತದೆ.
ಈ ಭವಿಷ್ಯವಾಣಿ ನುಡಿದ ನಾಗಪ್ಪ ಉರ್ಮಿ ಗೊರವಯ್ಯ, ಒಂಬತ್ತು ದಿನ ಉಪವಾಸವ್ರತ ಆಚರಿಸಿ 18 ಅಡಿ ಎತ್ತರದ ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ. ದೇವರಗುಡ್ಡದ ಗೊರವಯ್ಯ ಕಾರಣಿಕವನ್ನು ವರ್ಷದ ಭವಿಷ್ಯವಾಣಿಯಾಗಿ ಪರಿಗಣಿಸುವ ಸಂಪ್ರದಾಯವಿದೆ.
