
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿಪುಸ್ತಕದ ಪರಿಷ್ಕೃತ ಆವೃತ್ತ)
ಹ್ಯಾಂಡ್ಸ್ ಅಪ್
ನಾನಿನ್ನೂ ಹೈಸ್ಕೂಲಿನಲ್ಲಿದ್ದ ದಿನಗಳು. ಹ್ಯಾಂಡ್ ಪೋಸ್ಟ್ ಬಳಿಯ ನೀಲಗಿರಿ ತೋಪಿನ ಹತ್ತಿರದ ಕ್ರಿಕೆಟ್ ಮೈದಾನದಲ್ಲಿ ಮ್ಯಾಚ್ ಮುಗಿಸಿಕೊಂಡು (ಸೋತು) ವಾಪಾಸ್ ಮೂಡಿಗೆರೆ ಕಡೆಗೆ ಹೊರಟಿದ್ದೇವು. ಸ್ಕೂಟರೊಂದು ರ್ರೆಂದು ನಮ್ಮನ್ನು ದಾಟಿಕೊಂಡು ಮುಂದೆ ಹೋಯಿತು. ಅದರ ಹಿಂದೆಯೇ ಮುರ್ನಾಲ್ಕು ಬೈಕ್ಗಳು ಸ್ಕೂಟರನ್ನು ಬೆರೆಸಾಡಿಕೊಂಡು ಹೋಗುವಂತೆ ಹೋದವು. ರಸ್ತೆಯು ನೇರವಾಗಿ ಇದ್ದುದರಿಂದ ನಮಗೆ ಬಹಳ ದೂರದವರೆಗೂ ಕಾಣುತಿತ್ತು. ರಸ್ತೆಯ ಆ ತುದಿಯ ತಿರುವಿನಲ್ಲಿ ಒಂದು ಬೈಕ್ ಸ್ಕೂಟರನ್ನು ಹಿಂದೆ ಹಾಕಿ ನಿಂತದ್ದು ಕಾಣಿಸಿತು. ಹಿಂದೆ ಬರುತ್ತಿದ್ದ ಬೈಕ್ಗಳೂ ಸ್ಕೂಟರನ್ನು ಸುತ್ತುವರೆದು ನಿಂತವು. ಸಿನೆಮಾದಲ್ಲಿ ಹೀರೊನನ್ನು ಛೇಸ್ ಮಾಡಿದ ಖೇಡಿಗಳು ಸುತ್ತುವರೆಯುವಂತೆ ಸ್ಕೂಟರನ್ನು ಮುತ್ತಿಕೊಂಡರು. ಸ್ಕೂಟರ್ಸವಾರ ಮತ್ತು ಬೈಕ್ಸವಾರರ ನಡುವೆ ಏನೋ ವಾದವಿವಾದ ನಡೆಯುತಿದ್ದುದು ದೂರದಲ್ಲಿ ನಡೆಯುತ್ತಾ ಬರುತ್ತಿದ್ದ ನಮಗೆ ಕಾಣಿಸಿತು. ಸಿನೆಮಾದಂತೆ ಇಲ್ಲೂ ಒಂದು ಫೈಟಿಂಗ್ ನಡೆಯುತ್ತದೆ, ನೋಡೋಣ ಯಾರು ಯಾರಿಗೆ ತಪರಾಕಿಸುತ್ತಾರೆ ಎಂದು ಕ್ರಿಕೆಟ್ ಬ್ಯಾಟ್ಗಳೊಂದಿಗೆ ಘಟನಾಸ್ಥಳಕ್ಕೆ ಓಡುತ್ತಾ ಬಂದೆವು. ಬೈಕ್ನವ್ರೇನೂ ರೌಡಿಗಳಂತೆ ಕಾಣಲಿಲ್ಲ. ಆದರೆ ನಮ್ಮ ಸ್ಕೂಟರ್ ಹೀರೋನೇ ಕೋಪದಿಂದ ಗುಡುಗಾಡುತ್ತಿದ್ದರು. ಸುತ್ತಲೂ ನಿಂತಿದ್ದವರು ತಪ್ಪಿತಸ್ತರಂತೆ ತಲೆ ತಗ್ಗಿಸಿ ನಿಂತಿದ್ದರು. ನೋಡನೋಡುತ್ತಿದ್ದಂತೆ ಸ್ಕೂಟರ್ ಸವಾರರು ಅಲ್ಲೇ ರಸ್ತೆ ಬದಿ ಪೇರಿಸಿಟ್ಟಿದ್ದ ಜಲ್ಲಿರಾಶಿಯ ಮೇಲೇರಿ ಎರಡೂ ಕೈಗಳನ್ನು ಮೇಲೆತ್ತಿ “ನೋಡ್ಕಳಿ, ಸರಿಯಾಗಿ ನೋಡ್ಕಳಿ. ನಾನು ಹೇಗಿದ್ದೀನಂತ. ಹೀಗೆ ರಸ್ತೇಲಿ ಬೆರೆಸಾಡಿಕೊಂಡು ಬಂದರೆ ಎಲ್ಲಾದ್ರೂ ಆ್ಯಕ್ಸಿಡೆಂಟ್ ಆದರೆ ಏನ್ರಯ್ಯಾ ಗತಿ?” ಎಂದು ಗದರಿಕೆಯ ದನಿಯಿಂದ ಹೇಳುತ್ತಿದ್ದರು. ಎರಡು ನಿಮಿಷದ ನಂತರ ಶಾಂತರಾಗಿ ಬೈಕ್ನವರೊಡನೆ ಕುಶಲೋಪರಿ ಮಾತನಾಡಿ ಮೂಡಿಗೆರೆ ಕಡೆಗೆ ಮಾಯವಾದರು ಸ್ಕೂಟರ್ ಸವಾರ ತೇಜಸ್ವಿ. ತಮ್ಮ ಹೀರೊನನ್ನು ಕಂಡು ಮಾತನಾಡಿಸಲು ಬಂದಿದ್ದ ಅಭಿಮಾನಿಗಳು ಬೈಕ್ಗಳನ್ನು ತಿರುಗಿಸಿಕೊಂಡು ಚಾರ್ಮಾಡಿ ಕಡೆಗೆ ಧಾವಿಸಿದರು. ಆದದ್ದಿಷ್ಟೇ ಹ್ಯಾಂಡ್ ಪೋಸ್ಟ್ ಬಳಿ ಬಂದಿದ್ದ ಬೆಂಗಳೂರಿನ ಬೈಕ್ ಸವಾರರು “ತೇಜಸ್ವಿಯವರು ಇಲ್ಲೆಲ್ಲೋ ಮನೆ ಮಾಡಿಕೊಂಡಿದ್ದಾರಂತಲ್ಲ, ಎಲ್ಲಿದ್ದಾರೆ?” ಎಂದು ಅಲ್ಲಿ ನಿಂತಿದ್ದ ಯಾರನ್ನೋ ಕೇಳಿದರಂತೆ. ಅದಕ್ಕೆ ಆ ವ್ಯಕ್ತಿ “ಈಗ ಇಲ್ಲೇ ಸ್ಕೂರ್ರಲ್ಲಿ ಮೂಡಿಗೆರೆ ಕಡೆ ಹೋದರಲ್ಲ, ಅವರೇ ತೇಜಸ್ವಿ” ಅಂದರಂತೆ ಅಷ್ಟೆ.
ತೇಜಸ್ವಿಯವರ ಸಾಹಿತ್ಯ ಮತ್ತು ಚಿಂತನೆಗಳು ಎಲ್ಲೂ ಬಂಡಾಯವೆಂಬ ಹಣೆಪಟ್ಟಿ ಹೊಂದಿಲ್ಲದಿದ್ದರೂ, ಅವರ ಬರಹಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು, ರಾಜಕೀಯ ಕುಯುಕ್ತಿಗಳು, ಪುರೋಹಿತಶಾಹಿ ಲೆಕ್ಕ್ಕಾಚಾರಗಳು, ಸಾಮಾಜಿಕ ಕಂದಾಚಾರಗಳು, ಪರಂಪರಾಗತ ಮೌಢ್ಯಗಳ ಕುರಿತಾದ ಅಘೋಷಿತ ಧಿಕ್ಕಾರವನ್ನು ಪ್ರತಿ ಹಂತದಲ್ಲೂ ಕಾಣುತ್ತೇವೆ. ಮಾನವನ ಇರುವಿಕೆಯನ್ನು ಸೂಕ್ಷ್ಮ ವಾಗಿ ಅನುಭವಿಸುತ್ತಲೇ ಪರಿಸರ ಅವಸಾನದ ದುರಂತವನ್ನು ಎಚ್ಚರಿಸಿ ಹೇಳುತ್ತಾರೆ. ಜೈವಿಕ ಸಂಕೀರ್ಣತೆಯು ಸಮತೋಲನದಲ್ಲಿರುವಂತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಬೆರಳು ಮಾಡಿ ನಿರೂಪಿಸುತ್ತಾರೆ. ಈ ನಿರೂಪಣೆ ಸರಳ ಮತ್ತು ನೇರ ನಿಷ್ಠುರತೆಯಿಂದ ಕೂಡಿದ್ದು ಅನುಮಾನಕ್ಕೆ ಎಡೆ ಇಲ್ಲದೇ ನಮ್ಮೆಲ್ಲರನ್ನು ಹೊಣೆಗಾರರನ್ನಾಗಿ ಮಾಡುವುದು ಸಮರ್ಥನೀಯ ಮತ್ತು ಸಮಂಜಸವೇ ಆಗಿದೆ. ಆಲೋಚನೆಯ ಮಟ್ಟದಲ್ಲಿರುವ ಈ ಪರಿಕಲ್ಪನೆಗಳು ಕಾರ್ಯರೂಪಕ್ಕೆ ಬರುವಲ್ಲಿ ಇಛ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿರುವ ಬಗ್ಗೆ ವಿಷಾದವನ್ನು ವ್ಯಕ್ತಪಡಿಸುತ್ತಾ ಯುವಜನತೆ ಮತ್ತು ಮಕ್ಕಳಲ್ಲಿ ಭರವಸೆಯಿಡುತ್ತಾರೆ.
ದೇಶ ಬದಲಾಗುವುದು, ವ್ಯವಸ್ಥೆ ಹೊಸ ರೂಪ ಪಡೆಯುವುದೆಂದರೆ ವ್ಯಕ್ತಿಗಳ ವ್ಯಕ್ತಿತ್ವ ಬದಲಾಗುವುದು ಹಾಗೂ ಅದು ಸಕಾರಾತ್ಮಕವಾಗಿರುವುದು ಮತ್ತು ಜವಾಬ್ದಾರಿಯುತವಾಗಿರುವುದು ಎಂದು ಸ್ಪಷ್ಟೀಕರಿಸುತ್ತಾರೆ. “ನೈಜ ಪರಿಸರವನ್ನು ನಾಶ ಮಾಡಿದಾಗ ನಮ್ಮ ಕಿರಿಯ ಜನಾಂಗ ಅಮೂಲ್ಯವಾದುದ್ದನ್ನು ಕಳೆದುಕೊಂಡಿತಲ್ಲ ಎಂದು ಮನಸ್ಸು ಖಿನ್ನವಾಗುತ್ತದೆ. ನನ್ನ ಮನಸ್ಸಿನ ದುಗುಡವನ್ನು ನಿರ್ಜೀವ ಅಂಕಿಸಂಖ್ಯೆಗಳ ವಿಶ್ಲೇಷಣೆಯ ಮೂಲಕ ಹೇಳಿ ಹೇಗೆ ಪ್ರತಿಸ್ಪಂದನ ಉಂಟು ಮಾಡಲಿ?’’ಎಂದು ವ್ಯಾಕುಲಗೊಳ್ಳುತ್ತಾರೆ.
ಮೂಡಿಗೆರೆಯಲ್ಲಿ ಹಲವರಿಗೆ ತೇಜಸ್ವಿಯವರ ಬಳಿ ಮಾತನಾಡಬೇಕೆಂಬ ತವಕವಿದ್ದರೂ, ಎಲ್ಲಿ ಯಡವಟ್ಟು ಮಾತನಾಡಿ ಬೈಯಿಸಿಕೊಳ್ಳಬೇಕಾದೀತೆಂಬ ಆತಂಕವಿತ್ತು. ಆದರೆ ತೇಜಸ್ವಿ ಜನರೆಂದುಕೊಂಡಂತೆ ಎಂದೂ ಆತಂಕಕಾರಿಯಾಗಿರಲಿಲ್ಲ. ವಿಶಿಷ್ಠವಾದ ಪ್ರತಿಭೆ ಮತ್ತು ಓದುಗ ಸಮೂಹದಿಂದಲೇ ಈ ಮಟ್ಟಿಗಿನ ಗುರುತರ ಸಾಹಿತಿಯಾಗಿ ಹೊರಹೊಮ್ಮಿದ ತೇಜಸ್ವಿ ತಾನು ನಡೆದು ಬಂದ ಹಾದಿಯ ಬಗ್ಗೆ, ತನ್ನ ಮಿತಿಯ ಬಗ್ಗೆ ವಾಸ್ತವವಾದೀ ಸೆನ್ಸಿಬಿಲಿಟಿಯನ್ನು ಉಳಿಸಿಕೊಂಡೇ ಸಹಜವಾದ ಗೌರವಕ್ಕೆ ಪಾತ್ರರಾಗಿದ್ದಾರೆ. ಶ್ರಮಪಡುವ ಪ್ರತಿಭಾವಂತ ಕಿರಿಯರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ, ಅವರ ಮುನ್ನೆಡೆಯನ್ನು ಕಂಡು ಹಿಗ್ಗುವ, ಹೆಮ್ಮೆಪಡುವ ಮೂಲಕ ನಾಡಿನಾದ್ಯಂತ ಯುವ ತಂಡವನ್ನೇ ಹೆಚ್ಚಿನದೇನಕ್ಕೋ ಸಿದ್ಧಪಡಿಸಿದ್ದರು. ಸಾಹಿತ್ಯಲೋಕದಲ್ಲಿ ಸಹಜವೇನೋ ಎಂಬಂತೆ ಅಲ್ಲಲ್ಲಿ ಕಾಣಸಿಗುವ ಅಸೂಯೆ, ಮತ್ಸರ, ಚಾಡಿಕೋರತನ, ಕಾಲೆಳೆಯುವ ಧೂರ್ತತನದಿಂದ ಸಾಕಷ್ಟು ದೂರವುಳಿಯುವ ಸಲುವಾಗಿಯೇ ನಾಜೂಕಿನ ಅಕ್ಯಾಡೆಮಿಕ್ ವಾತಾವರಣದಿಂದ ವಿಮುಖರಾಗಿದ್ದರು. ತೀರಾ ಸಾಮಾನ್ಯರನ್ನೂ ಪ್ರೀತಿಯಿಂದಲೇ, ವಿಶ್ವಾಸಪೂರ್ವಕವಾಗಿ ಮಾತನಾಡಿಸುತ್ತಿದ್ದರು. ಯಾರೋ ಅಸಂಬದ್ಧ ಮಾತನಾಡಲು ಹೋಗಿ ಉಗಿಸಿಕೊಂಡವರು ಮುಳುಗುತ್ತಿರುವ ನರಿ ಲೋಕವೇ ಮುಳುಗುತ್ತಿದೆ ಎಂಬಂತೆ ಅವರು ಹಾಗಂತೆ, ಹೀಗಂತೆ ಎಂದು ನಾನಾ ಕಾರಣಗಳಿಂದ ಸುತ್ತ ಬೇಲಿ ಹಾಕಿಟ್ಟಿದ್ದರು ಅಷ್ಟೇ.
-ಮುಂದುವರೆಯುವುದು…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946