ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ರನ್ನಿಂಗ್ ಕಾಮೆಂಟರಿ
ಮೂಡಿಗೆರೆಯಲ್ಲಿ ನಮ್ಮ ನೇಚರ್ ಕ್ಲಬ್ನಿಂದ ಆ್ಯಂಟಿಕ್ ಎಕ್ಸ್ಪೋ (ಹಳೇ ಕಾಲದ ಹಾಗೂ ಜಾನಪದ ವಸ್ತುಗಳ ಪ್ರದರ್ಶನ) ವ್ಯವಸ್ಥೆ ಮಾಡಿದ್ದೆವು. ಅನೇಕ ಸಂಗ್ರಾಹಕರು ತಮ್ಮಲ್ಲಿದ್ದ ವಿವಿಧ ಮಾದರಿಯ ಪುರಾತನ ವಸ್ತುಗಳನ್ನು ಪ್ರದರ್ಶಿಸಿದ್ದರು. ನೂರ ಅರವತ್ತು ಮಕ್ಕಳು ಮಲಗಿದ್ದ ನೂರು ವರ್ಷ ಹಳೆಯದಾದ ಬೆತ್ತದ ತೊಟ್ಟಿಲಿಂದ ಹಿಡಿದು ಪಲ್ಲಕ್ಕಿ ರೂಪದ ಶವ ಸಾಗಿಸುವ ಪುರಾತನ ತೂಗುಮಂಚದವರೆಗೆ ಪ್ರದರ್ಶಿಸಲ್ಪಟ್ಟವು. ತೇಜಸ್ವಿಯವರಿಗೆ ಪುರುಸೊತ್ತಾದಾಗ ಬಂದು ಭೇಟಿ ನೀಡಲು ಕೇಳಿಕೊಂಡಿದ್ದೆ.
ಈ ಪ್ರದರ್ಶನದಲ್ಲಿ ಕೆಲ ಉತ್ಸಾಹಿಗಳು ಹಳೇಕಾಲದ ನಾಣ್ಯಗಳು, ಕೆಲ ಅಪರೂಪದ ಕೌತುಕಮಯ ವಸ್ತುಗಳನ್ನು ಪ್ರದರ್ಶಿಸಿದ್ದರು. ಇವೆಲ್ಲದರ ನಡುವೆ ಹೈಸ್ಕೂಲು ವಿದ್ಯಾರ್ಥಿಯೊಬ್ಬ ಕನ್ನಡದ ಮುಖ್ಯ ಸಾಹಿತಿಗಳ ಭಾವಚಿತ್ರಗಳನ್ನು ಪ್ರದರ್ಶಿಸುವೆನೆಂದು ಕೇಳಿಕೊಂಡ. ಅವನ ಉತ್ಸಾಹ ಕಂಡು ಅದಕ್ಕೂ ಅವಕಾಶ ನೀಡಿದೆವು.
ಹಿಂದೆ ಡಬ್ಬದಲ್ಲಿ ಚಿತ್ರ ತೋರಿಸುತ್ತಾ, ಮಕ್ಕಳಿಗೆ ಪ್ರಪಂಚ ದರ್ಶನ ಮಾಢಿಸುತ್ತಿದ್ದ ಜಾತ್ರೆ ಜಾಫರನ ರೀತಿಯಲ್ಲಿ ನಿರರ್ಗಳವಾಗಿ “ಇವರು ಜಯಚಾಮರಾಜೇಂದ್ರ ಒಡೆಯರ್, ಇಲ್ಲಿ ನಿಂತಿರುವವರು ಕೆಂಪೇಗೌಡ, ಈ ಗ್ರೂಪ್ ಫೋಟೋದಲ್ಲಿ ಇರುವವರು ಮಾಸ್ತಿ, ವಿ.ಸಿ., ಡಿ.ವಿ.ಜಿ., ಕುವೆಂಪು, ಈ ಚಿತ್ರದಲ್ಲಿರುವವರು ಪುಟ್ಟಣ್ಣ ಕಣಗಾಲ್, ಡಾ. ರಾಜ್ಕುಮಾರ್………………..” ಹೀಗೇ ನಿರಂತರವಾಗಿ ಹೇಳುತ್ತಿದ್ದ. ಅವನ ಮಾತಿನ ಓಘಕ್ಕೆ, ಏರಿಳಿತಕ್ಕೆ , ದಣಿವರಿಯದ ಹುಮ್ಮಸ್ಸಿಗೆ ನಾವೆಲ್ಲರೂ ಈಗಾಗಲೇ ಮನಸೋತಿದ್ದೆವು.

ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ತೇಜಸ್ವಿ ಬಂದರು. ಸುಮಾರು ನೂರು ಮೀಟರ್ ಉದ್ದಕ್ಕೂ ಇಟ್ಟಿದ್ದ ಜಾನಪದ ಪರಿಕರಗಳನ್ನು ಆಸಕ್ತಿಯಿಂದ ಗಮನಿಸಿ ಪ್ರದರ್ಶಕರಿಂದ ವಿವರಣೆಗಳನ್ನು ಕೇಳುತ್ತಾ ಬಂದರು. ಜೀನ್ಸ್ ಪ್ಯಾಂಟಿನ ಎರಡೂ ಜೇಬಿಗೆ ಕೈ ಇಳಿಬಿಟ್ಟಿಕೊಂಡು ತನ್ಮಯತೆಯಿಂದ ನೋಡುತ್ತಾ ಬಂದ ತೇಜಸ್ವಿಯವರನ್ನು ಕಂಡ ನಮ್ಮ ಹೈಸ್ಕೂಲು ಹುಡುಗ ತನ್ನ ಕಾಮೆಂಟರಿ ರಿಫ್ರೆಶ್ ಮಾಡಿಕೊಂಡ. ಅವನ ಬಳಿ ಬಂದ ತೇಜಸ್ವಿಯವರು ಆ ಹುಡುಗನ ಸಂಗ್ರಹದಲ್ಲಿದ್ದ ಕೆಲ ವಿಶೇಷಗಳನ್ನು ಗಮನಿಸುತ್ತಿದ್ದರು.
ಇವರು ಬಂದೊಡನೇ ಯಾರೋ ಗಡ್ಡ ಬಿಟ್ಟಿರುವ ದೊಡ್ಡ ಮನುಷ್ಯರು ಬಂದಿದ್ದಾರೆ, ನಾನು ಸಂಗ್ರಹ ಮಾಡಿದ್ದಕ್ಕೂ ಸಾರ್ಥಕವಾಯಿತು ಎಂದು ಹಿರಿ ಹಿರಿ ಹಿಗ್ಗಿದವನೇ ಪ್ಲೇಟನ್ನು ತಿರುಗಿಸಿ ಹಾಕಿದ. “ ಇಲ್ಲಿ ನಿಂತಿರುವವರು, ಇಲ್ಲಿ ಬರೆಯುತ್ತಿರುವವರು, ಇಲ್ಲಿರುವ ಗ್ರೂಫ್ ಫೋಟೋ……………………” ಹೀಗೇ ತನ್ನ ವಾಗ್ಝರಿಯಿಂದ ಯಂಗ್ಟನ ಪುಂಗಿಯಂತೆ ಊದುತ್ತಿದ್ದರೆ ನಾವೆಲ್ಲರೂ ನೋಡ ನೋಡುತ್ತಿದ್ದಂತೆ ತೇಜಸ್ವಿ ಹಾವಿನಂತೆ ತಲೆದೂಗಲಾರಂಭಿಸಿದರು. ಆ ಹುಡುಗನ ಮಾತಿನಲ್ಲಿರುವ ಉತ್ಸಾಹ, ಏರಿಳಿತ ಅವರನ್ನು ಮಂತ್ರ ಮುಗ್ಧರನ್ನಾಗಿಸಿತು.
ಹುಡುಗ ಮುಂದುವರಿಸುತ್ತಲೇ ಇದ್ದ್ದ. “ಇದು ನೋಡಿ ಕುವೆಂಪುರವರ ಮಗ ಪೂರ್ಣಚಂದ್ರ ತೇಜಸ್ವಿ, ಇವರು ಪ್ರಸಿದ್ಧ ಸಾಹಿತಿಗಳು, ಹಕ್ಕಿಗಳ ಫೋಟೋವನ್ನು ತೆಗೀತಾರೆ. ಮೂಡಿಗೆರೆ ಸಮೀಪದಲ್ಲೇ ವಾಸ ಇದ್ದಾರೆ. ಇವರ ಮುಖ್ಯ ಕಾದಂಬರಿಗಳು ಯಾವುವೆಂದರೆ ಕರ್ವಾಲೋ, ಚಿದಂಬರ ರಹಸ್ಯ………………..” ನೀವು ನಂಬುತ್ತೀರೋ ಬಿಡುತ್ತಿರೋ ತೇಜಸ್ವಿ ಜೇಬಿನಿಂದ ಕೈ ತೆಗೆಯದೇ ಫೋಟೋಗಳನ್ನು ತದೇಕಚಿತ್ತರಾಗಿ ನೋಡುತ್ತಲೇ ಹುಡುಗನ ವಾಗ್ಧಾರೆಗೆ ತಲೆದೂಗುತ್ತಿದ್ದರು. ಹುಡುಗನ ಮಾತು ನಿಂತ ಮೇಲೆ “ವೆರ್ರೀಗುಡ್” ಎಂದವರೇ ಮುಂದಿನ ಸಂಗ್ರಹದ ಕಡೆ ನಡೆದರು. ಸ್ಥಳೀಯರಿಗೆ ಯಾರಿಗೂ ತನ್ನ ಇರುವಿಕೆಯ ಗ್ರಹಿಕೆಯೂ ಬಾರದಂತೆ ಮೂಡಿಗೆರೆಯಲ್ಲಿ ನೆಲೆಸಿ ಸಾಧಿಸಿದ ತೇಜಸ್ವಿಯವರ ಬದುಕಿನ ರೀತಿಗೆ ಇದೊಂದು ಉದಾಹರಣೆ.
ಹುಡುಗನ ಅಮಾಯಕತೆಯೋ, ತೇಜಸ್ವಿಯವರ ನಿರ್ಲಿಪ್ತತೆಯೋ, ಅಂತೂ ಅಸಾಧಾರಣ ದೃಶ್ಯಕ್ಕೆ ಸಾಕ್ಷಿಯಾದ ನಾವುಗಳು ಈ ಸಂದರ್ಭವನ್ನು ಈಗಲೂ ನೆನಪಿಸಿಕೊಳ್ಳುತ್ತೇವೆ.
ತೇಜಸ್ವಿಯವರನ್ನು ಕಂಡು ಹಲವು ಬಾರಿ ಗೊಂದಲಕ್ಕೊಳಗಾದವರು “ನೀವು ಕುವೆಂಪೂನಾ?’’ಎಂದು ಕೇಳಿದ್ದೂ ಇದೆ. “ಇಲ್ಲಾರೀ, ನಾನು ತೇಜಸ್ವಿ ಅಂತ” ಎಂದು ಮೀಸೆ ಮರೆಯಲ್ಲಿ ನಕ್ಕಿದ್ದನ್ನು ತೇಜಸ್ವಿ ಹೇಳಿದ್ದಾರೆ.
- ಮುಂದುವರೆಯುವುದು
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

