ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಅಡ್ಕೆ ಪುಡಿ
“ಕೃಷ್ಣೇಗೌಡರ ಆನೆ”ಯಲ್ಲಿ ಪ್ರತ್ಯಕ್ಷ ಆಗುವ ಟೆಲಿಫೋನ್ ಲೈನ್ಮ್ಯಾನ್, ಫಾರೆಸ್ಟ್ ಗಾರ್ಡ್, ಕೆಇಬಿ ನೌಕರರು ದಿನನಿತ್ಯ ಅತ್ಯಂತ ಸಹಜವಾಗಿ ಎದುರಾಗುತ್ತಿದ್ದರು. ತೇಜಸ್ವಿ ಎದುರಿಗೆ ಕಂಡ ಕೂಡಲೇ ಅವರಲ್ಲಿ ಅನೇಕರಿಗೆ ಬೆನ್ನ ಹುರಿಯಲ್ಲಿ ಸಣ್ಣದೊಂದು ಚಳುಕು ಹುಟ್ಟಿ ತೇಜಸ್ವಿ ಮರೆಯಾಗುವವರೆಗೂ ಸಂಚಾರ ಮಾಡುತ್ತಲೇ ಇರುತ್ತಿತ್ತು.
ಹೀಗೇ ಒಂದು ದಿನ ತೇಜಸ್ವಿ ಮನೆಗೆ ಹೋಗುವವನು ಕಾರಿಳಿದು ಗೇಟ್ ತೆರೆಯಲು ಹೊರಟೆ. ಈ ಗೇಟ್ನದೊಂದು ವಿಶೇಷ. ಹಳದಿ ಬಣ್ಣದ ಈ ಗೇಟ್ ತಾನಾಗಿಯೇ ಮುಚ್ಚಿಕೊಳ್ಳುತ್ತಿತ್ತು. ಗುರುತ್ವದ ಸರಳ ತಂತ್ರವನ್ನು ಗೇಟಿನ ಕಂಬ, ಗೇಟಿನ ತೂಕಕ್ಕೆ ಅನುಗುಣವಾಗಿ ಅಳವಡಿಸಿದ್ದರಿಂದ ಗೇಟನ್ನು ಬಿಟ್ಟರೆ ಅದಾಗಿಯೇ ಕೂಡಿಕೊಳ್ಳುತ್ತಿತ್ತು. ಎರಡೂ ಕಡೆಯ ಗೇಟ್ಗಳನ್ನು ಒಟ್ಟಿಗೆ ಬಂಧಿಸಲು ಒಂದು ಕಬ್ಬಿಣದ ಚೈನ್. ಯಾವುದಾದರೂ ವಾಹನವನ್ನು ಒಳ ತರಲು ಇನ್ನೊಬ್ಬರ ಸಹಾಯ ಅಗತ್ಯವಾಗಿತ್ತು. ಗೇಟನ್ನು ತೆರೆದು ಅದಾಗಿಯೇ ಮುಚ್ಚಿಕೊಳ್ಳದಂತೆ ಯಾರಾದರೂ ಹಿಡಿದು ನಿಲ್ಲಬೇಕಿತ್ತು. ಒಬ್ಬರೇ ಇದ್ದಲ್ಲಿ ಗೇಟನ್ನು ಪೂರ್ಣ ತೆಗೆದು ಕೊನೆಯಲ್ಲಿರುವ ಕಲ್ಲಿಗೆ ತಾಗಿಸಿ ಜೆಲ್ಲಿ ಕಲ್ಲನ್ನು ಒತ್ತುಕೊಟ್ಟು ವಾಹನ ದಾಟಿಸಿ ಒತ್ತು ತೆಗೆದ ಕೂಡಲೇ ಸ್ವಸ್ಥಾನಕ್ಕೆ ಮರಳುವ ಗೇಟನ್ನು ಸರಪಳಿ ಹಾಕಿ ಭದ್ರಪಡಿಸಬೇಕು.

ನಾನು ಇಳಿದು ಜೆಲ್ಲಿ ಜಕ್ಕೆಯನ್ನು ಒತ್ತುಕೊಡುತ್ತಿದಾಗ ಟರ್ರ್ ಟರ್ರೂ ಎಂದು ಟಿವಿಎಸ್ ಒಂದು ಮೇಲೇರುತ್ತಿತ್ತು. ನನಗೆ ಪರಿಚಿತರಾದ ಟೆಲಿಫೋನ್ ಲೈನ್ಮನ್
“ ಏನ್ ಸಾರ್ ಸಮಾಚಾರ?” ಎಂದರು.
“ಹೀಗೇ ಮಾತಾಡಿಸಿಕೊಂಡು ಹೋಗೋಣ ಎಂದು ಬಂದೆ” ಎಂದೆ.
“ಫೋನ್ ಮಾಡಿದ್ರೆ ಆಚೆಯಿಂದ ಉತ್ತರಾನೆ ಬರೋಲ್ಲ. ರಿಸೀವ್ ಮಾಡ್ತಾರೆ, ದನಿ ಕೇಳಿಸಲ್ಲ ನಾವು ಕೂಗಿ ಕೂಗಿ ಸಾಕಾಗುತ್ತೆ. ರಿಪೇರಿ ಮಾಡಕ್ಕೆ ಹೋಗಿದ್ರಾ? ಸರಿಯಾಯ್ತಾ ಹೇಗೆ?” ಎಂದೆ.
“ಸರಿಯಾಯ್ತು ಸಾರ್. ನಮ್ಮ ಡಿಪಾರ್ಟ್ಮೆಂಟ್ಗೇ ಹೊಸ ತರ ಕಂಪ್ಲೆಂಟ್ ಇದು. ನನ್ ಸರ್ವಿಸ್ನಲ್ಲೇ ಇದು ಮೊದಲನೆಯದು ನೋಡಿ”.
“ ಅದೆಂತದ್ರೀ? ವನ್ವೇ ಇರಬಹುದು. ಅದನ್ನೇ ದೊಡ್ಡದು ಮಾಡಿ ಹೇಳ್ತೀರಲ್ಲಾ” ಎಂದೆ. “ಸಾರ್ ತೇಜಸ್ವಿಯವರು ಎಲೆ ಅಡಿಕೆ ಹಾಕ್ತಾರಲ್ಲ ಗೊತ್ತಾ?” ಎಂದರು.
“ಗೊತ್ತು, ಅದು ಎಲೆಅಡಿಕೆ ಅಲ್ಲ, ಬರೀ ಅಡಿಕೆ ಪುಡಿ. ಆಗಾಗ ಬಾಯಿ ಆಡಿಸುತ್ತಾ ಇರ್ತಾರೆ”
“ಫೋನ್ ರಿಸೀವರ್ನ ಮೌತ್ ಪೀಸ್ನ ಒಳಗೆ ಎಲೆ ಅಡಿಕೆಯ ಕಸ ತುಂಬಿ ಅವರು ಆಡಿದ ಮಾತು ಆಚೆಕಡೆಯವರಿಗೆ ಕೇಳಿಸ್ತಾನೆ ಇರ್ಲಿಲ್ಲ. ಎಲೆಅಡಿಕೆ ಹಾಕಿಕೊಂಡೇ ಮಾತನಾಡಿ ಸಣ್ಣಸಣ್ಣ ಚೂರುಗಳು ಒಳ ಸೇರಿ ಎಲ್ಲಾ ಬ್ಲಾಕ್. ಬಿಚ್ಚಿ ರಿಪೇರಿ ಮಾಡಿದೆ ನೋಡಿ. ಅರ್ಧ ಚಮಚ ಎಲೆ ಅಡಿಕೆ ಪುಡಿ ಸಿಕ್ಕಿತು” ಎಂದರು.
ಇದೊಂತರ ಹೊಸ ಕೇಸೇ ಅನಿಸಿತು. ನನಗ್ಯಾಕೋ ಅನುಮಾನ, ರಂಜನೆಗಾಗಿ ಕಥೆ ಹೆಣೆದು ಹೇಳಿದನೇನೋ ಈ ಬಡ್ಡಿಮಗ ಎಂದುಕೊಂಡೆ.
ನಾವು ಫೋಟೋಗ್ರಫಿಗಾಗಿ ಸುತ್ತಾಡುವಾಗಲೂ ಸ್ಕೂಟರ್ನ ಕುತ್ತಿಗೆಗೆ ಜೋಳಿಗೆ ಬ್ಯಾಗೊಂದನ್ನು ಇಳಿಬಿಟ್ಟುಕೊಂಡಿರುತ್ತಿದ್ದರು. ಆಗಾಗ ಅದರೊಳಗಿನಿಂದ ಡಬ್ಬಿಯೊಂದನ್ನು ಹೊರತೆಗೆದು ಅಡಿಕೆ ಪುಡಿಯನ್ನು ಬಾಯಿಗೆಸೆದುಕೊಂಡು `ತಿಂತೀಯೇನಯ್ಯಾ’ ಎಂದು ನನಗೆ ನೀಡುತ್ತಿದ್ದರು. ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಆ ಡಬ್ಬಿ ಇಸ್ಕೊಂಡು ಅದರೊಳಗಿನ ಸಕ್ಕರೆಯ ಪೀಸು, ಕುಂಬಳದ ಬೀಜದ ತಿರುಳನ್ನು ಹೆರಕಿ ತಿಂದಿದ್ದು.
ಫೋಟೋಗ್ರಪಿಯನ್ನು ಈಗಂತೂ ಮಾಡದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪ್ರಚುರಗೊಂಡಿದೆ. ಮೊಬೈಲ್ ಫೋನ್ಗಳಲ್ಲಿ ಕ್ಯಾಮರ ಬಂದ ಮೇಲೆ ಆಲ್ಮೋಸ್ಟ್ ಎಲ್ಲರೂ ಫೋಟೋ ತೆಗೆಯಲು ಪ್ರಯತ್ನಿಸುತ್ತಾರೆ. ತೇಜಸ್ವಿಯವರ ಫೋಟೋಗಳಲ್ಲಿ ಅದರಲ್ಲೂ ಮುಖ್ಯವಾಗಿ ಹಕ್ಕಿಗಳ ಚಿತ್ರಗಳಲ್ಲಿ ಹಕ್ಕಿಯ ಕಣ್ಣಿನ ಭಾವನೆಗಳಿಗೆ ಪ್ರಾಮುಖ್ಯತೆ ಇರುತ್ತಿತ್ತು. ಹಕ್ಕಿಯ ಟಿಪಿಕಲ್ ಕ್ಯಾರೆಕ್ಟರ್ ಅದರ ಕಣ್ಣಿನಲ್ಲಿ ಒಡಮೂಡುತ್ತದೆ ಎಂದು ಹೇಳುತ್ತಿದ್ದರು. ಕಣ್ಣಿನ ಚಿತ್ರಣ ಎಂಥವರನ್ನೂ ಸಮ್ಮೋಹನಗೊಳಿಸಿಬಿಡುತ್ತದೆ. ಹಾಗಾಗಿ ಕಣ್ಣು ಎಕ್ಸ್ಪೋಸ್ ಆಗದ ಚಿತ್ರಗಳನ್ನು ಅವರೆಂದೂ ಸೆರೆಹಿಡಿದು ಬಿಡುಗಡೆ ಮಾಡಿಲ್ಲ. ಪಕ್ಷಿಯ ಜೀವನಕ್ರಮ, ಚಲನವಲನ, ಆಸಕ್ತಿ, ಪ್ರತಿಕ್ರಿಯೆ, ಪರಿಸರದೊಂದಿಗಿನ ಹೊಂದಾಣಿಕೆಗೆ ಕೊಂಚವೂ ಭಂಗಬಾರದಂತೆ ಚಿತ್ರ ತೆಗೆಯುತ್ತಿದ್ದುದು ತೇಜಸ್ವಿಯಂಥಾ ತೇಜಸ್ವಿಗೆ ಮಾತ್ರ ಸಾಧ್ಯ.
ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

