ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಹಕ್ಕಿಯ ಕ್ಲಿಕ್
“ನಿನ್ನ ಬಳಿ ಗ್ರಾಮೀಣ ಬದುಕಿನ ಫೋಟೋ ಸಂಗ್ರಹ ಉಂಟೇನು ಮಾರಾಯ? ಎಲ್ಲಾ ತಗೋಂಡು ಬಾ ಒಂದು ಸಲ” ಎಂದರು. ನಾನು ಆ ವರೆವಿಗೆ ತೆಗೆದಿದ್ದ ಫೋಟೋಗಳನೆಲ್ಲಾ ಸೀಡಿಗೆ ಹಾಕಿಕೊಂಡು ತೆಗೆದುಕೊಂಡು ಹೋದೆ. ಮಹಡಿಯ ಮೇಲಿನ ಕೊಠಡಿಯೊಳಗೆ ಕುಳಿತು ಮಾಯಾಲೋಕ – ೧ರ ಕೆಲಸದಲ್ಲಿ ಮಗ್ನರಾಗಿದ್ದರು. ಕೊಠಡಿಯ ಸುತ್ತ ಗಾಜನ್ನು ಹೊಂದಿಸಿದ್ದ ಕಿಟಕಿಗಳು, ಹೊರ ಟೆರೇಸ್ಸಿಗೆ ಹೋಗಲು ಬಾಗಿಲು, ಕಿಟಕಿಗೆ ಪರದೆಗಳು, ಪರದೆಯ ನಡುವೆ ಒಂದು ಪ್ಲಾಸ್ಟಿಕ್ ಪೈಪ್ನ ತುಂಡು ಹೊಂದಿಸಿ ಮಾಡಿದ್ದ ಫೋಟೋಗ್ರಫಿ ಕಿಂಡಿ. ಟೆರೇಸ್ಸಿಗೆ ಚಾಚಿಕೊಂಡಿದ್ದ ಮರಗಳ ಕೊಂಬೆಗಳು, ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಹಣ್ಣುಗಳು, ಅವನ್ನು ತಿನ್ನಲು ಬರುತ್ತಿದ್ದ ಹಕ್ಕಿಗಳು, ಅವುಗಳಿಗೆ ಸ್ವಲ್ಪವೂ ಗಾಬರಿಯಾಗದಂತೆ ಫೋಟೋ ಕ್ಲಿಕ್ಕಿಸುವ ತೇಜಸ್ವಿ- ಹೀಗೆ ನಿರಂತರವಾಗಿ ನಡೆಯುತ್ತಿದ್ದ ಸಾಹಿತ್ಯ-ದೃಶ್ಯ ಕಾಯಕ.
`ಸಿ.ಡಿ. ಅಲ್ಲಿಡು, ಬಾ ಇಲ್ಲಿ, ಪ್ರಿಂಟ್ ತೆಗೆದಿರೋ ಹಕ್ಕಿ ಚಿತ್ರಗಳ ನೋಡು’ ಎಂದವರೇ ಡ್ರಾಯಿಂಗ್ ಶೀಟ್ ವಿಸ್ತಾರದ ಹತ್ತಾರು ಕಪ್ಪು-ಬಿಳುಪು ಹಕ್ಕಿ ಚಿತ್ರಗಳನ್ನು ತೋರಿಸಿದರು. `ನನ್ನ ಹಳೇ ಪೈಂಟಿAಗ್ ನೋಡಿದ್ದೀಯಾ’ ಎಂದವರೇ ತಮ್ಮ ಎಡ ಭಾಗದಲ್ಲಿದ್ದ ಕೊಠಡಿಯ ಬಾಗಿಲೆಡೆಗೆ ತೆರಳಿದರು. ಕೊಠಡಿಯ ಬಾಗಿಲನ್ನು ತೆರೆದರು. ಇಷ್ಟು ವರ್ಷದ ಸಾಹಿತ್ಯದ ಹಸ್ತಪ್ರತಿಗಳು, ಛಾಯಾಗ್ರಹಣ, ಪೈಟಿಂಗ್ಗಳ ಶಿಸ್ತುಬದ್ಧ ಸಂಗ್ರಹವೇ ತೆರೆದುಕೊಂಡಿತ್ತು. ಆ ಅಮೂಲ್ಯ ವಸ್ತುಗಳನ್ನು ಬಹಳ ಜೋಪಾನವಾಗಿ ಕಾಯ್ದಿಟ್ಟಿದ್ದರು. `ನನಗೆ ಧೂಳು ಅಲರ್ಜಿ ಮಾರಾಯ ಎಷ್ಟೇ ಕೇರ್ಫುಲ್ ಆಗಿದ್ದರೂ ಧೂಳಾಗಿ ಬಿಡುತ್ತೆ’ ಎಂದು ಕೆಲ ಕಲಾಕೃತಿಗಳನ್ನು ತೋರಿಸಿ, “ಬಾ ಇಲ್ಲಿ ಹಕ್ಕಿಗಳ ಫೋಟೋ ತೆಗೆಯೋ ಐಡಿಯಾ ತೋರಿಸ್ತೀನಿ’’ ಎಂದು ಹೊರಕ್ಕೆ ಕರೆತಂದು ಕಿಟಕಿಯ ಪರದೆಗೆ ಹೊಂದಿಸಿದ್ದ ಪ್ಲಾಸ್ಟಿಕ್ ಪೈಪ್ನೊಳಗೆ ಕ್ಯಾಮೆರಾದ ಲೆನ್ಸ್ ತೂರಿಸಿ ಕೆಲ ಸಮಯ ಕಾಯ್ದು ಕುಳಿತರು. ಯಾವ ಹಕ್ಕಿಗಳೂ ಬಂದಂತೆ ಕಾಣಲಿಲ್ಲ. “ಹಣ್ಣುಗಳಿಲ್ಲದ ಕಾಲದಲ್ಲಿ ಹೇಗೆ ಹಕ್ಕಿಗಳನ್ನು ಬರುವಂತೆ ಮಾಡ್ತೀರಿ?” ಎಂದೆ. “ದ್ರಾಕ್ಷಿ ತಂದು ಸಣ್ಣ ಸಣ್ಣ ಗೊಂಚಲಲ್ಲಿ ತೂಗಿ ಹಾಕ್ತೀನಿ. ಅಭ್ಯಾಸ ಆದ ಮೇಲೆ ದ್ರಾಕ್ಷಿಗೇ ಕಾಯ್ತಾ ಕೂತಿರ್ತವೆ ಕಣಯ್ಯಾ”.

“ನೀನು ನಿನ್ದ್ಯಾವುದೋ ಕ್ಯಾಮೆರ ಬದಲಾಯಿಸ್ತೀನಿ ಎಂದಿದ್ದೆ ಅಲ್ವಾ? ಯಾವುದಂತ ಡಿಸೈಡ್ ಮಾಡಿದೆ?” ಎಂದರು. ನನ್ನ ಹ್ಯಾಂಡ್ಬ್ಯಾಗ್ನಲ್ಲಿ ಕೆೆಟಲಾಗ್ ಒಂದನ್ನು ತೆರೆದು ತೋರಿಸಿದ್ದೆ. “ಹೋಗ್ ಹೋಗಾ ಇದು ಬೇಡ. ರಘು ಒಂದು ತಂದೀದ್ದಾನೆ, ಸೋನಿ ಕಂಪನೀದು. ಏನ್ ಟ್ರಿಮ್ ಆಗಿ ಬರುತ್ತೆ ಗೊತ್ತಾ? ಅದನ್ನೆ ತಗೋ. ನೀನ್ ಇನ್ನೂ ಕಲಿಯೋದು ಬಹಳಾ ಇದೆ. ಈ ಸ್ಪೆಸಿಫಿಕೇಷನ್ಗೆ ಈಗ್ಲೇ ಹೋಗ್ಬೇಡ. ಒಂದೇ ವಾರದಲ್ಲಿ ಹೊಸ ಮಾಡೆಲ್ ಔಟ್ ಡೇಟ್ ಆಗಿ ಬಿಡುತ್ತೆ. ರಘು ಕ್ಯಾಮೆರಾನ ಒಮ್ಮೆ ನೋಡು, ಆಮೇಲೆ ತಗೋ” ಎಂದರು. ಜನ್ನಾಪುರದ ರಾಘವೇಂದ್ರರ ಮನೆಗೆ ಹೋಗಿ ಅವರ ಕ್ಯಾಮೆರಾ ನೋಡಿದೆ. ತೆಳುವಾದ ಡಿಜಿಟಲ್ ಕ್ಯಾಮೆರ, ಆಡಿಯೋ ಕ್ಯಾಸೆಟ್ಗಿಂತಲೂ ಚಿಕ್ಕದು. ಒಂದೇ ವಾರದೊಳಗೆ ಅದೇ ಮಾದರಿಯ ಕ್ಯಾಮೆರ ತಗೊಂಡೆ. ಅದು ನೀಡಿರುವ ಸೇವೆ ಅನನ್ಯವಾದದ್ದು. ಯಾರಾದರೂ ನನ್ನ ಛಾಯಾಚಿತ್ರಗಳನ್ನು ನೋಡಿ, ಯಾವ ಕ್ಯಾಮೆರಾದಲ್ಲಿ ತೆಗೆದಿರಿ? ಎಂದರೆ ಜೇಬಿನಲ್ಲೇ ಇರುವ ಅದನ್ನು ಹೊರ ತೆಗೆದು ಇದರಲ್ಲೇ ತೆಗೆದದ್ದು, ತೇಜಸ್ವಿಯವರೇ ರೆಕಮೆಂಡ್ ಮಾಡಿದ್ದು ಎಂದು ಹೇಳುತ್ತೇನೆ.
-ಮುಂದುವರೆಯುವುದು
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

