ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಸರಕ್ನೆ ಸರೀತಲ್ಲ…!
ಚಾರ್ಮಾಡಿಯ ನಿರಭ್ರ ಪರಿಸರದಲ್ಲಿ ಫೋಟೋ ತೆಗೆಯುತ್ತಾ ಹೋದ ನಾವು ದಣಿವಾರಿಸಿಕೊಳ್ಳಲು ಉಜಿರೆಯಲ್ಲಿ ಐಸ್ಕ್ರೀಂ ತಿಂದದ್ದು ನನಗೆ ಈಗಲೂ ನೆನಪಿದೆ. ಕೆಲವರಿಗೆ ಶುಗರ್ಲೆಸ್ ಕಾಫಿಯಂತೆ ತೇಜಸ್ವಿಯವರಿಗೆ ನಟ್ಲೆಸ್ ಗಡ್ಬಡ್. ಪಾರ್ಲರಿನಲ್ಲಿ ಕುಳಿತಿದ್ದ ತೇಜಸ್ವಿಯವರನ್ನು ಪಕ್ಕದ ಟೇಬಲ್ಲಿನಲ್ಲಿದ್ದ ಕಾಲೇಜು ಹುಡುಗಿಯರ ದಂಡೊಂದು ಆದರಿಸಿದ್ದೇ ಆದರಿಸಿದ್ದು. ಬಂದ ದಾರಿಯಲ್ಲಿ ಹಿಂದಿರುಗದ ನಾವು, ಶಿರಾಡಿ ಹಾದಿಯಲ್ಲಿ ಬಂದದ್ದು ಒಂದು ವಿಶಿಷ್ಟ ಅನುಭವ. ನನ್ನ ಸ್ಕೂಟರಿನಲ್ಲೇ ತೆರಳಿದ್ದ ನಾವು ಸ್ವಲ್ಪ ದೂರ ನಾನು, ಸ್ವಲ್ಪ ದೂರ ತೇಜಸ್ವಿಯವರು ಓಡಿಸುತ್ತಿದ್ದೆವು. ಸುಬ್ರಹ್ಮಣ್ಯ- ಧರ್ಮಸ್ಥಳ ರಸ್ತೆಯಾದ್ದರಿಂದ ಅಲ್ಲಲ್ಲಿ ಪ್ರವಾಸಿಗರು ಎದುರಾಗುತ್ತಿದ್ದರು. ಕೆಲವರು ತೇಜಸ್ವಿಯವರನ್ನು ಗುರುತಿಸಿ ಸಂತಸ ಪಡುತ್ತಿದ್ದರು.
`ಈ ಬಿಸಿಲಿಗೆ ಆಯಾಸ ಆಗಿದೆ, ವಿಶ್ರಾಂತಿ ತೆಗೆದುಕೊಳ್ಳೋಣ’’ ಎಂದವರೆ ರಸ್ತೆ ಬದಿಯ ನೆಡುತೋಪಿನ ಮರದ ನೆರಳಿನಲ್ಲಿ ರಸ್ತೆ ಪಕ್ಕದಲ್ಲಿಯೇ ತರಗೆಲೆಗಳ ಮೇಲೆ ಮಲಗಿಯೇ ಬಿಡೋದೆ. ಛೇ, ಇಂತಹ ಮನುಷ್ಯ ಹೀಗೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೇಕಾಬಿಟ್ಟಿ ಮಲಗುವುದೇ ಎಂದು ನನಗೆ ಕೆಡುಕೆನಿಸಿತು. `ಸರ್ ಇದೇನು ಹೀಗೆ?’ ಎಂದುದಕ್ಕೆ “ನೀನೂ ಬೇಕಾದ್ರೆ ಮಲ್ಕೊಳ್ಳಯ್ಯ. ಇನ್ನೂ ಸುಮಾರ್ ದೂರ ಹೋಗ್ಲಿಕ್ಕಿದೆ, ನೋಡುವವರು ಏನೆಂದುಕೊಳ್ತಾರೋ ಅಂದ್ರೆ ಇಲ್ಲಿಯ ಸೆಖೆ, ಬಿಸಿಲಿಗೆ ಸತ್ತೋಗ್ಬೇಕಾಗುತ್ತೆ ಅಷ್ಟೇ” ಎಂದವರೇ ಅರ್ಧ ಗಂಟೆಗೂ ಮೀರಿ ಸಂತೃಪ್ತ ನಿದ್ದೆಯೊಂದನ್ನು ತೆಗೆದೆದ್ದರು. ಮುಂದೆ ದಾರಿಯಲ್ಲಿ ಕೆಂಪು ಹೊಳೆಯನ್ನು ವೀಕ್ಷಿಸಿ ಫೋಟೋ ತೆಗೆದೆವು.
ಅಲ್ಲಿನ ಜೀವಜಾಲದ ಬಗ್ಗೆ, ಜುಗಾರಿ ಕ್ರಾಸ್ನ ಬಗ್ಗೆ, ಕೆಂಪು ಕಲ್ಲಿನ ಕುರಿತು ವಿವರವಾಗಿ ಮಾತನಾಡಿದೆವು. ರಸ್ತೆಯುದ್ದಕ್ಕೂ ಹರಿಯುವ ಹೊಳೆಯಲ್ಲಿ ವಾಹನಗಳನ್ನು ತೊಳೆಯುವ ಪರಿ, ಅವುಗಳಿಂದ ಸೋರಿಕೆಯಾಗಿ ನೀರು ಸೇರುವ ಇಂಜಿನ್ ಆಯಿಲ್, ಡೀಸೆಲ್ನಿಂದುಂಟಾಗುವ ಮಾಲಿನ್ಯವನ್ನು ಅಸಹಾಯರಾಗಿ ನಿಂತು ನೋಡಿದ ನಾವು ನಮ್ಮ ಅನುಕೂಲಕ್ಕಾಗಿ ಪ್ರಕೃತಿ ಮಾಡಬೇಕಾದ ತ್ಯಾಗಕ್ಕೆ ಮರುಗಿದೆವು.

ಮರಗಳ್ಳರು, ಗಣಿಕೋರರು, ಅರಣ್ಯ ಒತ್ತುವರಿದಾರರು, ರೆಸಾರ್ಟ್ ಬಂಡವಾಳಿಗರು, ಭ್ರಷ್ಟ ಅಧಿಕಾರಿಗಳು, ಸಮಯ ಸಾಧಕ ರಾಜಕಾರಣಿಗಳು, ಒಟ್ಟಾಗಿ ಸೇರಿ ನಡೆಸಿರುವ ಲಾಬಿಗೆ ಸರ್ಕಾರ ಮಣಿದರೆ ಸಂತ್ರಸ್ಥರಾಗುವ ಜನತೆ ಅವರನ್ನು ಎಂದೂ ಕ್ಷಮಿಸಲಾರರು. ಜೈವಿಕ ಪರಿಸರ ಎಂದರೆ ಮೂಲಭೂತವಾಗಿ ಏನೆಂದೇ ತಿಳಿಯದವರು ವಾದ ಮಂಡಿಸುವುದನ್ನು ನೋಡಿದರೆ ನಾವು ಈ ಮಟ್ಟಿಗಿನ ಬೌದ್ಧಿಕ ಅರ್ಧಪತನ ಕಂಡಿದ್ದೇವೆಯೇ ಎಂದು ದಿಗ್ಭ್ರಮೆ ಉಂಟಾಗುತ್ತಿದೆ.
ಓಟು ಗಳಿಸಿ ಅಧಿಕಾರ ಪಡೆದಿದ್ದಾರೆ, ಪದವಿ ಗಳಿಸಿ ಕೆಲಸ ಪಡೆದು ಆಡಳಿತ ನಡೆಸುತಿದ್ದಾರೆ ಎಂಬ ಕಾರಣಕ್ಕೆ ರಾಜಕಾರಣಿಗಳ ಮುಂದೆ, ಅಧಿಕಾರಿಗಳ ಮುಂದೆ ಈ ನಾಡಿನ ಹಿತಚಿಂತಕರು ಅಂಗೈಯಷ್ಟು ಸ್ಪಷ್ಟವಾಗಿರುವ ಸತ್ಯವನ್ನು ಮನವರಿಕೆ ಮಾಡಿಕೊಡಲು ಕೈ ಮುಗಿದು ಪ್ರಾರ್ಥಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ ಅದು ನಮ್ಮೆಲ್ಲರಿಗೂ ನಾಚಿಕೆಯ ವಿಷಯ. ಹೊಟ್ಟೆಗೆ ಅನ್ನ ತಿನ್ನಿ ಎಂದು ಹೇಳುವುದಕ್ಕೂ ಕೈ ಜೋಡಿಸಿ ಬೇಡಬೇಕಾಗಿರುವುದು ಪರಿಸ್ಥಿತಿಯ ವ್ಯಂಗ್ಯ. ಮಲೆಕುಡಿಯರು, ಸಿದ್ದಿಯರನ್ನು ಮುಖ್ಯವಾಹಿನಿಗೆ ತರುತ್ತೇವೆಂದು ಬಂಬಡಾ ಬಾರಿಸುತ್ತಿರುವುದರ ಹಿಂದೆ ಇರುವ ಉದ್ದೇಶ ಎಂಥವರಿಗೂ ಅರ್ಥವಾಗುವಂಥದ್ದೇ. ಕಾಡುಜನರಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚುಮಾಡುತ್ತಿದ್ದೇವೆ ಎಂದು ಜಾಗಟೆ ಹೊಡೆಯುತ್ತಿರುವವರು ಈ ಎಲ್ಲಾ ಕಾರ್ಯಗಳನ್ನು ಅರಣ್ಯ ಲೂಟಿ ಹೊಡೆಯಲು ಮೂಲಸೌಕರ್ಯವನ್ನಾಗಿ ಹೊಂದಿಸಿಕೊಳ್ಳುತ್ತಿದ್ದಾರೆ ಅಷ್ಟೇ.
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

