
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಈ ಸಂಪನ್ಮೂಲಗಳು ಯಾರಿಗಾಗಿ…….???
ಹಣದಿಂದ ನಮಗೆ ಉಸಿರಾಡಲು ಗಾಳಿ, ಶುಭ್ರ ನೀರು, ಆರೋಗ್ಯಕರ ವಾತಾವರಣ ಸಿಗುವುದಿಲ್ಲ. ನಮಗೆ ನಮ್ಮ ಅರಣ್ಯ ಉಳಿಯಬೇಕು, ಹೆಚ್ಚು ವಿಸ್ತಾರವಾಗಿ ಬೆಳೆಯಬೇಕು ಮತ್ತು ಅದು ನೈಸರ್ಗಿಕವಾಗಿರಬೇಕು. ಅರಣ್ಯದೊಳಗೆ ಬದುಕುತ್ತಿರುವವರು ಈ ಮೂರನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿಯೊಡನೆ ಹೊಂದಿಕೊಂಡು ಜೀವಿಸಬೇಕು. ವನಮಹೋತ್ಸವದಂದು ಒಂದು ಗಿಡವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು, ಪೇಪರಿನಲ್ಲಿ ಹಾಕಿಸಿಕೊಳ್ಳುವುದೇ ಪರಿಸರ ರಕ್ಷಣೆ ಎಂದುಕೊಂಡಿರುವುದು ಹಾಸ್ಯಾಸ್ಪದ.
ರಾಜಕಾರಣಿ, ಅಧಿಕಾರಿಗಳು ಮತ್ತು ಬಂಡವಾಳಿಗರ ಒಳಒಪ್ಪಂದದ ಮಾಫಿಯಾವನ್ನು ಪ್ರತಿಭಟಿಸಿದವರನ್ನು ಯಾವುದಾದರೂ ಟೀಯೆ ಡೀಯೆ ಸೌಲಭ್ಯವಿರುವ ಕಮಿಟಿಗಳಿಗೆ ಹಾಕಿಕೊಂಡರೆ, ಸಮಾಜ ಸೇವಕರ ಕೋಟಾದಡಿ ಸೈಟು ನೀಡಿದರೆ, ಯಾವುದೋ ಕಾರಣದಲ್ಲಿ ವಿದೇಶ ಪ್ರವಾಸ ಕಳಿಸಿದರೆ, ಯಾರಿಗೋ ಸೇರಬೇಕಾಗಿದ್ದ ನಾಲ್ಕು ಸಪೋಟಾ ಗಿಡಗಳನ್ನು ಕೊಟ್ಟು ತಲೆ ಸವರಿದರೆ ಅಥವಾ ಇನ್ಯಾವುದೋ ಆಮಿಷ ಒಡ್ಡಿ ಬಾಯಿ ಮುಚ್ಚಿಸುವ ನಮ್ಮ ಈ ವ್ಯವಸ್ಥೆ ಜನಪರ ಚಳುವಳಿಗಳನ್ನು ಹಾದಿತಪ್ಪಿಸುವ ಕೆಲಸ ಮಾಡುತ್ತಿದೆ. ವೈಯಕ್ತಿಕ ಲಾಭದ ನಿರೀಕ್ಷೆಯಲ್ಲಿ ಹೋರಾಟಗಳ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ.
ಪಶ್ಚಿಮ ಘಟ್ಟಗಳ ಶೋಷಣೆಯೇ ಹಲವರ ಜೀವನಕ್ಕೆ ಆಧಾರವಾಗಿರುವುದು ವಿಪರ್ಯಾಸ. ಹಾಗಾಗಿ ಸುಲಭವಾಗಿ ಮತ್ತು ಸರಾಗವಾಗಿ ನಡೆಯುತ್ತಿರುವ ಈ ಲೂಟಿಯ ಜಾತ್ರೆಯನ್ನು ನಿಲ್ಲಿಸಲು ಯಾರೂ ಮುಂದಾಗುತ್ತಿಲ್ಲ. ಪ್ರತಿಯೊಬ್ಬರೂ ಈ ವ್ಯವಸ್ಥೆಯ ಲಾಭವನ್ನು ಒಂದಲ್ಲ ಒಂದು ರೀತಿಯಲ್ಲಿ ಪಡೆಯುತ್ತಿದ್ದಾರೆ ಇಲ್ಲವೇ ಪಡೆಯುವ ಹವಣಿಕೆಯಲ್ಲಿದ್ದಾರೆ. ಹಾಗಾಗಿ ಈ ಹಗಲು ದರೋಡೆಯನ್ನು ನಿಲ್ಲಿಸಲು ಯಾರೂ ಮುಂದಾಗುತಿಲ್ಲ. ಅನೂಚಾನವಾಗಿ ಸಿಗುತ್ತಿರುವ ಲಾಭವನ್ನು ಕಳೆದುಕೊಳ್ಳಲು ಯಾರು ಸಿದ್ಧರಿದ್ದಾರೆ ಹೇಳಿ? ತಮ್ಮ ಹಾಗೂ ತಮ್ಮವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅದರ ಮೂಲಕ ಆರ್ಥಿಕ ಹಾಗೂ ರಾಜಕೀಯ ಲಾಭಕ್ಕಾಗಿ ಹೊಂಚುಹಾಕುತ್ತಿರುವವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
ನಾವು ಸತ್ತ ಕೂಡಲೇ ಈ ಜಗತ್ತೇನೂ ನಿಂತು ಹೋಗುವುದಿಲ್ಲ. ನಮ್ಮ ಮುಂದಿನವರಿಗೂ ನಾವೀಗ ಅನುಭವಿಸುತ್ತಿರುವ ಸಕಲ ಜೈವಿಕ ಅನುಕೂಲಗಳ ಅಗತ್ಯವಿದೆ.
ಪಟ್ಟಭದ್ರರ ಎಲ್ಲಾ ರೀತಿಯ ವ್ಯವಹಾರಗಳಿಗೆ ಬಂಡವಾಳ ಹರಿದುಬರುತ್ತಿರುವುದು ಈ ಕಾಡುಗಳಿಂದ. ಇವರುಗಳ ಪಾರಂಪರಿಕ ದಂಧೆಗಳಿಗೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಆತಂಕದಲ್ಲಿದ್ದಾರೆ ಅಷ್ಟೆ. ಇವರ ಪಾರಂಪರಿಕ ಅವ್ಯವಹಾರಗಳನ್ನು ಉಳಿಸಿಕೊಳ್ಳಲು ಜನರಲ್ಲಿ ಇಲ್ಲಸಲ್ಲದ ಹಾಗೂ ಕಾಲ್ಪನಿಕ ಭಯವನ್ನು ಹುಟ್ಟುಹಾಕಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಲ್ಲಿರುವುದು ಸರಳವಾದ ವಿವೇಕದ ಪ್ರಶ್ನೆ.
ಸರ್ಕಾರಕ್ಕೆ ತನ್ನದೇ ಆದ ಪರಿಸರ ಕಾಳಜಿ ಇದ್ದಲ್ಲಿ, ಗೋಮಾಳ ಪ್ರದೇಶ, ಸಾರ್ವಜನಿಕ ಕೆರೆ ಹಾಗೂ ಸಮುದಾಯದ ಬಳಕೆಗಾಗಿ ಮೀಸಲಾಗಿದ್ದು ಈಗ ಖಾಸಗಿ ಸ್ವತ್ತಾಗಿರುವ ಒತ್ತುವರಿ ಪ್ರದೇಶಗಳನ್ನು ಸೂಕ್ತ ಕಾನೂನಿನ ಅನ್ವಯ ಭೂರಹಿತರಿಗೆ ಹಾಗೂ ಭೂಮಿ ಕಳೆದುಕೊಂಡ ಸಣ್ಣ ಹಿಡುವಳಿದಾರರಿಗೆ ಮರು ಹಂಚಿಕೆ ಮಾಡಲಿ. ಆಗಲಾದರೂ ಪರಿಸರ ಕಾಳಜಿಯ ಜೊತೆಜೊತೆಗೆ ಸಾಮಾಜಿಕ ನ್ಯಾಯವನ್ನೂ ಸಾಧಿಸಿದಂತಾಗುತ್ತದೆ.
ಪರಿಸರದ ಪರವಾಗಿ ಮಾತನಾಡುವವರೆಲ್ಲರೂ ಪ್ರಗತಿ ವಿರೋಧಿಗಳೆಂದು ಬಿಂಬಿಸುವ ಪ್ರಯತ್ನ ಎಲ್ಲೆಡೆಯೂ ನಡೆಯುತ್ತಿದೆ. ಪ್ರಗತಿಯೆಂದರೆ ಸಾರ್ವಜನಿಕ ಸಂಪನ್ಮೂಲಗಳನ್ನು ಕೆಲವೇ ಜನರ ಅಗತ್ಯಕ್ಕೆ ಬಳಸಿಕೊಳ್ಳುವುದೆಂದು ತಿಳಿದಿರುವವರಿಗೆ ಬುದ್ಧಿಹೇಳುವವರು ಯಾರು? ಗಣಿ, ಟಿಂಬರ್, ಒತ್ತುವರಿ, ರೆಸಾರ್ಟ್ ಹಾಗೂ ಗುತ್ತಿಗೆ ಲಾಬಿಗೆ ಪಾರಿಸರಿಕ ಹಿತಾಸಕ್ತಿಯನ್ನು ಅಡವಿಟ್ಟಿರುವವರು ನಾಳೆ ನಮ್ಮ ನಿಮ್ಮನ್ನು ಯಾರಿಗಾದರೂ ಮಾರುವುದಿಲ್ಲ ಎಂಬುದಕ್ಕೆ ಏನು ಖಾತ್ರಿ? ಸ್ವಯಂಸೇವಾ ಸಂಸ್ಥೆಗಳಿಗೆ ಸಾರ್ವಜನಿಕರ ಹಣವನ್ನು ಹಂಚಿ ಅವರ ಮೂಲಕ ತನಗೆ ಬೇಕಾದ ಹೇಳಿಕೆಗಳನ್ನು ಕೊಡಿಸುವ ಈ ವ್ಯವಸ್ಥೆ ನಮ್ಮ ಜೈವಿಕ ಪರಿಸರವನ್ನು ಪ್ರಾಮಾಣಿಕವಾಗಿ ಉಳಿಸುತ್ತದೆ ಎನ್ನುವ ಭರವಸೆ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿದೆ.
ಸರ್ಕಾರೀ ಯೋಜನೆಗಳ ನಿಜವಾದ ಫಲಾನುಭವಿ ಅಂತಿಮವಾಗಿ ಯಾರು? ಎಂಬುದನ್ನು ಪತ್ತೆ ಮಾಡಿದರೆ ಆಘಾತವಾಗದೇ ಇರದು. ಅತ್ಯಂತ ಮುಖ್ಯ ನಿರ್ಧಾರಗಳನ್ನು ಮತ್ತು ಸಮಸ್ಯೆಗಳನ್ನು ಜನರಿಂದ ದೂರವಿಟ್ಟು ಮುಚ್ಚಿಹಾಕುವ ಹುನ್ನಾರ ನಾಡಿಗೆ ಒಳಿತನ್ನು ಮಾಡುವುದಿಲ್ಲ. ನಮ್ಮ ನೈಸರ್ಗಿಕ ಕಾಡನ್ನು ಮೂಲಧನವನ್ನಾಗಿಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನಷ್ಟೇ ನಾವು ಬಳಸುವುದನ್ನು ಬಿಟ್ಟು ಮೂಲ ಬಂಡವಾಳವನ್ನೇ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಜೀವಮಂಡಲದ ಮೇಲೆ ದಬ್ಬಾಳಿಕೆ ನಡೆಸದಂತೆ ಬದುಕುವುದರಲ್ಲಿ ನಾಡಿನ ಘನತೆ-ಗೌರವ ಇದೆ. ಅನ್ಯಾಯ ಮಾಡುವವನಿಗಿಂತ, ನಡೆಯುತ್ತಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರುವವನು ಈ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ಇದು ಪರಿಸರ ಕಾಳಜಿಯಿರುವ ಹಲವರ ಅಭಿಪ್ರಾಯ.
-ಮುಂದುವರೆಯುವುದು