
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ತಪ್ಪಿದ ತಾಳ
ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ತೇಜಸ್ವಿಯವರು ಆ ದಿನವೇ ಪೇಪರ್ನಲ್ಲಿ ದುರಂತ ಸುದ್ದಿಯೊಂದರ ವಸ್ತುವಿಷಯವಾಗಬೇಕಿತ್ತು. ವಿಷಯ ಏನಂದ್ರೆ; ಆಗಷ್ಟೇ ಪ್ರತೀ ವರ್ಷದಂತೆ ಬೆಂಗಳೂರು-ಮಂಗಳೂರು ಹೈವೇ ದುರಸ್ಥಿಯಾಗಿತ್ತು. ರಸ್ತೆಯ ಬೃಹತ್ ತಿರುವುಗಳಿಗೆ ಬಟನ್ಗಳ ರೀತಿಯಲ್ಲಿ ಕಲ್ಲನ್ನು ಮೊಳೆ ಹೊಡೆದಂತೆ ಹೊಡೆದಿದ್ದರು. ರೋಡ್ಗ್ರಿಪ್ಪಿಗೆ ಅಂತ ಕಾಣಿಸುತ್ತೆ. ಖಾಲಿ ದೈತ್ಯಾಕಾರದ ಟ್ಯಾಂಕರ್ಗಳು ತಿರುವಿನಲ್ಲಿ ಯಮಧೂತದಂತೆ ವೇಗವಾಗಿ ಇಳಿಯುತ್ತಿದ್ದವು.
ರೈಲ್ವೆ ವ್ಯಾಗನ್ಗಳಂತೆ ನಿರಂತರವಾಗಿ ಒಂದರ ಹಿಂದೊಂದು ಎದೆ ನಡುಗಿಸುವಂತೆ ಭೋರ್ಗರೆಯುತ್ತಾ ಮುನ್ನುಗ್ಗುತ್ತಿದ್ದವು. ಸ್ಕೂಟರ್ನ್ನು ನಾನೇ ಓಡಿಸುತ್ತಿದ್ದೆ. ಒಂದು ತಿರುವಿನಲ್ಲಿ ಓ! ಹೋ ಹೋ ಹೋ! ಎನ್ನುವಷ್ಟರಲ್ಲಿ ರಸ್ತೆ ನಡುವೆ ಹಠಾತ್ತಾಗಿ ಸ್ಕೂಟರ್ ಅಡ್ಡ ಮಲಗಬೇಕೇ! ಎಂಭತ್ತು ಪ್ಲಸ್ ತೂಕದ ಆಸಾಮಿಗಳಿಬ್ಬರ ತೂಕ ತಾಳದೆ ಟೈರ್ ಠುಸ್ ಆಯ್ತೋ ಏನೋ.
ಎದುರಿನ ಟ್ಯಾಂಕರ್ಗಳು ಕ್ರೀ ಕ್ರೀ … ಎಂದು ಕ್ಷಣ ಮಾತ್ರದಲ್ಲಿ ರೈಲೇ ನಿಂತಂತೆ ನಿಂತವು.
‘ತೆಗೆದು ಬಿಡ್ತಿದ್ಯಲ್ಲಾ ಮಾರಾಯ ನೀನು. ನಿನಗೇನಾದ್ರೂ ಆಯ್ತಾ?’ ಎಂದರು.
ನಮ್ಮಿಬ್ಬರಲ್ಲಿ ಯಾರೂ ಬಿದ್ದಿರಲಿಲ್ಲ ಸ್ಕೂಟರ್ ಮಾತ್ರ ಬಿದ್ದಿತ್ತು. ಕಾಲುಕೊಟ್ಟು ಮಕಾಡೆಯಾಗದಂತೆ ಸಪೋರ್ಟ್ ಮಾಡಿಕೊಂಡಿದ್ದೆವು. ಟ್ಯಾಂಕರ್ವೊಂದು ನಮ್ಮಿಂದ ಐದು ಅಡಿ ದೂರದಲ್ಲಿ ಆತಂಕದಿಂದ ನಿಟ್ಟುಸಿರು ಬಿಡುತ್ತಾ ಬ್ರೇಕನ್ನು ತಳದವರೆಗೂ ಒತ್ತಿಸಿಕೊಂಡು ರಸ್ತೆ ಉಜ್ಜಿಕೊಂಡು ನಿಂತಿತ್ತು. ಆದದ್ದಿಷ್ಟೇ, ರಸ್ತೆ ತಿರುವಿನಲ್ಲಿ ಯಾವುದೋ ವಾಹನದಿಂದ ಇಂಜಿನ್ ಆಯಿಲ್ ಸುರಿದು ರಸ್ತೆಯೆಲ್ಲಾ ಗೋಕುಲಾಷ್ಠಮಿಯ ಅಡಿಕೆ ಕಂಬವಾಗಿತ್ತು.
ಮುಂದಿನ ಟೈರ್ ಹೇಗೋ ದಾಟಿದ್ದರೂ ಹಿಂದಿನ ಚಕ್ರದ ಮೇಲಿನ ತೂಕ ಹೆಚ್ಚಿದ್ದರಿಂದ ಒಂದು ಬದಿಗೆ ಸರಕ್ ಅಂತ ಜಾರಿ ನಮಗೆ ಪರಲೋಕದ ಪಾಸ್ಪೋರ್ಟ್ ಕೊಡಿಸುವುದರಲ್ಲಿತ್ತು. ಸುಧಾರಿಸಿಕೊಂಡು ಏನೂ ನಡೆದೇ ಇಲ್ಲವೆಂಬಂತೆ ಸೀದಾ ಮುಂದಕ್ಕೆ ಹೊರಟೆವು. ಟ್ಯಾಂಕರ್ ಡ್ರೈವರ್ಗಳು ನಮ್ಮನ್ನು ಓರೆಗಣ್ಣಿನಿಂದ ಇದ್ಯಾವ ಸೀಮೆಯವೋ ಎಂಬಂತೆ ನೋಡುತ್ತಿದ್ದರು.
ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತು ಫೋಟೋ ತೆಗೆಯುತ್ತಾ, ಹೊಳೆಯಲ್ಲಿ ವಾಹನ ತೊಳೆಯುವ ಚಾಲಕರನ್ನು ತೆಗಳುತ್ತಾ ರಸ್ತೆ ಬದಿ ಕಸ ರಾಶಿ ಹಾಕಿದ್ದ ಆಸ್ಪತ್ರೆಯವರು, ಮುನ್ಸಿಪಾಲಿಟಿಯವರನ್ನು ಶಪಿಸುತ್ತಾ ಇದನ್ನೆಲ್ಲಾ ಹೇಗೆ? ಎಲ್ಲಿಂದ? ಯಾವ ರೀತಿ? ಯಾರು ರಿಪೇರಿ ಮಾಡುವುದು ಎಂದು ವ್ಯವಸ್ಥೆಯ ವಿರುದ್ಧ ತಮ್ಮ ಅಸಹನೆಯನ್ನು ಪ್ರಕಟಿಸಿದರು.
“ನಿಮ್ಮಂತ ಹುಡುಗರು ತ್ಯಾಪೇದಾರಿಯನ್ನೆಲ್ಲಾ ಬಿಟ್ಟು ಗುದ್ದಾಡಬೇಕಯ್ಯಾ, ಹಲ್ಕಾಗಳ ಹಲಾಲುಕೋರತನಗಳಿಗಿಂತ ಸಾಮಾನ್ಯರ ಕೈಲಾಗದತನ ಹೆಚ್ಚು ಅಪಾಯಕಾರಿ ಕಣಯ್ಯ, ಯೋಗ್ಯರು, ಅರ್ಹರು, ಹುಮ್ಮಸ್ಸಿರುವವರು ನಮಗ್ಯಾಕೆ ಈ ಉಸಾಬರಿ ಎಂದು ಹೊಟ್ಟೆಪಾಡನ್ನೇ ನೋಡಿಕೊಳ್ತಾ ಕೂತ್ರೆ ಅಯೋಗ್ಯರು, ಸಮಯಸಾಧಕರು, ಗೂಂಡಾಗಳು, ಅಧಿಕಾರಕ್ಕೆ ಬಾಯಿ ಬಿಡುವ ನಾಯಿಗಳಂತವರು ವಕ್ಕರಿಸಿಕೊಂಡು ಬಿಡ್ತಾರೆ. ಮೂಡಿಗೆರೆ ಪರಿಸ್ಥಿತಿ ಏನಾಗ್ತಿದೆ ನೋಡಿದೀಯ. ರಸ್ತೆ ಬದಿಯಲ್ಲೇ ಗ್ಯಾರೇಜಿನ ಗಲೀಜು, ಊರಿನ ಕಸ, ಹೇಲು-ಹೆಮ್ಮಣ್ಣನ್ನೆಲ್ಲಾ ಸ್ವಾಗತ ಮಾಡಲು ಹಾಕಿರ್ತಾರೆ. ಹೊಟ್ಟೆಗೆ ಅನ್ನ ತಿನ್ನೋರು ಮಾಡೋ ಕೆಲ್ಸಾನ ಅದು?”.
ಹೆದ್ದಾರಿ ಬಿಟ್ಟು ಆನೆಮಹಲ್ನ ಬಳಿ ಮೂಡಿಗೆರೆ ರಸ್ತೆಯನ್ನು ಸೇರಿಕೊಂಡು ಮುಂದೆ ಬರುವಾಗ ಬೆಳ್ಳೆಕೆರೆ ಬಳಿಯ ಕೆಂಪು ಮಣ್ಣಿನ ಬಗ್ಗೆ ವಿವರವಾಗಿ ಮಾತನಾಡಿದರು. ಹಾಗೆಯೇ ರಕ್ಷಿದ್ದಿಯಲ್ಲಿರುವ ಜೈ ಕರ್ನಾಟಕ ಸಂಘದವರ ನಾಟಕ ಪ್ರಯೋಗಗಳನ್ನು ತಿಳಿಸಿ, ‘ರಂಗಪ್ರಯೋಗ ಚೆನ್ನಾಗಿ ಮಾಡ್ತಾರೆ ಕಣಯ್ಯಾ, ಯಾವಾಗಾದ್ರೂ ಮೂಡಿಗೆರೆಗೆ ಕರೆಸಿ ನಾಟಕ ಮಾಡಿಸ್ರಯ್ಯ, ನಮ್ಮ ನೇಚರ್ ಕ್ಲಬ್ನಿಂದಲೇ ಮಾಡಿಸೋಣ ಬಿಡುʼ ಎಂದರು.
ಅದಾದ ಮೂರು ತಿಂಗಳಲ್ಲೇ `ಅರಹಂತ’ ಎಂಬ ಅದ್ಭುತವಾದ ನಾಟಕವನ್ನು ಮೂಡಿಗೆರೆಯ ರಂಗಮಂದಿರಲ್ಲಿ ಮಾಡಿಸಿದೆವು. ನನಗೆ ತಿಳಿದಂತೆ ಯಾವ ನಾಟಕವನ್ನೂ ಪೂರ್ಣವಾಗಿ ಕುಳಿತು ನೋಡದ ತೇಜಸ್ವಿ ಅರಹಂತವನ್ನು ಸಂಪೂರ್ಣವಾಗಿ ಕೊನೆವರೆಗೂ ನೋಡಿದ್ದಲ್ಲದೆ ಕಲಾವಿದರಿಗೆ, ನಿರ್ದೇಶಕರಾದ ಪ್ರಸಾದ್ಗೆ ಕೆಲ ಕಿವಿಮಾತುಗಳನ್ನೂ ಹೇಳಿ ಹುರಿದುಂಬಿಸಿದರು.
ಎರಡು ವರ್ಷದ ನಂತರ ಅದೇ ತಂಡದವರನ್ನು ನಾವೇ ಮತ್ತೊಮ್ಮೆ ಕರೆಸಿದಾಗ ಪ್ರದರ್ಶಿಸಿದ ಕುವೆಂಪು ವಿರಚಿತ `ಧನ್ವಂತರಿ ಚಿಕಿತ್ಸೆ’ ನಾಟಕವನ್ನು ಅದೇ ತೇಜಸ್ವಿ ಪೂರ್ತಿಯಾಗಿ ನೋಡಲಿಲ್ಲ. ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೋ ಎಂಬ ಅಭಿಪ್ರಾಯವನ್ನು ಮುಲಾಜಿಲ್ಲದೆ ವ್ಯಕ್ತಪಡಿಸಿದರು.
- ಮುಂದುವರೆಯುವುದು….
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946