
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಜಾಕ್ಪಾಟ್
ಹಾಗೆಯೇ ಮುಂದೆ ಮೂಡಿಗೆರೆ ಕಡೆ ಹೊರಟಿದ್ದ ನಮಗೆ ಹಾನುಬಾಳು ಸಮೀಪಿಸುತ್ತಿದ್ದಂತೆ ನೂರಾರು ಕಾರುಗಳನ್ನು ರಸ್ತೆ ಬದಿ ಪಾರ್ಕ್ ಮಾಡಿದ್ದು ಕಾಣಿಸಿತು. ಶುಭ ಸಮಾರಂಭದ ಗೌಜು ಗದ್ದಲಗಳೇನೂ ಕಾಣಿಸಲಿಲ್ಲ. “ಯಾರಾದ್ರೂ ದೊಡ್ಡಮನುಷ್ಯ ಏನಾದ್ರೂ ಸತ್ತೋಗಿದರೇನಯ್ಯಾ? ಇಷ್ಟೊಂದು ಕಾರ್ಗಳು, ಅರೆರೇ ಕೆಲವು ನಾವು ನೋಡದೇ ಇರೋ ಹೊಸ ಮಾಡಲ್ನವೂ ಇದಾವೆ ಮಾರಾಯ. ಏನರ್ಬೋದು ಹೇಳು” ಎಂದರು. ಹಾನುಬಾಳಿನಲ್ಲಿ ಸ್ಕೂಟರ್ ನಿಲ್ಲಿಸಿ ಜೀಪ್ ಡ್ರೈವರ್ನೊಬ್ಬನನ್ನು ಕೇಳಿದೆವು.
‘ಓ ಅದಾ ಸಾರ್,
ಜಾಕ್ಪಾಟ್,
ಹಾನ್ಬಾಳ್ ಜಾಕ್ಪಾಟ್ ಗೊತ್ತಿಲ್ವಾ ನಿಮಗೆ? ಎರಡು ದಿನದಿಂದ ಹೀಗೇನೇ. ಪ್ರತೀವರ್ಷ ನಡೆಯುತ್ತೆ ಸಾರ್’’ ಎಂದ.
ತೇಜಸ್ವಿಯವರಿಗೆ ಒಂದು ರೀತಿಯ ಸೋಜಿಗವೆನಿಸಿತು. ಸೀದಾ ಮೂಡಿಗೆರೆ ಕಡೆಗೆ ಹೊರಟ ನಾವು ಹೆಚ್. ಪಿ. ಸಿ. ಎಲ್. ಪೈಪ್ಲೈನ್ ವಿಚಾರವಾಗಿ ಮಾತನಾಡಿದೆವು.
ನನಗನ್ನಿಸಿತು.
ಈ ತೇಜಸ್ವಿಯವರಿಗೆ ಗೊತ್ತಿಲ್ಲದ ವಿಚಾರವೇ ಇಲ್ಲವಲ್ಲ. ಯಾವುದೇ ವಿಚಾರವನ್ನು ಅದ್ಭುತವಾಗಿ, ಅಥಾರಿಟೇಟಿವ್ ಆಗಿ ಅವಲೋಕಿಸಿಬಿಡುತ್ತಿದ್ದರು. ಇದ್ದಕ್ಕಿದ್ದಂತೆ ಜನ್ನಾಪುರ ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿದರು. “ಅಲ್ಲಾ ಕಣಯ್ಯಾ ಸಾಲ ಮನ್ನಾಮಾಡಿ, ಬಡ್ಡಿ ರಿಯಾಯ್ತಿ ಕೊಡಿ, ಪ್ರಾಣ ಹೋಗ್ತಿದೆ, ಸತ್ತೇ ಹೋಗ್ತೀವಿ ಅಂತೆಲ್ಲಾ ಬಂಬ್ಡಾ ಬಾರಿಸ್ತಿದ್ದಾರಲ್ಲಾ ಈ ಪ್ಲಾಂಟರ್ಗಳು ಇಷ್ಟು ದುಬಾರಿ ಕಾರುಗಳನ್ನು ಹೇಗಯ್ಯಾ ಕೊಂಡುಕೊಳ್ತಾರೆ? ಸಾವಿರಾರು ಕಟ್ಟಿ ದಿನಗಟ್ಟಲೆ ಕುಳಿತುಕೊಂಡು ಜುಗಾರಿ ಆಡ್ತಾರಲ್ಲಾ ಆಗ ಇವರಿಗೆ ಸಾಲ ಇರಲ್ವಾ? ಸಾಲ ಮನ್ನಾ ಮಾಡಿ ಅಂತ ಕೇಳ್ತಾರಲ್ಲಾ ಇವರು. ಥು ಥೂ ನಾನು ಇವರಿಗೋಸ್ಕರ ಎಫ್.ಎಸ್.ಕ್ಯೂ. ಅಂತ ಬಡ್ಕೊಂಡ್ನಲ್ಲಯ್ಯ. ದುಡ್ಡು ಹೆಚ್ಚಾದ್ಮೇಲೆ ಈ ತರದ ಯಡವಟ್ಟುಗಳೇ ಆಗೋದು. ಇವರುಗಳ ಮದ್ವೆ ನೋಡಿದಿಯೇನಯ್ಯಾ? ಹೋದೋರಿಗೇ ಮುಜುಗರವಾಗ್ಬೇಕು. ಯಾರನ್ನ ಮೆಚ್ಚಿಸೋಕೆ ಆ ರೀತಿ ದುಂದು ಮಾಡ್ತಾರೋ ಏನೋ. ಅದ್ಕೇನೇ ನಾನು ಯಾರ ಮದ್ವೆಗಳಿಗೂ ತಲೆ ಹಾಕೋಲ್ಲ. ನಿಂದೊದು ಇದೆಯಲ್ಲಾ ಹ್ಯಾಗಾಗ್ತೀಯ ನೋಡ್ತಿನಿ ಇರು.” ಎಂದು ನನ್ನನ್ನೇ ನಿಟ್ಟಿಸಿದರು. “ಈ ಸರಳ ವಿವಾಹ, ಮಂತ್ರ ಮಾಂಗಲ್ಯ, ಅಂತರ್ಜಾತಿಯ ವಿವಾಹ ಇವೆಲ್ಲ ಯಾಕೆ ಎಲ್ಲಾ ವರ್ಗದ ಜನರಿಗೆ ತಲುಪ್ತಾ ಇಲ್ಲ ಅನ್ನೋದೇ ನನಗೆ ಅರ್ಥ ಆಗ್ತಿಲ್ಲ.”
ಅಂತರ್ಜಾತೀಯ ವಿವಾಹ ಮತ್ತು ಪ್ರೇಮ ವಿವಾಹಗಳ ಸಾಕಾರಕ್ಕಾಗಿ ತೇಜಸ್ವಿ ಮತ್ತವರ ಗೆಳೆಯರು ಮುಂದಾದಾಗ ಒಲವಿನ ಮದುವೆ ಹಾಗೂ ಪ್ರೇಮಸೇನೆ ಮುಂತಾದ ಪ್ರಗತಿಪರ ಕೆಲಸಗಳ ಮೂಲಕ ಮನೆಮತಾಗಿದ್ದ ಬಿ. ಕೃಷ್ಣಪ್ಪನವರೂ ಕೈ ಜೋಡಿಸಿದ್ದು ಆ ಚಳುವಳಿಗೆ ವಿಶೇಷ ಬಲವನ್ನು ನೀಡಿತು. “ವರದಕ್ಷಿಣೆ ಇಲ್ಲದೇ, ದುಂದು ವೆಚ್ಚವಿಲ್ಲದೇ, ಮಂತ್ರಮಾಂಗಲ್ಯ ಮಾದರಿಯಲ್ಲಿ ಕನಿಷ್ಠ ನೂರು ಮದುವೆಯನ್ನಾದರೂ ಮಾಡಿಸಲಾಗಲಿಲ್ಲವಲ್ಲ ನಮಗೆ, ನಮ್ಮೆಲ್ಲಾ ಪ್ರಯತ್ನಗಳೂ ವೇಸ್ಟ್ ಆದ್ವಲ್ಲ’ ಎಂದು ವಿಷಾದದ ಹತಾಶೆಯನ್ನು ವ್ಯಕ್ತಪಡಿಸಿದ್ದರು ತೇಜಸ್ವಿ.
ಆದರ್ಶಗಳು, ಸಂಕಲ್ಪಗಳು , ಪ್ರತಿಜ್ಞಾವಿಧಿಗಳು ಆಯಾ ದಿನಗಳ ಲೋಕಾಭಿರಾಮ ಮಾತುಗಳಿಗೆ, ಪತ್ರಿಕಾ ಹೇಳಿಕೆಗಳಿಗೆ, ವೇದಿಕೆಯ ಭಾಷಣಗಳಿಗೇ ಸೀಮಿತವಾದದ್ದನ್ನು ಹಾಗೂ ಯುವ ಸಮೂಹ ಹೊಸಾ ಆಲೋಚನೆಗಳಿಗೆ ತೆರೆದುಕೊಳ್ಳದ್ದು ತಮ್ಮ ಪ್ರಗತಿಪರ ಹೋರಾಟಕ್ಕೆ ಆದ ಹಿನ್ನೆಡೆಯೆಂದೇ ಭಾವಿಸಿದ್ದರು. ಯಾವುದೇ ಹೋರಾಟದಲ್ಲಿ ಸೋಲು-ಗೆಲುವು ಎನ್ನುವುದು ಮುಖ್ಯವಲ್ಲ. ನಡೆಯುತ್ತಿರುವ ಹಾದಿಯಲ್ಲಿನ ಮೌಲ್ಯಗಳಿಗೆ ನಾವೆಷ್ಟರ ಮಟ್ಟಿಗಿನ ಬದ್ಧತೆಹೊಂದಿದ್ದೇವೆ ಎಂಬುದೇ ಮುಖ್ಯ. ವಿರೋಧ, ಪ್ರತಿಭಟನೆ, ಬೇಡಿಕೆ, ಬದಲಾವಣೆಗೆ ಆಗ್ರಹಗಳೇ ನವ ಸಮಾಜದ ನಿರ್ಮಾಣಕ್ಕೆ ಮೂಲಸೆಲೆಯಾಗಿರುತ್ತದೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದದ್ದು ನಾಳೆ ಬೆಳಿಗ್ಗೆಯೇ ಒಮ್ಮಿಂದೊಮ್ಮೆಗೆ ನಿಂತು ಹೋಗಿ ಹೊಸ ಅಧ್ಯಾಯ ಪ್ರಾರಂಭವಾಗುವುದಿಲ್ಲ. ಅದೊಂದು ನಿಧಾನವಾದ ಸೆನ್ಸಿಬಲ್ ಆದ ಸ್ಥಿತ್ಯಂತರವಾಗಿರುತ್ತದೆ.
ಯಾವುದರಿಂದಲಾದರೂ ಜಾತಿ ವ್ಯವಸ್ಥೆ ಕೊಚ್ಚಿಕೊಂಡು ಹೋದರೆ ಸಾಕಪ್ಪಾ ಎಂದು ಹಾತೊರೆಯುತ್ತಿದ್ದ ತೇಜಸ್ವಿ ಮೂಡಿಗೆರೆಯಂತಹ ಚಿಕ್ಕ ಪಟ್ಟಣದಲ್ಲೂ ಅಂತರ್ಜಾತಿಯ ವಿವಾಹಗಳಿಗೆ ಪ್ರೋತ್ಸಾಹಿಸಿ ಬಹಳ ಹಿಂದೆಯೇ ಮಾತನಾಡಿದ್ದರು. ಹಾಗೆಯೇ ಅಂತರ್ಜಾತಿ ವಿವಾಹವಾದವರಿಗೆೆ ಸರ್ಕಾರದಿಂದ ಮೀಸಲಾತಿ ಸೌಲಭ್ಯಕ್ಕಾಗಿ ಒತ್ತಾಯಿಸಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು.
- ಮುಂದುವರೆಯುವುದು….
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946